
ಬೆಂಗಳೂರು: ನಗರದ ಮೇಕ್ರಿ ವೃತ್ತದ ಬಳಿ ನಡುರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಕಾರಿನ ಮೇಲೇರಿ ವ್ಯಕ್ತಿಯೊಬ್ಬರು ರಂಪಾಟ ನಡೆಸಿದ್ದರು.
ಸೂಪರ್ ಮಾರ್ಕೆಟ್‌ನಲ್ಲಿ ವ್ಯವಸ್ಥಾಪಕರಾಗಿದ್ದ ಸಂತೋಷ್ ಅವರು ರಂಪಾಟ ನಡೆಸಿದ್ದರಿಂದ ಮೇಕ್ರಿ ವೃತ್ತದ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿತ್ತು. ಸಾರ್ವಜನಿಕರು ಹಾಗೂ ಪೊಲೀಸರು ಹರಸಾಹಸಪಟ್ಟು ಕಾರಿನಿಂದ ಕೆಳಗಿಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು.
ಸಂತೋಷ್ ಅವರು ಮೈಸೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಲು ಬಾಡಿಗೆ ಕಾರು ಮಾಡಿಕೊಂಡು ಬಂದಿದ್ದರು. ಮೇಕ್ರಿ ವೃತ್ತದ ಬಳಿ ಕ್ಯಾಬ್ ಚಾಲಕನೊಂದಿಗೆ ಜಗಳ ಮಾಡಿಕೊಂಡಿದ್ದರು. ನಂತರ, ಸಂಚಾರ ದಟ್ಟಣೆ ಮಧ್ಯೆ ಏಕಾಏಕಿ ಕಾರಿನಿಂದ ಇಳಿದಿದ್ದ ಅವರು, ಕಾರಿನ ಮೇಲೆ ಹತ್ತಿ ರಂಪಾಟ ಶುರುಮಾಡಿದ್ದರು. ಜೋರಾಗಿ ಕೂಗಿದ್ದರು. ಸಂತೋಷ್ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಆಗ ಸಂತೋಷ್ ಅವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಪೊಲೀಸರು, ಸಂತೋಷ್ ಅವರ ಕೈ ಕಾಲು ಕಟ್ಟಿ ಮಲಗಿಸಿ, ಅವರನ್ನು ಕಾರಿನಿಂದ ಕೆಳಗೆ ಇಳಿಸಿದ್ದಾರೆ. ಆಗ ಸಾರ್ವಜನಿಕರೂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಬಳಿಕ ರಂಪಾಟ ನಡೆಸಿದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಕರೆದೊಯ್ದರು.
‘ಸಂತೋಷ್ ಸೂಪರ್ ಮಾರ್ಕೆಟ್‌ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಆರು ಕೆಲಸ ಕಳೆದುಕೊಂಡು ಮಾನಸಿಕವಾಗಿ ನೊಂದಿದ್ದರು. ದಾಂಪತ್ಯ ಜೀವನದಲ್ಲೂ ಸಮಸ್ಯೆ ಉಂಟಾಗಿತ್ತು. ಇದೇ ಕಾರಣಕ್ಕೆ ರಸ್ತೆಯಲ್ಲಿ ರಂಪಾಟ ನಡೆಸಿರುವ ಸಾಧ್ಯತೆಯಿದೆ’ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.