ADVERTISEMENT

ಎಸ್‌.ಟಿ ಮೀಸಲಾತಿಗಾಗಿ ಕುರುಬರ ಬೃಹತ್ ಪ್ರತಿಭಟನೆ

ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 18:55 IST
Last Updated 21 ನವೆಂಬರ್ 2022, 18:55 IST
‘ಎಸ್‌.ಟಿ ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿ ಕುರುಬ ಸಮುದಾಯದವರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು
‘ಎಸ್‌.ಟಿ ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿ ಕುರುಬ ಸಮುದಾಯದವರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು   

ಬೆಂಗಳೂರು: 'ಎಸ್.ಟಿ ಮೀಸಲಾತಿ ನೀಡಬೇಕು' ಎಂದು ಒತ್ತಾಯಿಸಿ ಕುರುಬ ಸಮುದಾಯದವರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಧಾರವಾಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಮಂಡ್ಯ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಇತರ ಜಿಲ್ಲೆಗಳಿಂದ ಬಂದಿದ್ದ ಸಮುದಾಯದ ಜನರು, ‘ಎಸ್.ಟಿ ಮೀಸಲಾತಿ ಬೇಕು' ಎಂಬ ಘೋಷಣೆಯುಳ್ಳ ಫಲಕಗಳನ್ನು ಪ್ರದರ್ಶಿಸಿದರು.

ಕುರುಬ ಸಮುದಾಯದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಾಲುಮತ ಮಹಾಸಭಾ ವತಿಯಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಹಾಲುಮತ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ರುದ್ರಣ್ಣ ಗುಳಗುಳಿ ಅವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ADVERTISEMENT

'ಎಸ್‌.ಟಿ (ಪರಿಶಿಷ್ಟ ಪಂಗಡ) ಮೀಸಲಾತಿ ಪಟ್ಟಿಯಲ್ಲಿ ಕುರುಬರಿಗೆ ಸಂಬಂಧಪಟ್ಟ ‘ಗೊಂಡ’, ‘ರಾಜಗೊಂಡ’, ‘ಜೇನುಕುರುಬ’, ‘ಕಾಡುಕುರುಬ’, ‘ಕಾಟ್ಟುನಾಯಕನ್‌’, ‘ಕುರುಮನ್ಸ್‌’ ಮತ್ತು ಕ್ರಮ ಸಂಖ್ಯೆ 28ರಲ್ಲಿ ‘ಕುರುಬ’ ಎಂಬ ಜಾತಿಗಳಿದ್ದರೂ ರಾಜ್ಯವ್ಯಾಪಿ ವಿಸ್ತರಣೆ ಮಾಡಿಲ್ಲ. ಮೀಸಲಾತಿಗೆ ಸಂಬಂಧಪಟ್ಟಂತೆ ರಾಜ್ಯ ಬುಡಕಟ್ಟು ಸಂಶೋಧನಾ ಕೇಂದ್ರ ಅಧ್ಯಯನ ನಡೆಸಿದ್ದು, ಈ ವರದಿಯನ್ನೂ ರಾಜ್ಯ ಸರ್ಕಾರ ಇದುವರೆಗೂ ಅಂಗೀಕರಿಸಿಲ್ಲ. ಇದರಿಂದ ಕುರುಬರಿಗೆ ಅನ್ಯಾಯವಾಗುತ್ತಿದೆ' ಎಂದು ಪ್ರತಿಭಟನಕಾರರು ದೂರಿದರು.

'ಅಧ್ಯಯನ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು' ಎಂದು ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಕನಕ ಜಯಂತಿ ದಿನದಂದು ರಾಜ್ಯ ಸರ್ಕಾರದಿಂದ ಶುಭ ಸುದ್ದಿ ನಿರೀಕ್ಷಿಸಲಾಗಿತ್ತು. ಆದರೆ, ಮುಖ್ಯಮಂತ್ರಿಯವರು ಸಮುದಾಯದ ಜನರಲ್ಲಿ ನಿರಾಶೆ ಮೂಡಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಎಸ್.ಟಿ ಮೀಸಲಾತಿಗಾಗಿ ರಾಜ್ಯವ್ಯಾಪಿ ಪಾದಯಾತ್ರೆ ಸಹ ಮಾಡಲಾಗಿದೆ. ಇಂದು ಸಾಂಕೇ ತಿಕ ಪ್ರತಿಭಟನೆ ನಡೆಸುತ್ತಿದ್ದೇವೆ. ಮುಖ್ಯಮಂತ್ರಿ ಯವರು ಇನ್ನಾದರೂ ಎಚ್ಚೆತ್ತುಕೊಂಡು ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ, ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಸಚಿವರು: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವರಾದ ಎನ್‌. ಮುನಿರತ್ನ ಹಾಗೂ ಗೋವಿಂದ ಕಾರಜೋಳ ಅವರು ಮನವಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.