ADVERTISEMENT

ನೆರೆ ಸಂತ್ರಸ್ತರಿಗೆ ಪರಿಹಾರ ವಿಳಂಬ: ಕಾಂಗ್ರೆಸ್ ಎಚ್ಚರಿಕೆ

ಪರಿಹಾರ ಚುರುಕಿಗೆ ಆಗ್ರಹಿಸಿ ಹೋರಾಟ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 20:29 IST
Last Updated 12 ಸೆಪ್ಟೆಂಬರ್ 2019, 20:29 IST
   

ಬೆಂಗಳೂರು:ಮಳೆ, ಪ್ರವಾಹ ಸಂತ್ರಸ್ತರಿಗೆ ನೆರವು ನಿಟ್ಟಿನಲ್ಲಿ ಈವರೆಗೂ ಸಮರ್ಪಕವಾಗಿ ಪರಿಹಾರ ಕಾರ್ಯ ಕೈಗೊಂಡಿಲ್ಲ. ಇನ್ನೂ ಹೋರಾಟದ ಮೂಲಕ ಪಡೆದುಕೊಳ್ಳಬೇಕಾಗಿದೆ ಎಂದು ಸಂತ್ರಸ್ತ ಭಾಗದ ಕಾಂಗ್ರೆಸ್ ಶಾಸಕರು ಗುಡುಗಿದರು.

‘ಇಷ್ಟು ದಿನ ರಾಜಕಾರಣ ಮಾಡಬಾರದು ಎಂದು ಸುಮ್ಮನಿದ್ದೆವು. ಆದರೂ ಈವರೆಗೂ ಸಮರ್ಪಕವಾಗಿ ಪರಿಹಾರ ವ್ಯವಸ್ಥೆ ಮಾಡಿಲ್ಲ. ಇನ್ನು ಮುಂದೆ ಸುಮ್ಮನೆ ಕುಳಿತುಕೊಳ್ಳದೆ ಹೋರಾಟ ಆರಂಭಿಸಲಾಗುವುದು. ಇದರ ಮೊದಲ ಭಾಗವಾಗಿ ಸಂತ್ರಸ್ತರನ್ನು ಒಂದೆಡೆ ಸೇರಿಸಿ ಪ್ರತಿಭಟನೆ ಸಂಘಟಿಸಲಿದ್ದೇವೆ’ ಎಂದು ಎಚ್ಚರಿಸಿದರು.

ಶಾಸಕರಾದ ಎಂ.ಬಿ.ಪಾಟೀಲ, ಸತೀಶ್ ಜಾರಕಿಹೊಳಿ, ಮಹಾಂತೇಶ ಕೌಜಲಗಿ, ಆನಂದ ನ್ಯಾಮಗೌಡ ಗುರುವಾರ ಜಂಟಿ ಪ್ರತಿಕಾಗೋಷ್ಠಿ ನಡೆಸಿ, ಪರಿಹಾರ ಕಾರ್ಯ ಚುರುಕುಗೊಳಿಸುವಂತೆ ಆಗ್ರಹಿಸಿದರು.

ADVERTISEMENT

ನಿರಾಶ್ರಿತರಾದ ಕುಟುಂಬದವರು ಮನೆಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ₹10 ಸಾವಿರ ನೀಡಲಾಗುತ್ತಿದ್ದು, ಈವರೆಗೂ 2 ಲಕ್ಷ ಕುಟುಂಬಗಳಿಗೆ ಹಣ ವಿತರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ.

ಆದರೆ ಸಚಿವರು ಹೇಳಿದ್ದರಲ್ಲಿ ಅರ್ಧದಷ್ಟು ಮಂದಿಗೂ ಪರಿಹಾರ ನೀಡಿಲ್ಲ. ಸುಳ್ಳು ವಿವರಗಳನ್ನು ನೀಡಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಹೆಸರಿಗಷ್ಟೇ ಪರಿಹಾರ ಕಾರ್ಯ ನಡೆದಿದೆ. ಜನರಿಗೆ ನೆರವೂ ಸಿಗುತ್ತಿಲ್ಲ ಎಂದು ಎಂ.ಬಿ.ಪಾಟೀಲ ದೂರಿದರು.

ಬೇಡಿಕೆಗಳು

l→ಮನೆ ನಿರ್ಮಾಣ ಪರಿಹಾರ ಮೊತ್ತವನ್ನು ₹5 ಲಕ್ಷದಿಂದ ₹10 ಲಕ್ಷಕ್ಕೆ ಹೆಚ್ಚಿಸಬೇಕು.

l→ಮನೆ, ನಿವೇಶನ ಇಲ್ಲದ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಶೆಡ್‌ಗಳನ್ನು ನಿರ್ಮಿಸಿ, ನೀರು, ಶೌಚಾಲಯ ಇತರ ಮೂಲಭೂತ ಸೌಕರ್ಯ ಕಲ್ಪಿಸಬೇಕು.

lಮನೆಗಳಿಗೆ ಅಗತ್ಯ ಪರಿಕರಗಳನ್ನು ಕೊಳ್ಳಲು ₹10 ಸಾವಿರ ನೀಡುತ್ತಿದ್ದು, ಈ ಹಣ ಸಾಲದಾಗಿದೆ. ಮನೆಯಲ್ಲಿದ್ದ ಎಲ್ಲವನ್ನೂ ಕಳೆದುಕೊಂಡಿರುವುದರಿಂದ, ಈ ಮೊತ್ತವನ್ನು ₹1 ಲಕ್ಷಕ್ಕೆ ಹೆಚ್ಚಿಸಬೇಕು.

l→ಹಸು, ಇತರ ರಾಸುಗಳು ಸಾವನ್ನಪ್ಪಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಸಾವನ್ನಪ್ಪಿದ ಪ್ರತಿ ಹಸುಗೆ ₹50 ಸಾವಿರ, ಮೇಕೆ, ಕುರಿಗೆ ₹10 ಸಾವಿರ ಪರಿಹಾರ ನೀಡಬೇಕು.

l→ಕಬ್ಬು, ತೊಗರಿ ಸಹಿತ ವಾಣಿಜ್ಯ ಬೆಳೆಗಳು ಹಾಳಾಗಿದ್ದು, ಪ್ರತಿ ಎಕರೆಗೆ ₹1 ಲಕ್ಷ ಪರಿಹಾರ ಕೊಡಬೇಕು.

l→ಹೊಲ, ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ‘ನರೇಗಾ’ದಲ್ಲಿ ಉದ್ಯೋಗ ನೀಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.