ADVERTISEMENT

ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ: ‘ಬಿ-ರಿಪೋರ್ಟ್’ ಅಂಗೀಕಾರ

ಶ್ರುತಿ ಹರಿಹರನ್‌ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 3:49 IST
Last Updated 14 ಜನವರಿ 2022, 3:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ನಟಿ ಶ್ರುತಿ ಹರಿಹರನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ’ ಆರೋಪದಡಿ ನಟ ಅರ್ಜುನ್ ಸರ್ಜಾ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸಲ್ಲಿಸಿದ್ದ ‘ಬಿ–ರಿಪೋರ್ಟ್‌’ ಅನ್ನು ನ್ಯಾಯಾಲಯ ಗುರುವಾರ ಅಂಗೀಕರಿಸಿದೆ.

2018ರಲ್ಲಿ ಸಂತ್ರಸ್ತೆ ಶ್ರುತಿ ಅವರು ನೀಡಿದ್ದ ದೂರು ಆಧರಿಸಿ ಸಂಜ್ಞೆ ಮೂಲಕ ಮಹಿಳೆ ಗೌರವಕ್ಕೆ ಧಕ್ಕೆ (354,509) ಲೈಂಗಿಕ ಕಿರುಕುಳ (ಐಪಿಸಿ 354ಎ) ಹಾಗೂ ಜೀವಬೆದರಿಕೆ (ಐಪಿಸಿ 506) ಆರೋಪದಡಿ ಅರ್ಜುನ್ ಸರ್ಜಾ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

‘ವಿಸ್ಮಯ ಸಿನಿಮಾ ಚಿತ್ರೀಕರಣದ ವೇಳೆ ಲೈಂಗಿಕ ದೌರ್ಜನ್ಯ ನಡೆದಿದೆ’ ಎಂದು ಶ್ರುತಿ ಆರೋಪಿಸಿದ್ದರು. ಅರ್ಜುನ್ ಸರ್ಜಾ ಹಾಗೂ ಹಲವರನ್ನು ವಿಚಾರಣೆ ನಡೆಸಿದ್ದ ಕಬ್ಬನ್ ಪಾರ್ಕ್ ಪೊಲೀಸರು, ‘ಆರೋಪ ಸಾಬೀತುಪಡಿಸುವ ಯಾವುದೇ ಪುರಾವೆಗಳು ಸಿಕ್ಕಿಲ್ಲ’ ಎಂದು ಅಭಿಪ್ರಾಯಪಟ್ಟು ನ್ಯಾಯಾಲಯಕ್ಕೆ ‘ಬಿ–ರಿಪೋರ್ಟ್’ ಸಲ್ಲಿಸಿದ್ದರು.

ADVERTISEMENT

ನೋಟಿಸ್‌ಗೆ ಪ್ರತಿಕ್ರಿಯಿಸದ ಶ್ರುತಿ: ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ 8ನೇ ಎಸಿಎಂಎಂ ನ್ಯಾಯಾಲಯ, ಬಿ–ರಿಪೋರ್ಟ್ ಸಲ್ಲಿಕೆಯಾದ ಬಗ್ಗೆ ಶ್ರುತಿ ಹರಿಹರನ್‌ ಅವರಿಗೆ ನೋಟಿಸ್‌ ನೀಡಿತ್ತು.

‘ನೀವು ನೀಡಿದ್ದ ದೂರಿನಡಿ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪುರಾವೆಗಳಿಲ್ಲವೆಂದು ಪೊಲೀಸರು ಹೇಳುತ್ತಿದ್ದಾರೆ. ಈ ಬಗ್ಗೆ ಬಿ–ರಿಪೋರ್ಟ್ ಸಹ ಸಲ್ಲಿಸಿದ್ದಾರೆ. ಈ ಬಗ್ಗೆ ಆಕ್ಷೇಪಣೆಗಳಿದ್ದರೆ, ನ್ಯಾಯಾಲಯಕ್ಕೆ ಹಾಜರಾಗಿ ವಾದ ಮಂಡಿಸಬಹುದು’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು.

ನೋಟಿಸ್‌ ಸ್ವೀಕರಿಸಿದ್ದ ಶ್ರುತಿ, ನಿಗದಿತ ದಿನದಂದು ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಯಾವುದೇ ಆಕ್ಷೇಪಣೆಯನ್ನು ಸಲ್ಲಿಸಿಲ್ಲ. ಹೀಗಾಗಿ, ಪೊಲೀಸರ ಬಿ–ರಿಪೋರ್ಟ್ ಅನ್ನು ನ್ಯಾಯಾಲಯ ಗುರುವಾರ ಮಾನ್ಯ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.