ಬೆಂಗಳೂರು: ಸಹ ನಟಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಂಧಿತರಾಗಿರುವ ನಟ ಮಡೆನೂರು ಮನು ಅವರನ್ನು ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.
ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಆರೋಪಿಯನ್ನು ಗುರುವಾರ ಬಂಧಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಬಳಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರ ಎದುರು ಆರೋಪಿಯನ್ನು ಹಾಜರುಪಡಿಸಿ, ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.
ಬಳಿಕ ಪೊಲೀಸರು, ಆರೋಪಿಯನ್ನು ಶಿಕಾರಿಪುರ ಹಾಗೂ ನಾಗರಬಾವಿಯ ಮನೆಗಳಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದರು.
ಮೊಬೈಲ್ ವಶ:
ನಟನ ಮೊಬೈಲ್ ವಶಪಡಿಸಿಕೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇಬ್ಬರ ನಡುವೆ ಮೊಬೈಲ್‌ನಲ್ಲಿ ವಿನಿಮಯವಾಗಿರುವ ಸಂದೇಶಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕರೆಗಳ ರೆಕಾರ್ಡ್ ಹಾಗೂ ಇತರೆ ಮಾಹಿತಿಗಳ ಸಂಗ್ರಹಕ್ಕೆ ಪ್ರಯತ್ನ ಆರಂಭಿಸಿದ್ದಾರೆ.
ಮೊಬೈಲ್ ಪರಿಶೀಲನೆ ವೇಳೆ ವಿಡಿಯೊಗಳು ಹಾಗೂ ಫೋಟೊಗಳು ಲಭ್ಯವಾಗಿಲ್ಲ. ಒಂದು ವೇಳೆ ಆರೋಪಿ ವಿಡಿಯೊಗಳನ್ನು ಅಳಿಸಿ ಹಾಕಿದ್ದರೆ, ಅವುಗಳನ್ನು ಮರುಸಂಗ್ರಹ ಮಾಡಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂತ್ರಸ್ತೆ ಹೇಳಿಕೆ ದಾಖಲು:
ಸಂತ್ರಸ್ತೆ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆರೋಪಕ್ಕೆ ಸಂಬಂಧಿಸಿದಂತೆ ಕೆಲವೊಂದು ದಾಖಲೆಗಳನ್ನು ಕೇಳಿದ್ದಾರೆ.
ಬಳಿಕ ಮಾತನಾಡಿದ ಸಂತ್ರಸ್ತೆ, ‘ಸಿನಿಮಾ ವಿಚಾರಕ್ಕೂ ದೂರಿಗೂ ಸಂಬಂಧ ಇಲ್ಲ. ಚಿತ್ರ ತಂಡದವರು ದೂರು ಕೊಡದಂತೆ ಮನವಿ ಮಾಡಿದರು. ಆದರೆ, ಮನು ಕೊಟ್ಟಿರುವ ಹಿಂಸೆಯಿಂದ ದೂರು ನೀಡಿದ್ದೇನೆ’ ಎಂದು ಹೇಳಿದ್ದಾರೆ.
ಸಂತ್ರಸ್ತೆ ಮತ್ತೊಬ್ಬ ನಟರೊಬ್ಬರ ಬಗ್ಗೆ ಮಾತನಾಡಿರುವ ಆಡಿಯೊ ಜಾಲತಾಣದಲ್ಲಿ ಹರಿದಾಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂತ್ರಸ್ತೆ, ‘ಆಡಿಯೊದಲ್ಲಿ ಮಾತನಾಡಿರುವುದು ನಿಜವಲ್ಲ, ಮನು ಹೇಳಿದ ಕಾರಣ ಆ ರೀತಿ ಮಾಡಬೇಕಾಯಿತು. ಮನು ಎಂದರೆ ಜೀವ ಬಿಡುತ್ತಿದ್ದೆ. ಹಾಗಾಗಿ ಆ ನಟರ ನಿವಾಸಕ್ಕೆ ತೆರಳಿ ಕ್ಷಮೆ ಕೇಳಿದ್ದೇನೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.