ADVERTISEMENT

ಆರೋಗ್ಯ ಕಡೆಗಣಿಸುತ್ತಿರುವ ಪುರುಷರು: ನ್ಯೂರಾ ಸಂಸ್ಥೆ

ನ್ಯೂರಾ ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ. ತೌಸಿಫ್ ಅಹ್ಮದ್ ತಂಗಲ್ವಾಡಿ ಕಳವಳ

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 15:56 IST
Last Updated 16 ಜೂನ್ 2022, 15:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಆರೋಗ್ಯ ಕಡೆಗಣನೆ ಮತ್ತು ರೋಗ ಲಕ್ಷಣಗಳ ನಿರ್ಲಕ್ಷ್ಯದಿಂದಾಗಿ ಪುರುಷರ ಜೀವಿತಾವಧಿ ಮಹಿಳೆಯರಿಗಿಂತ ಕಡಿಮೆ’ ಎಂದುನ್ಯೂರಾ ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ. ತೌಸಿಫ್ ಅಹ್ಮದ್ ತಂಗಲ್ವಾಡಿ ತಿಳಿಸಿದರು.

ಸಂಸ್ಥೆಯು ನಗರದಲ್ಲಿ ಗುರುವಾರ ಹಮ್ಮಿಕೊಂಡಪುರುಷರ ಆರೋಗ್ಯ ಸಪ್ತಾಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಸಾಮಾಜಿಕ ಪರಿಸ್ಥಿತಿಯಿಂದಾಗಿ ಪುರುಷರು ದೈಹಿಕ ಯೋಗಕ್ಷೇಮದ ಬಗ್ಗೆ ಗಮನಹರಿಸುತ್ತಿಲ್ಲ. ಇದರಿಂದಾಗಿ ಅವರಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಿದೆ. ಅವರು ಆಗಾಗ ವೈದ್ಯರನ್ನು ಭೇಟಿ ಮಾಡಿ, ಅಗತ್ಯ ಸಲಹೆ ಪಡೆದುಕೊಳ್ಳುತ್ತಾರೆ. ರೋಗ ಲಕ್ಷಣ ಗಂಭೀರ ಸ್ವರೂಪಕ್ಕೆ ಹೋದಾಗ ಮಾತ್ರ ಪುರುಷರು ಆಸ್ಪತ್ರೆಗಳಿಗೆ ತೆರಳುತ್ತಾರೆ. ಇದರಿಂದಾಗಿ ರೋಗ ಉಲ್ಬಣಗೊಂಡು, ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದರು.

‘ಪುರುಷರು ಅನಾರೋಗ್ಯದ ಪ್ರಾರಂಭಿಕ ಗುಣಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ.ವೈದ್ಯಕೀಯ ನೆರವು ಪಡೆಯುವುದು ದೌರ್ಬಲ್ಯದ ಸಂಕೇತ ಎಂದು ಕೆಲವರು ಭಾವಿಸುತ್ತಾರೆ. ತಮ್ಮ ಆರೋಗ್ಯದ ಬಗ್ಗೆ ಕುಟುಂಬದ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಚರ್ಚಿಸಲು ಹಿಂದೇಟು ಹಾಕುತ್ತಾರೆ. ಇದರಿಂದಾಗಿ ಪುರುಷರಲ್ಲಿ ಹೃದಯಾಘಾತ, ಪಾರ್ಶ್ವವಾಯು, ಮಧುಮೇಹ, ಶ್ವಾಸಕೋಶ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ನಗರದಲ್ಲಿ ಕಳೆದ ವರ್ಷ ಆರೋಗ್ಯವಂತ 2 ಸಾವಿರ ಮಂದಿಗೆ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಶೇ 70ಕ್ಕಿಂತ ಅಧಿಕ ಜನರ ದೇಹದಲ್ಲಿ ಅಧಿಕ ಕೊಬ್ಬಿನಾಂಶ ಕಂಡುಬಂದಿದೆ. ಇದು ಹೃದ್ರೋಗ ಹಾಗೂ ಮಧುಮೇಹಕ್ಕೆ ಕಾರಣವಾಗುತ್ತದೆ. ತಪಾಸಣೆಗೆ ಒಳಪಟ್ಟವರಲ್ಲಿ ಶೇ 35 ರಷ್ಟು ಮಂದಿಯಲ್ಲಿ ಮಧುಮೇಹ ದೃಢಪಟ್ಟರೆ, ಶೇ 20ರಷ್ಟು ಮಂದಿ ಮಧುಹೇಹದ ಪ್ರಾರಂಭಿಕ ಹಂತದಲ್ಲಿದ್ದರು. ಕೆಲವರಲ್ಲಿ ಹೃದಯ, ಶ್ವಾಸಕೋಶ ಸಮಸ್ಯೆಯ ಲಕ್ಷಣಗಳೂ ಗೋಚರಿಸಿವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.