ADVERTISEMENT

₹22 ಲಕ್ಷ ಕಿತ್ತ ‘ವೆಬ್‌ಸೈಟ್‌ ವರರು’

ಮದುವೆ ಆಗುವುದಾಗಿ ನಂಬಿಸಿ ಕೃತ್ಯ * ಯುವತಿಯರಿಂದ ಸೈಬರ್‌ ಕ್ರೈಂ ಠಾಣೆಗೆ ದೂರು

ಸಂತೋಷ ಜಿಗಳಿಕೊಪ್ಪ
Published 7 ಅಕ್ಟೋಬರ್ 2018, 23:30 IST
Last Updated 7 ಅಕ್ಟೋಬರ್ 2018, 23:30 IST
   

ಬೆಂಗಳೂರು: ವೈವಾಹಿಕ ಜಾಲತಾಣದ ಮೂಲಕ ನಗರದ ಯುವತಿಯರಿಬ್ಬರನ್ನು ಪರಿಚಯಿಸಿಕೊಂಡ ರಿಶಿ ಕುಮಾರ್ ಹಾಗೂ ಅಮೀರ್ ಅಜೀಮ್ ಎಂಬುವರು, ಮದುವೆ ಆಗುವುದಾಗಿ ನಂಬಿಸಿ ಅವರಿಬ್ಬರಿಂದ ₹22 ಲಕ್ಷವನ್ನು ತಮ್ಮ ಬ್ಯಾಂಕ್‌ ಖಾತೆಗಳಿಗೆ ಹಾಕಿಸಿಕೊಂಡು ವಂಚಿಸಿದ್ದಾರೆ.

ವಂಚನೆಗೀಡಾದ ಭಾರ್ಗವಿ ಹಾಗೂ ಶಹನಾಜ್ ಎಂಬುವರುನಗರದ ಸೈಬರ್ ಕ್ರೈಂ ಠಾಣೆಗೆ ಪ್ರತ್ಯೇಕವಾಗಿ ದೂರು ಕೊಟ್ಟಿದ್ದಾರೆ. ಜೀವನ್‌ಸಾಥಿ.ಕಾಮ್ ಜಾಲತಾಣದ ಪ್ರತಿನಿಧಿಗಳಿಗೆ ನೋಟಿಸ್‌ ನೀಡಿರುವ ಪೊಲೀಸರು, ಆರೋಪಿಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ತಾಯಿಗೆ ಕ್ಯಾನ್ಸರೆಂದು ₹10 ಲಕ್ಷ ಕಿತ್ತ; ‘ನಾಗವಾರದಲ್ಲಿ ವಾಸವಿರುವ 29 ವರ್ಷದ ಭಾರ್ಗವಿ, ವರನನ್ನು ಹುಡುಕಲು ‘ಜೀವನ್ ಸಾಥಿ.ಕಾಮ್’ ಜಾಲತಾಣದಲ್ಲಿ ಖಾತೆ ತೆರೆದಿದ್ದರು. ಆರೋಪಿ ರಿಶಿ ಕುಮಾರ್‌ಗೆ ರಿಕ್ವೆಸ್ಟ್‌ ಕಳುಹಿಸಿದ್ದರು. 2017ರ ಡಿಸೆಂಬರ್ 1ರಂದು ಅದನ್ನು ಸ್ವೀಕರಿಸಿದ್ದ ಆರೋಪಿ, ಮದುವೆ ಆಗಲು ಸಿದ್ಧವಿರುವುದಾಗಿ ಹೇಳಿದ್ದ. ಜಾಲತಾಣದಲ್ಲೇ ಚಾಟಿಂಗ್‌ ಮಾಡುತ್ತಿದ್ದ ಆರೋಪಿ, ನಂತರ ಮೊಬೈಲ್‌ನಲ್ಲೂ ಮಾತನಾಡಲಾರಂಭಿಸಿದ್ದ. ತಾನೊಬ್ಬ ಎಂಜಿನಿಯರ್‌ ಎಂದು ಹೇಳಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಇತ್ತೀಚೆಗೆ ಯುವತಿಗೆ ಕರೆ ಮಾಡಿದ್ದ ಆರೋಪಿ, ‘ನನ್ನ ತಾಯಿಗೆ ಹುಷಾರಿಲ್ಲ. ಕ್ಯಾನ್ಸರ್ ಆಗಿದೆ. ನನಗೂ ಬ್ರೈನ್ ಟ್ಯೂಮರ್‌ ಇದೆ. ನಾವಿಬ್ಬರೂ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಿದ್ದು, ಲಕ್ಷಾಂತರ ರೂಪಾಯಿ ಖರ್ಚಾಗಲಿದೆ. ಅಷ್ಟು ಹಣ ನನ್ನ ಬಳಿ ಇಲ್ಲ. ನೀನು ಹಣ ಕೊಟ್ಟರೆ ಪುಣ್ಯ ಬರುತ್ತದೆ. ಮದುವೆ ಆಗುತ್ತಿದ್ದಂತೆ ಹಣ ವಾಪಸ್‌ ಕೊಡುತ್ತೇನೆ’ ಎಂದು ಹೇಳಿದ್ದ’

‘ಆರೋಪಿಯ ಮಾತು ನಂಬಿದ್ದ ಯುವತಿ, ಆತ ಸೂಚಿಸಿದ್ದ ಎಸ್‌ಬಿಐ ಹಾಗೂ ಐಸಿಐಸಿಐ ಬ್ಯಾಂಕ್‌ ಶಾಖೆಗಳ ಖಾತೆಗಳಿಗೆ ಹಂತ ಹಂತವಾಗಿ ₹10 ಲಕ್ಷ ಜಮೆ ಮಾಡಿದ್ದರು. ಅದಾದ ನಂತರ, ಆರೋಪಿ ತನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆಂದು ವಂಚನೆ: ‘ಅಮೀರ್ ಅಜೀಮ್ ವಿರುದ್ಧ ದೂರು ನೀಡಿರುವ 31 ವರ್ಷದ ಶಹನಾಜ್, ಸಂಜಯನಗರದ ನಿವಾಸಿ. ಅವರಿಗೆ, ಜೀವನ್‌ಸಾಥಿ.ಕಾಮ್ ಜಾಲತಾಣದ ಮೂಲಕ ಜುಲೈ 23ರಂದು ಅಮೀರ್‌ನ ಪರಿಚಯವಾಗಿತ್ತು. ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಪರಸ್ಪರ ಮಾತನಾಡಲಾರಂಭಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ತಾನು ಅಮೆರಿಕದಲ್ಲಿ ನೆಲೆಸಿದ್ದು, ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಆರೋಪಿ ಹೇಳಿದ್ದ. ಸೆಪ್ಟೆಂಬರ್ 4ರಂದು ಭಾರತಕ್ಕೆ ಬರುವುದಾಗಿ ತಿಳಿಸಿದ್ದ. ಅದೇ ದಿನದಂದು ಯುವತಿಗೆ ಕರೆ ಮಾಡಿದ್ದ ಗೀತಾ ಎಂಬಾಕೆ, ‘ನಾನು ದೆಹಲಿಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿ. ಅಮೀರ್‌, ಅಮೆರಿಕದಿಂದ ವಿಮಾನದಲ್ಲಿ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಆತನ ಬಳಿ ಹಳದಿ ಕಾರ್ಡ್‌ ಇಲ್ಲ. ಅದೇ ಕಾರಣಕ್ಕೆ ಆತನನ್ನು ಬಂಧಿಸಿದ್ದು, ಬಿಡುಗಡೆ ಮಾಡಬೇಕಾದರೆ ಕೆಲವು ಶುಲ್ಕಗಳನ್ನು ಪಾವತಿ ಮಾಡಬೇಕು’ ಎಂದಿದ್ದಳು.

ಅದನ್ನು ನಂಬಿದ್ದ ಯುವತಿ, ಗೀತಾ ಹೇಳಿದ್ದ ಎಚ್‌ಡಿಎಫ್‌ಸಿ, ಯುಕೋ, ದೇನಾ, ಅಲಹಾಬಾದ್ ಹಾಗೂ ಇಂಡಿಯನ್‌ ಬ್ಯಾಂಕ್‌ಗಳ ಖಾತೆಗಳಿಗೆ ಹಂತ ಹಂತವಾಗಿ ₹12 ಲಕ್ಷ ಜಮೆ ಮಾಡಿದ್ದಳು. ಅದಾದ ಕೆಲವೇ ನಿಮಿಷಗಳಲ್ಲಿ ಗೀತಾ ಹಾಗೂ ಅಮೀರ್‌, ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದಾರೆ’ ಎಂದು ವಿವರಿಸಿದರು.

ಆರೋಪಿಗಳದ್ದು ನಕಲಿ ಖಾತೆ

‘ಆರೋಪಿಗಳು, ಜೀವನ್‌ಸಾಥಿ.ಕಾಮ್‌ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ವಂಚಿಸಿದ್ದಾರೆ. ಬೇರೆಯವರ ದಾಖಲೆಗಳನ್ನು ಬಳಸಿಕೊಂಡು ಸಿಮ್‌ಕಾರ್ಡ್‌ ಖರೀದಿಸಿರುವ ಆರೋಪಿ, ಅವುಗಳ ಮೂಲಕವೇ ಯುವತಿಯವರ ಜೊತೆ ಮಾತನಾಡುತ್ತಿದ್ದರು ಎಂಬುದು ಗೊತ್ತಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಜಾಲತಾಣದಲ್ಲಿ ಖಾತೆ ತೆರೆದವರ ಮಾಹಿತಿಯನ್ನು, ಜಾಲತಾಣದ ಪ್ರತಿನಿಧಿಗಳೇ ಪರಿಶೀಲಿಸಬೇಕು. ಆದರೆ, ಈ ಪ್ರಕರಣದಲ್ಲಿ ಅವರು ನಿರ್ಲಕ್ಷ್ಯ ತೋರಿದ್ದಾರೆ. ಅವರ ವಿರುದ್ಧವೂ ಕ್ರಮ ಜರುಗಿಸಲಿದ್ದೇವೆ’ ಎಂದಿರುವ ಪೊಲೀಸರು, ‘ಸಾರ್ವಜನಿಕರು, ವೈವಾಹಿಕ ಜಾಲತಾಣಗಳಲ್ಲಿ ತಮ್ಮ ಮಾಹಿತಿ ನಮೂದಿಸುವ ಹಾಗೂ ಅಲ್ಲಿ ಪರಿಚಯವಾದವರ ಜೊತೆ ವ್ಯವಹರಿಸುವಾಗ ಎಚ್ಚರಿಕೆ ವಹಿಸಬೇಕು’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.