ADVERTISEMENT

ಮೆಟ್ರೊ ಎರಡನೇ ಹಂತದ ಕಾಮಗಾರಿ: ₹32 ಸಾವಿರ ಕೋಟಿಗೇರಿದ ಯೋಜನಾ ವೆಚ್ಚ

ಪೂರ್ಣಗೊಳಿಸಲು 2023ರವರೆಗೆ ಗುಡುವು ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 19:33 IST
Last Updated 26 ಅಕ್ಟೋಬರ್ 2018, 19:33 IST
   

ಬೆಂಗಳೂರು: ಮೆಟ್ರೊ ಎರಡನೇ ಹಂತದ ಕಾಮಗಾರಿ ವೆಚ್ಚ ₹ 26 ಸಾವಿರ ಕೋಟಿಗಳಿಂದ ₹ 32 ಸಾವಿರ ಕೋಟಿಗೆ ಹಿಗ್ಗಿದೆ. ಮಾತ್ರವಲ್ಲ, ಗೊಟ್ಟಿಗೆರೆ– ನಾಗವಾರ ಮಾರ್ಗದ ಕಾಮಗಾರಿ ಪೂರ್ಣಗೊಳಿಸಲು ನೀಡಲಾಗಿದ್ದ ಗಡುವನ್ನು 2023ರವರೆಗೆ ವಿಸ್ತರಿಸಲಾಗಿದೆ.

ಉಪಮುಖ್ಯಮಂತ್ರಿ, ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರು ಶುಕ್ರವಾರ ಮೆಟ್ರೊ ನಿಗಮದ ಅಧಿಕಾರಿಗಳ ಸಭೆಯಲ್ಲಿ ಕಾಮಗಾರಿಗಳ ವಿವರ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೆಟ್ರೊ ಎರಡನೇ ಹಂತದ
ಪರಿಷ್ಕೃತ ಅಂದಾಜಿನ ಪ್ರಕಾರ ₹ 6 ಸಾವಿರ ಕೋಟಿಯಷ್ಟು ಹೆಚ್ಚುವರಿ ವೆಚ್ಚವನ್ನು ಭರಿಸಬೇಕಿದೆ’ ಎಂದು ಹೇಳಿದರು.

ಇದರಲ್ಲಿ ಮೊದಲ ಹಂತದ ನಾಲ್ಕು ರೀಚ್‌ಗಳ ಮಾರ್ಗ ವಿಸ್ತರಣೆ, ರಾಷ್ಟ್ರೀಯ ವಿದ್ಯಾಲಯ ರಸ್ತೆ–ಬೊಮ್ಮಸಂದ್ರ (ರೀಚ್‌–5) ಮತ್ತು ಗೊಟ್ಟಿಗೆರೆ–ನಾಗವಾರ (ರೀಚ್‌–6) ಮಾರ್ಗ ನಿರ್ಮಾಣ ಯೋಜನೆಯೂ ಒಳಗೊಂಡಿದೆ. 2014ರಲ್ಲಿ ರಾಜ್ಯ ಸರ್ಕಾರವು ಈ ಯೋಜನೆಗೆ ₹ 26,405.14 ಕೋಟಿ ಮೊತ್ತಕ್ಕೆ ಅನುಮೋದನೆ ನೀಡಿತ್ತು. ಇದರಲ್ಲಿ ಪ್ರತಿವರ್ಷಕ್ಕೆ ಶೇ 5ರಷ್ಟು ಏರಿಕೆಯಾಗುವ ವೆಚ್ಚವನ್ನೂ ಸೇರಿಸಲಾಗಿತ್ತು.

ADVERTISEMENT

2020ಕ್ಕೆ ಈ ಕಾಮಗಾರಿ ಪೂರ್ಣಗೊಳಿಸಲು ಗಡುವು ವಿಧಿಸಲಾಗಿತ್ತು. ಕೆಲವೆಡೆ ಕಾಮಗಾರಿ ವಿಳಂಬ ಇತ್ಯಾದಿಯನ್ನು ಗಮನಿಸಿದ ನಿಗಮವು ಈ ವರ್ಷ ಜನವರಿಯಲ್ಲಿ 2021ಕ್ಕೆ ಗಡುವು ವಿಸ್ತರಿಸಿತು.

‘ಕೆಂಗೇರಿ (ರೀಚ್‌ 2 ವಿಸ್ತರಣೆ) ಮತ್ತು ಬಿಐಇಸಿ (ರೀಚ್‌ 3) ಮಾರ್ಗಗಳು 2020ರಲ್ಲಿ ಪೂರ್ಣಗೊಳ್ಳಲಿವೆ. ವೈಟ್‌ಫೀಲ್ಡ್‌ (ರೀಚ್‌ 1) ಮತ್ತು ಅಂಜನಾಪುರ (ರೀಚ್‌ 4) ಮಾರ್ಗ ವಿಸ್ತರಣೆ ಕಾಮಗಾರಿಗಳು ಹಾಗೂ ಆರ್‌.ವಿ. ರಸ್ತೆ ಮತ್ತು ಬೊಮ್ಮಸಂದ್ರ (ರೀಚ್‌ 5) ಮಾರ್ಗಗಳು 2021ರಲ್ಲಿ ಪೂರ್ಣಗೊಳ್ಳಲಿವೆ’ ಎಂದು ಪರಮೇಶ್ವರ ಹೇಳಿದರು.

ಗೊಟ್ಟಿಗೆರೆ–ನಾಗವಾರ ಮಾರ್ಗದ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ‘ಈ ಮಾರ್ಗದಲ್ಲಿ ಸ್ವಾಗತ್‌ ರೋಡ್‌ ಕ್ರಾಸ್‌ ಮತ್ತು ನಾಗವಾರದ ನಡುವಿನ 13.7 ಕಿಲೊ ಮೀಟರ್‌ ಅಂತರದ ಮಾರ್ಗಕ್ಕೆ ಟೆಂಡರ್‌ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. 2023ಕ್ಕೆ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

₹ 30 ಕೋಟಿ ಆದಾಯ; 24 ಕೋಟಿ ವೆಚ್ಚ: ‘ಮೆಟ್ರೊನಿಗಮಕ್ಕೆ ತಿಂಗಳಿಗೆ ₹ 30 ಕೋಟಿ ಆದಾಯ ಬರುತ್ತಿದೆ. ₹ 24 ಕೋಟಿ ವೆಚ್ಚವಾಗುತ್ತಿದೆ.‌ ಭದ್ರತಾ ಸಿಬ್ಬಂದಿ, ಟಿಕೆಟ್‌ ವಿತರಕರು ಸೇರಿದಂತೆ ಅನಗತ್ಯ ಮಾನವಸಂಪನ್ಮೂಲ ಬಳಕೆಗೆ ಕಡಿವಾಣ ಹಾಕಬೇಕು. ಇದರಿಂದ ತಿಂಗಳಿಗೆ ಕನಿಷ್ಠ ₹ 5 ಕೋಟಿ ವೆಚ್ಚ ಉಳಿತಾಯವಾಗಲಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಹೇಳಿದರು.

ವಿಮಾನ ನಿಲ್ದಾಣಕ್ಕೆ ನಿರ್ಮಿಸಲು ಉದ್ದೇಶಿಸಿರುವ ಮೆಟ್ರೊ ಮಾರ್ಗದ ವಿನ್ಯಾಸ ಬದಲಾಗಿದೆ. ಹೊಸ ವಿನ್ಯಾಸದ ಪ್ರಕಾರ, ಮಾರ್ಗವು ನಾಗವಾರದಲ್ಲಿ ಎಡಕ್ಕೆ ತಿರುಗಿ ಹೊರವರ್ತುಲ ರಸ್ತೆ ಮೂಲಕ ಹೆಬ್ಬಾಳ ಸಂಪರ್ಕಿಸಲಿದೆ. ಈ ಹಿಂದೆ ಹೆಗಡೆ ನಗರದ ಮೂಲಕ ಜಕ್ಕೂರು ಮಾರ್ಗವಾಗಿ ವಿಮಾನ ನಿಲ್ದಾಣ ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ಮಾರ್ಗದ ವಿನ್ಯಾಸ ರೂಪಿಸಲಾಗಿತ್ತು. ಅದನ್ನು ಕೈಬಿಡಲಾಗಿದೆ. ಹೊಸ ವಿನ್ಯಾಸದ ಅನುಮೋದನೆ ಸಂಬಂಧಿಸಿ ಇನ್ನು 15 ದಿನಗಳ ಒಳಗೆ ಸಚಿವ ಸಂಪುಟಕ್ಕೆ ಕಳುಹಿಸಿ ಚರ್ಚಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಮೆಟ್ರೊ– ಬಿಎಂಟಿಸಿಗೆ ಒಂದೇ ಕಾರ್ಡ್‌

ಮೆಟ್ರೊ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಸಂಚರಿಸಲು ಒಂದೇ ಪ್ರಯಾಣ ಕಾರ್ಡ್‌ ಪರಿಚಯಿಸಲು ಚಿಂತನೆ ನಡೆದಿದೆ ಎಂದು ಜಿ.ಪರಮೇಶ್ವರ ಹೇಳಿದರು.

ಹೊಸ ಬಗೆಯ ಕಾರ್ಡ್‌ ವಿತರಣೆ ಕುರಿತು ಉಪಚುನಾವಣೆ ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಎರಡೂ ಸಾರಿಗೆ ವ್ಯವಸ್ಥೆಗಳಿಗೆ ಹೊಂದುವಂತೆ ಈ ಕಾರ್ಡನ್ನು ವಿನ್ಯಾಸಗೊಳಿಸಬೇಕಿದೆ ಎಂದ ಅವರು ಹೇಳಿದರು. ‘ಮೆಟ್ರೊದಲ್ಲಿ ನಿತ್ಯ 5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಆರು ಬೋಗಿಗಳನ್ನು ಹಂತ ಹಂತವಾಗಿ ಅಳವಡಿಸುವುದರಿಂದ ಪ್ರಯಾಣಿಕರ ಸಂಖ್ಯೆ ದ್ವಿಗುಣವಾಗಲಿದೆ. ಒಂದೇ ಕಾರ್ಡ್‌ ಪರಿಚಯಿಸಿದರೆ ಈ ಪ್ರಯಾಣಿಕರಿಗೆ ಅನುಕೂಲವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.