ಬೆಂಗಳೂರು: ‘ಮಾಧ್ಯಮ ಸತ್ಯವನ್ನು ಎತ್ತಿ ಹಿಡಿಯಬೇಕು. ಮಾಧ್ಯಮದ ನಾಲಿಗೆಗೆ ಸ್ವಾತಂತ್ರ್ಯವಿರಬಹುದು. ಆದರೆ ವಿವೇಚನೆ ಹೊಂದಿರಬೇಕು. ಸಂಪಾದಕರು, ನಿರೂಪಕರು, ಡಿಜಿಟಲ್ ಪ್ರಭಾವಿಗಳು ಮಾಧ್ಯಮವನ್ನು ಪ್ರಚೋದನೆಗಾಗಿ ಬಳಸಿಕೊಳ್ಳಬಾರದು’ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಅಭಿಪ್ರಾಯಪಟ್ಟರು.
ನಗರದಲ್ಲಿ ವಕೀಲರ ವಾಹಿನಿ ‘ಜಸ್ಟೀಸ್ ಕೆ.ಆರ್. ಗೋಪಿವಲ್ಲಭ ಅಯ್ಯಂಗಾರ್ ಸ್ಮಾರಕ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಮಾಧ್ಯಮಗಳ ಸ್ವಾತಂತ್ರ್ಯ ಮತ್ತು ಸ್ವಯಂ ನಿಯಂತ್ರಣ ನಡುವಿನ ಸಮತೋಲನ‘ ಕುರಿತು ಅವರು ಉಪನ್ಯಾಸ ನೀಡಿದರು.
’ಮಾಧ್ಯಮ ಸಂವಿಧಾನದ ನಾಲ್ಕನೇ ಅಂಗವಾಗಿದ್ದು, ಇದು ಅಧಿಕಾರವನ್ನು ರಕ್ಷಿಸುವುದಲ್ಲ, ಬದಲಿಗೆ ಆಲೋಚನೆಗಳನ್ನು ಪ್ರಚೋದಿಸಬೇಕು. ಆದರೆ ಪ್ರಚೋದನಕಾರಿ ಯಾಗಬಾರದು. ಸ್ವಾತಂತ್ರ್ಯವನ್ನು ಉತ್ತೇಜಿಸುವ ಜೊತೆಗೆ ನಿಷ್ಠುರವಾಗಿರಬೇಕು ಮತ್ತು ಸಮತೋಲನ ಕಾಯ್ದುಕೊಳ್ಳಬೇಕು’ ಎಂದರು
‘ಮಾಧ್ಯಮಗಳು ತನಿಖಾ ಪತ್ರಿಕೋದ್ಯಮಕ್ಕೆ ಉತ್ತೇಜನ ನೀಡಬೇಕು. ಹಾಗೆಂದು ತೀರ್ಪು ನೀಡಬಾರದು. ಪತ್ರಿಕೋದ್ಯಮ ಎಂದರೆ ಸತ್ಯ ಪರಿಶೋಧನೆಯಾಗಿದ್ದು, ಸಾರ್ವಜನಿಕ ಹಿತಾಸಕ್ತಿ ಜೊತೆಗೆ ಜವಾಬ್ದಾರಿತನದಿಂದ ಮುನ್ನಡೆಯಬೇಕು. ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು‘ ಎಂದು ವಿವರಿಸಿದರು.
‘ಮಾಧ್ಯಮ ಸ್ವಾತಂತ್ರ್ಯ ಎಂದರೆ ಅದು ಸಂವಿಧಾನದ ನೈತಿಕತೆಯಾಗಿದ್ದು, ಅದು ಕಾನೂನಿನ ಹಕ್ಕು ಅಲ್ಲ. ಅದು ನೈತಿಕತೆಯನ್ನು ಕಾಪಾಡಿಕೊಂಡು ಹೋಗುವಂತಿರಬೇಕು. ಸ್ವಯಂ ನಿಯಂತ್ರಣಕ್ಕೆ ಒಳಪಡಬೇಕು’ ಎಂದು ವಿಶ್ಲೇಷಿಸಿದರು.
ಜಸ್ಟೀಸ್ ಕೆ.ಆರ್. ಗೋಪಿ ವಲ್ಲಭ ಅಯ್ಯಂಗಾರ್ ಅವರ ಮೊಮ್ಮಗಳು ಮತ್ತು ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾಮೂರ್ತಿ ಮಾತನಾಡಿ, ‘ಗೋಪಿ ವಲ್ಲಭ ಅಯ್ಯಂಗಾರ್ ಅವರು ನ್ಯಾಯಾಂಗ ಕ್ಷೇತ್ರದಲ್ಲಿ ಭವ್ಯ ಪರಂಪರೆಯನ್ನು ಹಾಕಿಕೊಟ್ಟಿದ್ದಾರೆ. ತಪ್ಪು ಮಾಡಿದ್ದರೆ ಅದನ್ನು ಅರ್ಥಮಾಡಿಕೊಂಡು ನಾವೇ ತಿದ್ದುಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು’ ಎಂದರು.
ಮಾಜಿ ಅಡ್ವೋಕೆಟ್ ಜನರಲ್ ಹಾಗೂ ಹಿರಿಯ ವಕೀಲ ಉದಯ್ ಹೊಳ್ಳ ಮಾತನಾಡಿದರು. ವಕೀಲರ ವಾಹಿನಿಯ ಡಿ.ಎಂ. ಹೆಗಡೆ, ಎಸ್.ಎನ್. ಪ್ರಶಾಂತ್ ಚಂದ್ರ, ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.