ADVERTISEMENT

ಬೆಂಗಳೂರು: ಮಹಿಳೆ ಸಾವು; ಆಸ್ಪತ್ರೆ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 19:42 IST
Last Updated 6 ಆಗಸ್ಟ್ 2025, 19:42 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಮೃತರ ಸಂಬಂಧಿಕರು ಕುಮಾರಸ್ವಾಮಿ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಆಸ್ಪತ್ರೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಮಂಡ್ಯ ಮೂಲದವರಾದ, ನಗರದ ಜರಗನಹಳ್ಳಿ ನಿವಾಸಿ ತನುಶ್ರೀ(27) ಮೃತಪಟ್ಟವರು.

ADVERTISEMENT

‘ತನುಶ್ರೀ ಅವರು ಹೆರಿಗೆ ನೋವಿನಿಂದಾಗಿ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದು, ಮಂಗಳವಾರ ಬೆಳಿಗ್ಗೆ ಹೆರಿಗೆ ಆಗಿದೆ. ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ತನುಶ್ರೀ ಮೃತಪಟ್ಟಿದ್ದಾರೆ’ ಎಂದು ಆರೋಪಿಸಿ ಕುಟುಂಬದ ಸದಸ್ಯರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಕುಮಾರಸ್ವಾಮಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು.

‘ಆಸ್ಪತ್ರೆಗೆ ತನುಶ್ರೀ ದಾಖಲಾದಾಗ ವೈದ್ಯರು ಸಹಜ ಹೆರಿಗೆ ಆಗುತ್ತದೆ ಎಂದಿದ್ದರು. ಆದರೆ, ಸಿಸೇರಿಯನ್ ಮಾಡಿ ಮಗುವನ್ನು ಹೊರತೆಗೆದಿದ್ದಾರೆ. ತನುಶ್ರೀ ಮೂಗಿನಲ್ಲಿ ರಕ್ತ ಸೋರುತ್ತಿತ್ತು. ಆಕೆಯ ಸಾವಿನ ಬಗ್ಗೆ ಮಾಹಿತಿ ನೀಡದ ವೈದ್ಯರು ಒಂದೂವರೆ ಲಕ್ಷ ರೂಪಾಯಿ ಬಿಲ್ ಕಟ್ಟಿಸಿಕೊಂಡಿದ್ದಾರೆ’ ಎಂದು ಮೃತರ ಸಂಬಂಧಿಕರು ಆರೋಪಿಸಿದರು. 

‘ನ್ಯಾಯ ಸಿಗುವವರೆಗೂ ಮೃತದೇಹವನ್ನು ಕೊಂಡೊಯ್ಯುವುದಿಲ್ಲ‘ ಎಂದು ಪ್ರತಿಭಟನೆ ನಡೆಸಿದರು.

ಪೊಲೀಸರು ಮನವೊಲಿಸಿದ ಬಳಿಕ ಕುಟುಂಬ ಸದಸ್ಯರು ಮೃತದೇಹವನ್ನು ಪಡೆದರು. ಸದ್ಯ ಎನ್‌ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

‘ರಕ್ತದೊತ್ತಡ ನಿಯಂತ್ರಣಕ್ಕೆ ಬಾರದೆ, ಹೆಚ್ಚಿನ ರಕ್ತಸ್ರಾವದಿಂದಾಗಿ ತನುಶ್ರೀ ಮೃತಪಟ್ಟಿದ್ದಾರೆ. ಇದರಲ್ಲಿ ವೈದ್ಯರ ನಿರ್ಲಕ್ಷ್ಯವಿಲ್ಲವೆಂದು ಆಸ್ಪತ್ರೆಯವರು ಸ್ಪಷ್ಟನೆ ನೀಡಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ತನುಶ್ರೀ ಅವರ ಪತಿ ಸುರೇಶ್ ಅವರು ಕುಮಾರಸ್ವಾಮಿ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಯುಡಿಆರ್ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.