ADVERTISEMENT

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಸ್ಫೂರ್ತಿ ಗೀತೆ ಘೋಷಿಸಿ: ಮನು ಬಳಿಗಾರ್

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮನು ಬಳಿಗಾರ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2024, 16:33 IST
Last Updated 27 ಡಿಸೆಂಬರ್ 2024, 16:33 IST
ಕಾರ್ಯಕ್ರಮದಲ್ಲಿ ಹುಯಿಲಗೋಳ ನಾರಾಯಣರಾಯರ ಅವರ ಮೊಮ್ಮಗಳು ರಾಧಾ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಮನು ಬಳಿಗಾರ್, ಚಂದ್ರಶೇಖರ ನಾದೂರ, ರಾ.ನಂ. ಚಂದ್ರಶೇಖರ, ವ.ಚ. ಚನ್ನೇಗೌಡ, ಆನಂದ ಮಾದಲಗೆರೆ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಹುಯಿಲಗೋಳ ನಾರಾಯಣರಾಯರ ಅವರ ಮೊಮ್ಮಗಳು ರಾಧಾ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಮನು ಬಳಿಗಾರ್, ಚಂದ್ರಶೇಖರ ನಾದೂರ, ರಾ.ನಂ. ಚಂದ್ರಶೇಖರ, ವ.ಚ. ಚನ್ನೇಗೌಡ, ಆನಂದ ಮಾದಲಗೆರೆ ಉಪಸ್ಥಿತರಿದ್ದರು   

ಬೆಂಗಳೂರು: ‘ಹುಯಿಲಗೋಳ ನಾರಾಯಣರಾಯರು ರಚಿಸಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ರಾಜ್ಯ ಸರ್ಕಾರವು ಸ್ಫೂರ್ತಿ ಗೀತೆಯೆಂದು ಘೋಷಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮನು ಬಳಿಗಾರ್ ಆಗ್ರಹಿಸಿದರು. 

ಕರ್ನಾಟಕ ವಿಕಾಸರಂಗ ಹಾಗೂ ಕನ್ನಡ ಗೆಳೆಯರ ಬಳಗವು ಜಂಟಿಯಾಗಿ ‘ಕನ್ನಡ ಬಾವುಟ ಹಾರಿಸಿದವರು ನೆನಪಿನ ಮಾಲೆ–21’ರ ಸರಣಿಯಡಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು 100’ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. 

‘1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತ ಗೀತೆಯಾಗಿ ಹಾಡಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆ, ಆಗಿನ ಮರಾಠಿ ವಾತಾವರಣದಲ್ಲಿ ಕನ್ನಡತನವನ್ನು ಬಡಿದೆಬ್ಬಿಸಲು ಸ್ಫೂರ್ತಿಯಾಯಿತು. ಇಂದಿಗೂ ಕನ್ನಡಿಗರ ನಡುವೆ ಈ ಗೀತೆ ಸ್ವಾಭಿಮಾನದ ಪ್ರತೀಕವಾಗಿದೆ. ಈ ಗೀತೆಯನ್ನು ‘ವಂದೇ ಮಾತರಂ’ ಗೀತೆ ಮಾದರಿಯಲ್ಲಿ ಸ್ಫೂರ್ತಿ ಗೀತೆಯಾಗಿ ಘೋಷಿಸಬೇಕು’ ಎಂದು ಒತ್ತಾಯಿಸಿದರು. 

ADVERTISEMENT

ಹುಯಿಲಗೋಳರ ಬಗ್ಗೆ ಉಪನ್ಯಾಸ ನೀಡಿದ ಸಾಹಿತಿ ಚಂದ್ರಶೇಖರ ನಾದೂರ, ‘ದ.ರಾ. ಬೇಂದ್ರೆ ಅವರ ಗುರುಗಳಾಗಿದ್ದ ನಾರಾಯಣರಾಯರು, ನವೋದಯ ಕಾಲದ ಯುವ ಸಾಹಿತಿಗಳಿಗೆ ಸ್ಫೂರ್ತಿಯಾಗಿದ್ದರು. ಅವರು ಈ ಗೀತೆಯಲ್ಲದೆ ಹಲವು ನಾಟಕಗಳು, ಕೀರ್ತನೆಗಳು, ಕಾದಂಬರಿಗಳನ್ನು ಬರೆದಿದ್ದಾರೆ’ ಎಂದರು.

ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ, ‘ಕರ್ನಾಟಕ ಏಕೀಕರಣ ಹೋರಾಟದ ಜಾಗೃತಿಗೆ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯು ಮೂಲ ಮಂತ್ರವಾಗಿ ಹೊಸ ಆಯಾಮ ನೀಡಿತು. ಈ ಗೀತೆಯ ಶತಮಾನೋತ್ಸವವನ್ನು ರಾಜ್ಯ ಸರ್ಕಾರ ಆಚರಿಸಿ, ಎಲ್ಲ ಶಾಲೆ, ಸರ್ಕಾರಿ ಕಚೇರಿಗಳಲ್ಲಿ ಒಂದು ನಿಗದಿತ ದಿನ ಈ ಹಾಡನ್ನು ಹಾಡುವ ಮೂಲಕ ಗೌರವ ಸಲ್ಲಿಸಬೇಕು’ ಎಂದು ಹೇಳಿದರು.

ಹುಯಿಲಗೋಳ ನಾರಾಯಣರಾಯರ ಮೊಮ್ಮಗಳು ರಾಧಾ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ಗಾಯಕ ಆನಂದ ಮಾದಲಗೆರೆ ಹಾಡಿದರು. ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ಉಪಸ್ಥಿತರಿದ್ದರು. 

ಕಾರ್ಯಕ್ರಮಕ್ಕೂ ಮೊದಲು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.