ADVERTISEMENT

ಸ್ಮಾರ್ಟ್‌ ಸಿಟಿ ಯೋಜನೆ: ಸುರಕ್ಷತಾ ಕ್ರಮ ಅಳವಡಿಸದ್ದಕ್ಕೆ ಮೇಯರ್‌ ಅಸಮಾಧಾನ

ಕಾಮಗಾರಿ ಪರಿಶೀಲನೆ * ಗುಣಮಟ್ಟದ ಕುರಿತೂ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 15:08 IST
Last Updated 23 ಆಗಸ್ಟ್ 2020, 15:08 IST
ಮೇಯರ್‌ ಎಂ.ಗೌತಮ್‌ ಕುಮಾರ್‌ ಅವರು ಕೆ.ಆರ್‌.ಮಾರುಕಟ್ಟೆ ಪರಿಸರವನ್ನು ಪರಿಶೀಲಿಸಿದರು. ಸಂಸದ ಪಿ.ಸಿ.ಮೋಹನ್‌ ಜೊತೆಯಲ್ಲಿದ್ದರು.
ಮೇಯರ್‌ ಎಂ.ಗೌತಮ್‌ ಕುಮಾರ್‌ ಅವರು ಕೆ.ಆರ್‌.ಮಾರುಕಟ್ಟೆ ಪರಿಸರವನ್ನು ಪರಿಶೀಲಿಸಿದರು. ಸಂಸದ ಪಿ.ಸಿ.ಮೋಹನ್‌ ಜೊತೆಯಲ್ಲಿದ್ದರು.   

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳ ಅನುಷ್ಠಾನದ ವೇಳೆ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿಲ್ಲ. ಈ ಕಾಮಗಾರಿಗಳ ಗುಣಮಟ್ಟವೂ ಸರಿಯಾಗಿಲ್ಲ’ ಎಂದು ಮೇಯರ್‌ ಎಂ.ಗೌತಮ್‌ ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಟೆಂಡರ್ ಶ್ಯೂರ್ ಮಾದರಿಯ ರಸ್ತೆ ಕಾಮಗಾರಿಗಳನ್ನು ಮೇಯರ್‌ ಅವರು ಸಂಸದರು ಪಿ.ಸಿ.ಮೋಹನ್ ಅವರ ಜೊತೆ ಭಾನುವಾರ ಪರಿಶೀಲನೆ ನಡೆಸಿದರು.

‘ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಿಲ್ಲ.ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಟೆಂಡರ್ ಅನುಸಾರ ಪಾಲಿಸ ಬೇಕಾದ ಯಾವುದೇ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಿಲ್ಲ. ಮಳೆಗಾಲದ ವೇಳೆ ವಾಹನ ಸವಾರರಿಗೆ ಹೆಚ್ಚು ಸಮಸ್ಯೆ ಆಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಕಾಮಗಾರಿಗಳು ನಡೆಯುವ ಕಡೆ ದೂಳಿನ ಸಮಸ್ಯೆಯೂ ಇದೆ’ ಎಂದು ಮೇಯರ್‌ ತಿಳಿಸಿದರು.

ADVERTISEMENT

‘ಕಾಮಗಾರಿ ವೇಳೆ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಹಲವು ಬಾರಿ ಸೂಚನೆ ನೀಡಿದ್ದರೂ ಬೆಂಗಳೂರು ಸ್ಮಾರ್ಟ್ ಸಿಟಿ ಅಧಿಕಾರಿಗಳು ಈ ಬಗ್ಗೆ ಗಮನವನ್ನೇ ವಹಿಸಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಆಗಸ್ಟ್‌ ಅಂತ್ಯದಲ್ಲಿ ಕೆ.ಆರ್‌.ಮಾರುಕಟ್ಟೆ ಪುನರಾರಂಭ?
‘ಕೆ.ಆರ್‌.ಮಾರುಕಟ್ಟೆಯಲ್ಲಿ ಸ್ಥಗಿತಗೊಂಡಿರುವ ವಹಿವಾಟುಗಳನ್ನು ಆಗಸ್ಟ್‌ ಅಂತ್ಯದಲ್ಲಿ ಪುನರಾರಂಭಿಸಲು ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದೆ. ಹಾಗಾಗಿ ಮಾರುಕಟ್ಟೆ ಪರಿಸರದಲ್ಲಿ ಸೋಂಕು ನಿವಾರಕ ಸಿಂಪಡಿಸುವುದೂ ಸೇರಿದಂತೆ ಕೋವಿಡ್‌ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಮೇಯರ್‌ ನಿರ್ದೇಶನ ನೀಡಿದರು.

ಕೋವಿಡ್ ವ್ಯಾಪಕವಾಗಿ ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಕೆ.ಆರ್.ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಇದರ ಪುನರಾರಂಭಕ್ಕೆ ನಡೆದಿರುವ ತಯಾರಿ ಪರಿಶೀಲಿಸಲು ಮೇಯರ್‌ ಅವರು ಮಾರುಕಟ್ಟೆ ಪರಿಸರವನ್ನು ಭಾನುವಾರ ಪರಿಶೀಲಿಸಿದರು.

‘ಕೆ.ಆರ್.ಮಾರುಕಟ್ಟೆ ಬಳಿ ನಡೆಯುತ್ತಿರುವ ಜಲಮಂಡಳಿಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಇರುವ ತೊಡಕುಗಳನ್ನು ನಿವಾರಿಸಲು ಜಲಮಂಡಳಿಯ ಮುಖ್ಯ ಎಂಜಿನಿಯರ್‌, ಬಿಬಿಎಂಪಿಯ ಪಶ್ಚಿಮ ವಲಯದ ಮುಖ್ಯ ಎಂಜಿನಿಯರ್‌ ಹಾಗೂ ಮಾರುಕಟ್ಟೆಗೆ ಸಂಬಂಧಿಸಿದ ಅಧಿಕಾರಿಗಳು ಸ್ಥಳ ತಪಾಸಣೆ ನಡೆಸಿ ಕ್ರಮಕೈಗೊಳ್ಳಬೇಕು’ ಎಂದು ಮೇಯರ್‌ ಸೂಚನೆ ನೀಡಿದರು.

‘ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.