ತುಷಾರ್ ಗಿರಿನಾಥ್
ಬೆಂಗಳೂರು: ಮೆಲ್ಬರ್ನ್ ಮತ್ತು ಬೆಂಗಳೂರು ನಗರಗಳ ನಡುವಿನ ನವೀನ, ಸ್ಥಿರತೆ ಮತ್ತು ಸಮಗ್ರ ನಗರಾಭಿವೃದ್ಧಿಯನ್ನು ಉತ್ತೇಜಿಸಲು ಉಭಯ ನಗರಗಳು ಆಸಕ್ತಿ ವ್ಯಕ್ತಪಡಿಸಿವೆ.
ಆಸ್ಟ್ರೇಲಿಯಾದ ಮೆಲ್ಬರ್ನ್‌ನ ಲಾರ್ಡ್ ಮೇಯರ್ ನಿಕೊಲಸ್ ರೀಸ್ ಮತ್ತು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ‘ಉದ್ದೇಶ ಪತ್ರ’ಗಳನ್ನು ವಿನಿಯಮ ಮಾಡಿಕೊಂಡರು.
‘ಸಿಸ್ಟರ್ ಸಿಟಿ’ಗಳ ನಡುವಿನ ಪರಸ್ಪರ ಸಹಕಾರವನ್ನು ಗಟ್ಟಿಗೊಳಿಸುವ ಉದ್ದೇಶದಿಂದ, ಎರಡೂ ನಗರಗಳು, ನಗರ ನವೀನತೆ –ಸ್ಮಾರ್ಟ್ ಸಿಟಿ, ತಂತ್ರಜ್ಞಾನ–ನಾವೀನ್ಯ ಪರಿಸರ ವ್ಯವಸ್ಥೆ, ಸುಸ್ಥಿರತೆ– ಹವಾಮಾನ ಸ್ಥಿತಿಸ್ಥಾಪಕ, ಶಿಕ್ಷಣ–ಜ್ಞಾನ ವಿನಿಮಯ, ಸಾಂಸ್ಕೃತಿಕ–ಕ್ರೀಡಾ ವಿನಿಮಯ ಸಾಧಿಸಲಾಗುತ್ತದೆ.
ತುಷಾರ್ ಗಿರಿನಾಥ್ ಮಾತನಾಡಿ, ‘ಮೆಲ್ಬರ್ನ್ ಹಾಗೂ ಬೆಂಗಳೂರು ನಡುವಿನ ವ್ಯವಸ್ಥಿತ ಮಾಹಿತಿ ವಿನಿಮಯ ಮತ್ತು ಅನುಭವ ಹಂಚಿಕೆಯಿಂದ ಎರಡೂ ನಗರಗಳ ಅಭಿವೃದ್ಧಿಗೆ ದಾರಿಯಾಗಲಿದೆ’ ಎಂದು ತಿಳಿಸಿದರು.
‘ನಗರಗಳ ನಡುವಿನ ಈ ಉದ್ದೇಶ ಘೋಷಣೆ, ಪರಸ್ಪರ ಕಲಿಕೆ ಮತ್ತು ಸಹಕಾರಕ್ಕೆ ಬಲ ತುಂಬುತ್ತದೆ. ಇದರಿಂದ ನಗರಾಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗಲಿದೆ’ ಎಂದು ಮಹೇಶ್ವರ್ ಹೇಳಿದರು.
ನಿಕೊಲಸ್ ರೀಸ್ ಮಾತನಾಡಿ, ‘ಸಹಕಾರ ಮತ್ತು ಪರಿಣಿತಿಯ ಹಂಚಿಕೆ ಮೂಲಕ, ಎರಡೂ ನಗರಗಳ ಹೊಸತನ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಎಐ ಆಧಾರಿತ ನಗರ ಪರಿಹಾರಗಳನ್ನು ರೂಪಿಸಲು ನಾವು ಎದುರು ನೋಡುತ್ತಿದ್ದೇವೆ’ ಎಂದು ಅಭಿಪ್ರಾಯಪಟ್ಟರು.
ಜಿಬಿಎ ಹಾಗೂ ನಗರ ಪಾಲಿಕೆಗಳ ಕಾರ್ಯವೈಖರಿ, ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಮತ್ತು ಮುಂದಿನ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಲಾಯಿತು.
ಮೆಲ್ಬರ್ನ್‌ನ ಉಪ ಲಾರ್ಡ್ ಮೇಯರ್ ರೋಶೇನಾ ಕ್ಯಾಂಪ್‌ಬೆಲ್, ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್, ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.