ADVERTISEMENT

ದೇವಿನಗರ: ಕೆಳಸೇತುವೆಯಲ್ಲಿ ಕಸ, ಮಾಂಸ ತ್ಯಾಜ್ಯ

ದುರ್ನಾತ ಬೀರುತ್ತಿದೆ ಕೊಳೆತ ತ್ಯಾಜ್ಯ l ಮೂಗು ಮುಚ್ಚಿಕೊಂಡು ಹೋಗುವ ವಾಹನ ಸವಾರರು

ಮನೋಹರ್ ಎಂ.
Published 18 ಜುಲೈ 2019, 20:00 IST
Last Updated 18 ಜುಲೈ 2019, 20:00 IST
ಕೆಳಸೇತುವೆಯಲ್ಲಿ ಎಸೆದಿರುವ ಕಸದ ರಾಶಿ
ಕೆಳಸೇತುವೆಯಲ್ಲಿ ಎಸೆದಿರುವ ಕಸದ ರಾಶಿ   

ಬೆಂಗಳೂರು:ಹೊರವರ್ತುಲ ರಸ್ತೆಯಲ್ಲಿ ಹೆಬ್ಬಾಳ– ತುಮಕೂರು ರಸ್ತೆ ನಡುವೆ ಇರುವ ದೇವಿನಗರದ ಬಳಿಯ ಕೆಳಸೇತುವೆಯ ಬಳಿಯೇ ಕಿಡಿಗೇಡಿಗಳು ಕಸವನ್ನು ಹಾಗೂ ಮಾಂಸದ ತ್ಯಾಜ್ಯವನ್ನು ರಾತ್ರೋರಾತ್ರಿ ತಂದು ಸುರಿಯುತ್ತಿದ್ದಾರೆ. ಈ ಕೆಳಸೇತುವೆ ಮೂಲಕ ಹಾದುಹೋಗುವ ಪ್ರಯಾಣಿಕರು, ಈ ಕಸದ ರಾಶಿಯ ದುರ್ನಾತದಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ.

ಹೊರವರ್ತುಲ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇಲ್ಲಿನ ರೈಲ್ವೆ ಕೆಳಸೇತುವೆಯಲ್ಲಿ ಗೂಡಿನಂತಹ ರಚನೆಗಳಿವೆ. ಇದರಲ್ಲಿ ಸುರಿದಿರುವ ಕಸದ ರಾಶಿ ತಿಂಗಳಾನುಗಟ್ಟಲೆ ಹಾಗೆಯೇ ಇದೆ. ವಿಲೇವಾರಿಯಾಗದ ಕಾರಣ ಕಸ ಕೊಳೆತಿದೆ. ‌ಖಾಲಿ ಬಿದ್ದ ಈ ಜಾಗದಲ್ಲಿ ಕೆಲ ವಾಹನ ಚಾಲಕರು ಮೂತ್ರ ವಿಸರ್ಜನೆ ಮಾಡುತ್ತಾರೆ. ದುರ್ನಾತ ಬೀರುವ ಈ ಸ್ಥಳದ ಬಳಿ ಪಾದಚಾರಿಗಳೂ ಸುಳಿಯುವುದಿಲ್ಲ.

‘ತಮ್ಮ ಮನೆಯ ಕಸವನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ತುಂಬಿಸಿಕೊಂಡು ಬರುವ ವಾಹನ ಸವಾರರು ಅದನ್ನೂ ಇಲ್ಲಿ ಬಿಸಾಡುತ್ತಾರೆ. ರಾತ್ರಿ ವೇಳೆ ಅಕ್ಕಪಕ್ಕದ ಮಾಂಸದ ಅಂಗಡಿಯವರು ನಿತ್ಯ ಸಂಗ್ರಹವಾಗುವ ತ್ಯಾಜ್ಯವನ್ನು ಮೂಟೆಯಲ್ಲಿ ತುಂಬಿಕೊಂಡು ಬಂದು ಇಲ್ಲೇ ಎಸೆಯುತ್ತಾರೆ. ಸತ್ತ ಪ್ರಾಣಿಗಳನ್ನು ಸಹ ಇಲ್ಲಿ ಬಿಸಾಡುತ್ತಾರೆ.ಇದು ಕ್ರಮೇಣ ಕೊಳೆತು ದುರ್ಗಂಧ ಬೀರುತ್ತದೆ. ಇದ
ರಿಂದ ವಾಹನ ಸವಾರರು ಮೂಗು ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ಇದೆ’ ಎಂದು ಸ್ಥಳೀಯ ನಿವಾಸಿ ಮೋಹನ್‌ ದೂರಿದರು.

ADVERTISEMENT

‘ಈ ಜಾಗದಲ್ಲಿ ಕಸ ಹಾಕಿದರೆ ದಂಡ ವಿಧಿಸಲಾಗುವು‌ದು ಎಂಬ ಸೂಚನಾ ಫಲಕವೂ ಇಲ್ಲ. ಇದು ನಿರ್ಜನ ಪ್ರದೇಶವಾದ ಕಾರಣ ಚಾಲಕರು ರಾಜಾರೋಷವಾಗಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಇಲ್ಲಿ ಸಂಗ್ರಹವಾಗುವ ಕಸವನ್ನು ಒಂದೋ ಪಾಲಿಕೆ ವಾರಕ್ಕೆ ಒಮ್ಮೆಯಾದರೂ ವಿಲೇವಾರಿ ಮಾಡಬೇಕು. ಅಥವಾ,ಕಸ ಎಸೆಯುವವರನ್ನು ಪತ್ತೆಗಾಗಿ ಇಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಬೇಕು. ತಪ್ಪಿತಸ್ಥರಿಗೆ ದಂಡ ವಿಧಿಸಬೇಕು’ ಎನ್ನುತ್ತಾರೆ ಆಟೊ ಚಾಲಕ ಹೇಮಂತ್‌.

‘ಕಸ ಎಸೆಯುವ ಮೂಲಕ ಜನರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇಲ್ಲಿ ಭಾರಿ ಪ್ರಮಾಣದಲ್ಲಿ ಕಸ ಸಂಗ್ರಹವಾಗಲುಪಾಲಿಕೆ ನಿರ್ಲಕ್ಷ್ಯವೂ ಕಾರಣ. ಆರಂಭದಲ್ಲೇ ಕಸ ವಿಲೇವಾರಿ ಮಾಡಿದ್ದರೆ, ಇಲ್ಲಿನ ಪರಿಸ್ಥಿತಿ ಇಷ್ಟು ಹದಗೆಡುತ್ತಿರಲಿಲ್ಲ.ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿದರೆ ಇಲ್ಲಿನ ಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದು ಅರ್ಥವಾಗುತ್ತದೆ’ ಎಂದು ಆಕ್ರೋಶ ಹೊರಹಾಕಿದರು.

‘ಕಸದ ಬುಟ್ಟಿ ಇಡಿ; ಇಲ್ಲವೇ ಖಾಲಿ ಜಾಗ ಮುಚ್ಚಿ’

‘ಸೇತುವೆ ಕೆಳಭಾಗದಲ್ಲಿ ಕೋಣೆಯಂತಹ ಖಾಲಿ ಜಾಗ ಇರುವುದರಿಂದ ಜನ ಕಸ ಎಸೆಯುತ್ತಾರೆ. ಇಲ್ಲಿ ಕಸದ ಬುಟ್ಟಿ ಇರಿಸಿ, ಕಸ ವಿಲೇವಾರಿ ಮಾಡಲಿ. ಇಲ್ಲದಿದ್ದಲ್ಲಿ ಇಲ್ಲಿ ಕೋಣೆಯಂತಿರುವ ಜಾಗವನ್ನು ಮುಚ್ಚುವುದು ಸೂಕ್ತ’ ಎಂದು ಭದ್ರಪ್ಪ ಬಡಾವಣೆ ನಿವಾಸಿ ಮುನಿರಾಜ್‌ ಸಲಹೆ ನೀಡಿದರು.

***

ಸಂಗ್ರಹವಾಗಿರುವ ಕಸವನ್ನು ಕೂಡಲೇ ತೆರವು ಮಾಡಬೇಕು. ಸ್ಥಳೀಯರಿಗೆ ಹಾಗೂ ಮಾಂಸದಂಗಡಿ ಮಾಲೀಕರಿಗೆ ತ್ಯಾಜ್ಯ ಎಸೆಯದಂತೆ ಎಚ್ಚರಿಕೆ ನೀಡಬೇಕು. ಕಸ ಎಸೆದವರನ್ನು ಪತ್ತೆ ಹಚ್ಚಿ ದಂಡ ವಿಧಿಸಬೇಕು.

– ಎಚ್‌.ಎಂ. ಸತೀಶ್‌, ಭದ್ರಪ್ಪ ಬಡಾವಣೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.