ADVERTISEMENT

ಮೀಟರ್ ಬಡ್ಡಿ: ₹ 33 ಲಕ್ಷ ಸಮೇತ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 16:11 IST
Last Updated 14 ಜೂನ್ 2022, 16:11 IST
   

ಬೆಂಗಳೂರು: ಮೀಟರ್ ಬಡ್ಡಿ ದಂಧೆ ನಡೆಸುತ್ತ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದ ಆರೋಪದಡಿ ಸುದರ್ಶನ್ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಆವಲಹಳ್ಳಿ ನಿವಾಸಿ ಸುದರ್ಶನ್ ಅಕ್ರಮವಾಗಿ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದ. ಈ ಬಗ್ಗೆ ಕೆಲ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಮನೆ ಮೇಲೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘₹ 33 ಲಕ್ಷ ನಗದು, 800 ಗ್ರಾಂ ಚಿನ್ನಾಭರಣ, ಖಾಲಿ ಚೆಕ್‌ಗಳು, ವಾಹನಗಳ ನೋಂದಣಿ ಪತ್ರಗಳು ಹಾಗೂ ಆಸ್ತಿ ದಾಖಲೆಗಳನ್ನು ಆರೋಪಿಯಿಂದ ಜಪ್ತಿ ಮಾಡಲಾಗಿದೆ.'

ADVERTISEMENT

‘ಬೀದಿ–ಬದಿ ಹಾಗೂ ತಳ್ಳುಗಾಡಿ ವ್ಯಾಪಾರಿಗಳು, ಸಣ್ಣ–ಪುಟ್ಟ ವ್ಯವಹಾರ ಮಾಡುತ್ತಿದ್ದವರು, ಖಾಸಗಿ ಕಂಪನಿ ಉದ್ಯೋಗಿಗಳು ಹಾಗೂ ಹಲವರಿಗೆ ಆರೋಪಿ ಸಾಲ ನೀಡುತ್ತಿದ್ದ. ಶೇ 6ರಷ್ಟು ಬಡ್ಡಿ ವಸೂಲಿ ಮಾಡುತ್ತಿದ್ದ. ನಿಗದಿತ ದಿನದಂದು ಬಡ್ಡಿ ನೀಡದಿದ್ದಾಗ, ಒತ್ತಾಯದಿಂದ ಮೀಟರ್ ಬಡ್ಡಿ ಪಡೆಯುತ್ತಿದ್ದ’ ಎಂದು ಅಧಿಕಾರಿ ತಿಳಿಸಿದರು.

‘ಕೆಲವರು, ನಿಗದಿತ ಬಡ್ಡಿ ಸಮೇತ ಅಸಲು ತೀರಿಸಿದ್ದರು. ಅಂಥವರಿಗೆ ಆರೋಪಿ, ದಾಖಲೆಗಳನ್ನು ವಾಪಸು ಕೊಡುತ್ತಿರಲಿಲ್ಲವೆಂದು ಗೊತ್ತಾಗಿದೆ. ಆರೋಪಿಯಿಂದ ಯಾದರೂ ತೊಂದರೆ ಅನುಭವಿಸಿದ್ದರೆ ದೂರು ನೀಡಬಹುದು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.