ADVERTISEMENT

ನಿಲ್ಲದ ಕಾರ್‌ ಪೂಲಿಂಗ್‌

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 19:45 IST
Last Updated 10 ಜುಲೈ 2019, 19:45 IST
   

ಚೀನಾದಲ್ಲಿ ವಾಯುಮಾಲಿನ್ಯ ಮಿತಿಮೀರಿದಾಗಅಲ್ಲಿನ ಸರ್ಕಾರ ಕಾರ್‌ ಪೂಲಿಂಗ್‌ ಕಡ್ಡಾಯ ಮಾಡಿತು. ಪೂಲಿಂಗ್‌ ಮಾಡದ ಕಾರುಗಳಿಗೆ ದಂಡ ವಿಧಿಸಿತು. ಕ್ರಮೇಣ ರಸ್ತೆಯಲ್ಲಿ ಕಾರುಗಳ ಸಂಖ್ಯೆ ಕಡಿಮೆಯಾಯಿತು. ಟ್ರಾಫಿಕ್‌ ಸಮಸ್ಯೆ ಬಗೆಹರಿಯಿತು. ಮಾಲಿನ್ಯ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿತು.

* * *

ನಗರದ ಟ್ರಾಫಿಕ್‌ ಸಮಸ್ಯೆಗೆ ಸ್ವಲ್ಪಮಟ್ಟಿನ ಪರಿಹಾರ ಒದಗಿಸಿದ್ದ ಮತ್ತು ಅಗ್ಗದ ದರದಲ್ಲಿಮಧ್ಯಮ ವರ್ಗದ ಪ್ರಯಾಣಿಕರು ಸಂಚರಿಸಲು ಅನುಕೂಲಕರವಾಗಿದ್ದ ‘ಕಾರ್‌ ಪೂಲಿಂಗ್‌’ ಸೇವೆಯನ್ನು ಸಾರಿಗೆ ಇಲಾಖೆ ನಿರ್ಬಂಧಿಸಿಸಿ ಹಲವು ದಿನಗಳಾದರೂ ಶೇರ್‌ ರೈಡಿಂಗ್‌ ಸೇವೆ ಯಥಾರೀತಿ ಮುಂದುವರಿದಿದೆ.

ADVERTISEMENT

ಪೂಲಿಂಗ್‌ ಮುಂದುವರಿಸುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಹತ್ತು ದಿನಗಳ ಹಿಂದೆಯೇ ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆಗೆ ಮಣಿಯದ ಎರಡೂ ಕಂಪನಿಗಳು ಪೂಲಿಂಗ್‌ ಸೇವೆಯನ್ನು ಮುಂದುವರಿಸಿವೆ. ಕಂಪನಿಗಳ ಆ್ಯಪ್‌ನಲ್ಲಿ ಎರಡೂ ಸೇವೆಗಳು ಇನ್ನೂ ಚಾಲ್ತಿಯಲ್ಲಿವೆ.

ನಗರದಲ್ಲಿ 65 ಸಾವಿರ ಓಲಾ ಮತ್ತು ಉಬರ್ ಕಂಪನಿಗಳಲ್ಲಿ ನೋಂದಣಿಯಾದ ಕ್ಯಾಬ್‌ಗಳಿವೆ.ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುತ್ತಿರುವ ಓಲಾ ಮತ್ತು ಊಬರ್‌ ಕಂಪನಿಗಳ ‘ಶೇರ್’ ಮತ್ತು ‘ಪೂಲ್‌’ ಸೇವೆಗಳು ನಗರದಲ್ಲಿ ಹೆಚ್ಚು ಜನಪ್ರಿಯವಾಗಿವೆ.

ಒಂದೇ ಕಡೆ ಪ್ರಯಾಣಿಸುವ ಮೂರ್‍ನಾಲ್ಕು ಪ್ರಯಾಣಿಕರನ್ನು ಒಂದೇ ಕಾರಿನಲ್ಲಿ ಕರೆದೊಯ್ಯುವ ಪೂಲಿಂಗ್‌ ಸೇವೆಯನ್ನು ಅನೇಕರು ಬಳಸುತ್ತಿದ್ದರು. ಸ್ವಂತ ಕಾರಿನ ಬದಲು ಪೂಲಿಂಗ್‌ ಬಳಸುತ್ತಿದ್ದರು. ಆಟೊಗಳಿಗೆ ನೀಡುವ ಹಣಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಜನರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇದರಿಂದ ಸಂಚಾರ ದಟ್ಟನೆ ಕೂಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.

ಇಂತಹ ಹೊತ್ತಿನಲ್ಲಿ ವಾಣಿಜ್ಯ ಉದ್ದೇಶಕ್ಕೆ ಕಾರ್‌ ಪೂಲಿಂಗ್‌ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಏಕಾಏಕಿ ನಿಷೇಧಿಸಿದೆ. ಇಂತಹ ನಿರ್ಧಾರ ಇದೇ ಮೊದಲೇನಲ್ಲ. 2017ರಲ್ಲಿ ಪೂಲಿಂಗ್‌ ಸೇವೆ ನಿಷೇಧಿಸಲು ಸಾರಿಗೆ ಇಲಾಖೆ ಮುಂದಾಗಿತ್ತು. ಪ್ರಬಲ ವಿರೋಧದಿಂದಾಗಿ ನಿರ್ಧಾರದಿಂದ ಹಿಂದೆ ಸರಿದಿತ್ತು.

ವಾಣಿಜ್ಯ ಉದ್ದೇಶಕ್ಕೆ ಕಾರ್‌ ಪೂಲಿಂಗ್‌ ಮತ್ತು ಶೇರ್‌ ಮಾಡಲು ಅವಕಾಶ ನೀಡುವುದಿಲ್ಲ. ಈ ಬಗ್ಗೆ ಆ್ಯಪ್‌ ಆಧಾರಿತ ಸೇವೆ ಒದಗಿಸುತ್ತಿರುವ ಟ್ಯಾಕ್ಸಿ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಅದನ್ನು ಮೀರಿ ಕೆಲವು ಟ್ಯಾಕ್ಸಿ ಕಂಪನಿಗಳು ಇನ್ನೂ ಸೇವೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ನರೇಂದ್ರ ಹೋಳ್ಕರ್‌ ‘ಮೆಟ್ರೊ’ಗೆ ತಿಳಿಸಿದರು.

ಈ ಬಗ್ಗೆ ಓಲಾ ಮತ್ತು ಊಬರ್‌ ಸಂಸ್ಥೆಯ ಅಧಿಕಾರಿಗಳ ಪ್ರತಿಕ್ರಿಯೆ ಪಡೆಯುವ ಪ್ರಯತ್ನ ಫಲ ನೀಡಲಿಲ್ಲ. ಹಲವಾರು ಬಾರಿ ದೂರವಾಣಿ ಕರೆ ಮಾಡಿದರೂ ಅಧಿಕಾರಿಗಳು ಸಂಪರ್ಕಕ್ಕೆ ಸಿಗಲಿಲ್ಲ. ಓಲಾ, ಊಬರ್‌ ಟ್ಯಾಕ್ಸಿ ಚಾಲಕರು ಈ ಬಗ್ಗೆ ಮಾಹಿತಿ ನೀಡಿದರು.

ಕಡಿಮೆ ವೆಚ್ಚದಲ್ಲಿ ಸುರಕ್ಷಿತವಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆವು. ಸಂಚಾರ ದಟ್ಟನೆಯೂ ಇರುತ್ತಿರಲಿಲ್ಲ. ಸಾರಿಗೆ ಇಲಾಖೆ ಏಕಾಏಕಿ ಪೂಲಿಂಗ್‌ ಸೇವೆ ರದ್ದು ಮಾಡಿರುವುದು ಸರಿಯಾದ ನಿರ್ಧಾರವಲ್ಲ. ಪ್ರಯಾಣಿಕರ ಸುರಕ್ಷತೆ ಲಕ್ಷ್ಯದಲ್ಲಿರಿಸಿಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಇದು ಸರಿಯಲ್ಲ ಎನ್ನುತ್ತಾರೆ ಐ.ಟಿ ಕಂಪನಿ ಉದ್ಯೋಗಿ ನಿರಂಜನ್‌ ಕಾಟ್ರಳ್ಳಿ.

***

‘ಕಾರ್‌ ಪೂಲಿಂಗ್‌’ ಸೇವೆ ಒದಗಿಸುವ ಕಂಪನಿಗಳು ರಾಜ್ಯ ಬೇಡಿಕೆ ಆಧಾರಿತ ವೆಬ್‌ ತಂತ್ರಜ್ಞಾನ, ಅಗ್ರಿಗೇಟರ್‌ ಕಾಯ್ದೆ-2016 ಉಲ್ಲಂಘಿಸಿವೆ. ಹಾಗಾಗಿ ಇದನ್ನು ನಿರ್ಬಂಧಿಸಲಾಗಿದೆ.ನಿಯಮದಲ್ಲಿ ಬದಲಾವಣೆ ತರುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಒಪ್ಪಿಗೆ ದೊರೆತರೆ ಪೂಲಿಂಗ್‌ ವ್ಯವಸ್ಥೆಗೆ ನಮ್ಮ ಅಭ್ಯಂತರ ಇಲ್ಲ.ಸಾರಿಗೆ ಇಲಾಖೆ ಕಾರ್‌ ಪೂಲಿಂಗ್‌ ವಿರುದ್ಧ ಇಲ್ಲ. ಆದರೆ, ಅಲ್ಲಿಯವರೆಗೆ ಇಲಾಖೆ ನೀಡಿದ ಸೂಚನೆಯನ್ನು ಸಂಸ್ಥೆಗಳು ಪಾಲಿಸಬೇಕು

–ವಿ.ಪಿ. ಇಕ್ಕೇರಿ, ಆಯುಕ್ತರು, ಸಾರಿಗೆ ಇಲಾಖೆ

***

ಸೂಚನೆಯ ಹೊರತಾಗಿಯೂ ಪೂಲಿಂಗ್‌ ಸೇವೆ ಮುಂದುವರಿಸಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸಾರಿಗೆ ಇಲಾಖೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ.ಪೂಲಿಂಗ್‌ ಸೇವೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನೀತಿ ರೂಪಿಸುತ್ತಿದೆ. ಈ ಸಂಬಂಧ ಮೂರು ಸಭೆಗಳಾಗಿವೆ. ಕೇಂದ್ರ ಶೀಘ್ರ ಹೊಸ ನೀತಿ ಪ್ರಕಟಿಸಲಿದೆ. ಅಲ್ಲಿಯವರೆಗೆ ನಿಷೇಧ ಮುಂದುವರಿಯಲಿದೆ ಎನ್ನುತ್ತಾರೆ.

– ನರೇಂದ್ರ ಹೋಳ್ಕರ್‌, ಹೆಚ್ಚುವರಿ ಸಾರಿಗೆ ಆಯುಕ್ತ

***

ಷೇರಿಂಗ್‌ನಿಂದ ಪ್ರಯಾಣಿಕರಿಗೆ ಅನುಕೂಲವಾಗಬಹುದೇ ಹೊರತು ಬೆಂಗಳೂರಿನ ಟ್ರಾಫಿಕ್‌ ಕಿರಿಕಿರಿ ಮತ್ತು ದುಬಾರಿ ಪೆಟ್ರೋಲ್‌, ಡೀಸೆಲ್‌ನಿಂದಾಗಿ ಚಾಲಕರಿಗೆ ಲಾಭವಿಲ್ಲ. ಪೂಲಿಂಗ್‌ ನಿರ್ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆ್ಯಪ್‌ನಲ್ಲಿ ಆಯ್ಕೆ ಇದೆ. ನಮಗೂ ಷೇರ್‌ ರೈಡಿಂಗ್‌ ನೀಡಲಾಗುತ್ತಿದೆ.

– ಸಂತೋಷ್‌, (ರಾಯಚೂರು) ಉಬರ್‌ ಚಾಲಕ

***

ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಕಂಪನಿ ಇನ್ನೂ ಷೇರಿಂಗ್‌ ನೀಡುತ್ತಿದೆ. ಸಾರಿಗೆ ಇಲಾಕೆಯವರು ನಮ್ಮನ್ನು ತಡೆದಿಲ್ಲ. ದಂಡವನ್ನೂ ಹಾಕಿಲ್ಲ. ಷೇರಿಂಗ್‌ನಿಂದ ನಮಗೆ ಹೆಚ್ಚು ಲಾಭವಿಲ್ಲ. ಕಂಪನಿ ಬೇಡ ಎಂದು ಸೂಚಿಸಿದರೆ ತಕ್ಷಣಕ್ಕೆ ಈ ಸೇವೆಯನ್ನು ನಿಲ್ಲಿಸುತ್ತೇವೆ

– ಸಿದ್ದು ವಿಜಯಪುರ, ಊಬರ್‌, ಓಲಾ ಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.