ADVERTISEMENT

ಹೊಯ್ಸಳ ಸೈರನ್‌ನಿಂದ ನೆಮ್ಮದಿಗೆ ಭಂಗವಾಗುವುದಿಲ್ಲವೇ: ಸುರೇಶ್‌ಕುಮಾರ್ ಪ್ರಶ್ನೆ

* ಮೆಗಾಫೋನ್ ಬಳಕೆ ವಿರುದ್ಧ ಕಾರ್ಯಾಚರಣೆ; ಕಮಿಷನರ್‌ ಕ್ರಮ ಪ್ರಶ್ನಿಸಿದ ಶಾಸಕ ಎಸ್. ಸುರೇಶ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 17:09 IST
Last Updated 7 ಅಕ್ಟೋಬರ್ 2021, 17:09 IST
ಎಸ್‌. ಸುರೇಶ್‌ಕುಮಾರ್
ಎಸ್‌. ಸುರೇಶ್‌ಕುಮಾರ್    

ಬೆಂಗಳೂರು: ತಳ್ಳುಗಾಡಿಯಲ್ಲಿ ಮೆಗಾಫೋನ್‌ ಬಳಸುತ್ತಿರುವ ವ್ಯಾಪಾರಿಗಳ ವಿರುದ್ಧ ನಗರದ ಪೊಲೀಸರು ಏಕಾಏಕಿ ಕಾರ್ಯಾಚರಣೆ ಆರಂಭಿಸಿದ್ದು, ಈ ಕ್ರಮವನ್ನು ಬಿಜೆಪಿ ಶಾಸಕ ಎಸ್‌. ಸುರೇಶ್‌ಕುಮಾರ್ ಪ್ರಶ್ನಿಸಿದ್ದಾರೆ.

‘ಮೆಗಾಫೋನ್‌ನಿಂದ ನೆಮ್ಮದಿಗೆ ಭಂಗವಾಗುತ್ತಿದೆ’ ಎಂಬುದಾಗಿ ಸಾರ್ವಜನಿಕರೊಬ್ಬರು ನೀಡಿದ್ದ ದೂರಿನ ನೆಪದಲ್ಲಿ ಪೂರ್ವ ವಿಭಾಗದ ಪೊಲೀಸರು ಇತ್ತೀಚೆಗಷ್ಟೇ ತಳ್ಳುಗಾಡಿ ವ್ಯಾಪಾರಿಗಳ ಮೆಗಾಫೋನ್‌ಗಳನ್ನು ಜಪ್ತಿ ಮಾಡಿದ್ದರು. ಈ ವರ್ತನೆಗೆ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ, ಸುರೇಶ್‌ಕುಮಾರ್ ಸಹ ವ್ಯಾಪಾರಿಗಳ ಪರ ನಿಂತಿದ್ದಾರೆ.

ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ಪತ್ರ ಬರೆದಿರುವ ಸುರೇಶ್‌ಕುಮಾರ್, ‘ಮೆಗಾಫೋನ್‌ ಜಪ್ತಿ ಮಾಡುವಂತೆ ತೆಗೆದುಕೊಂಡಿರುವ ತೀರ್ಮಾನವನ್ನು ಬಡ ವ್ಯಾಪಾರಿಗಳ ಹಿತವನ್ನು ಮನಸ್ಸಿನಲ್ಲಿಟ್ಟುಕೊಂಡು ಪರಾಮರ್ಶೆ ಮಾಡಬೇಕು’ ಎಂದು ಕೋರಿದ್ದಾರೆ.

ADVERTISEMENT

‘ಬಿಸಿಲು, ಮಳೆ, ಚಳಿ, ಗಾಳಿ ಎನ್ನದೇ ತಳ್ಳುಗಾಡಿಯಲ್ಲಿ ಕಿ.ಮೀ.ಗಟ್ಟಲೇ ಸುತ್ತಾಡಿ ವ್ಯಾಪಾರ ಮಾಡುವ ವ್ಯಕ್ತಿಗಳ ಬಗ್ಗೆ ಕನಿಕರ ಇರಬೇಕು. ಆರ್ಥಿಕವಾಗಿ ಹಿಂದುಳಿದ ವ್ಯಾಪಾರಿಗಳು, ಲಾಕ್‌ಡೌನ್ ಸಮಯದಲ್ಲಿ ಸಾಕಷ್ಟು ಜರ್ಜರಿತರಾಗಿದ್ದಾರೆ. ಇವರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಮೊದಲನೇ ದಿನ ಸಂಬಳ ಬಂದು ಬೀಳುವುದಿಲ್ಲ ಎಂಬುದನ್ನು ನೀವು ಅರಿತುಕೊಳ್ಳಬೇಕು’ ಎಂದೂ ಹೇಳಿದ್ದಾರೆ.

‘ಸಾಮಗ್ರಿಗಳ ಬಗ್ಗೆ ಒಬ್ಬ ವ್ಯಕ್ತಿ ಎಷ್ಟು ಬಾರಿ ಕೂಗಿ ಹೇಳಬಹುದೆಂದು ನೀವು ಯೋಚಿಸಬೇಕಿತ್ತು. ತಳ್ಳುಗಾಡಿ ವ್ಯಾಪಾರಿಗಳು ಧ್ವನಿವರ್ಧಕ ನಿಯಂತ್ರಣ ಮಾಡುವ ಕುರಿತು ಜಾಗೃತಿ ಮೂಡಿಸಬೇಕಾದ ನೀವು, ಇಡೀ ದಿನ ಗಂಟಲು ಶೋಷಣೆ ಮಾಡಿಕೊಂಡೇ ವ್ಯಾಪಾರ ಮಾಡಿ ಎಂದು ಹೇಳುವುದು ಸರಿಯಲ್ಲ. ಇದು ಮಾನವೀಯ ನಡವಳಿಕೆಯಲ್ಲ.’

‘ನಿಮ್ಮ ಹೊಯ್ಸಳ ಗಸ್ತು ವಾಹನ ಹಾಗೂ ಅಂಬುಲೆನ್ಸ್‌ಗಳು ರಾತ್ರಿ ವೇಳೆ ಸೈರನ್ ಹಾಕಿಕೊಂಡು ಹೋಗುವಾಗ ನೆಮ್ಮದಿಗೆ ಭಂಗವಾಗುವುದಾಗಿ ಯಾರಾದರೂ ದೂರು ಕೊಟ್ಟರೆ, ನಿಮ್ಮ ವಾಹನಗಳ ಓಡಾಟವನ್ನೂ ನಿಲ್ಲಿಸುತ್ತೀರಾ’ ಎಂದು ಸುರೇಶ್‌ಕುಮಾರ್‌ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.