ADVERTISEMENT

ಮೆಟ್ರೊ ಪ್ರಯಾಣ ದರ: ಶೇ 70ಕ್ಕಿಂತ ಅಧಿಕ ಹೆಚ್ಚಳವಾಗಿದ್ದರೆ ಶೇ 30ರಷ್ಟು ಇಳಿಕೆ

ಉಳಿದ ಕಡೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ: ಬಿಎಂಆರ್‌ಸಿಎಲ್‌ ಎಂಡಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 11:12 IST
Last Updated 13 ಫೆಬ್ರುವರಿ 2025, 11:12 IST
<div class="paragraphs"><p>ಮೆಟ್ರೊ </p></div>

ಮೆಟ್ರೊ

   

ಬೆಂಗಳೂರು: ‘ನಮ್ಮ ಮೆಟ್ರೊ’ ಪ್ರಯಾಣ ದರ ಏರಿಕೆಯಾಗಿರುವುದನ್ನು ಮತ್ತೆ ಪರಿಷ್ಕರಿಸುವುದಿಲ್ಲ. ಆದರೆ, ತಾಂತ್ರಿಕ ಕಾರಣಗಳಿಂದ ಕೆಲವು ನಿಲ್ದಾಣಗಳಿಗೆ ಶೇ 70ರಿಂದ ಶೇ 100ರಷ್ಟು ಹೆಚ್ಚಳವಾಗಿದೆ. ಅಂಥ ಕಡೆಗಳಲ್ಲಿ ಶೇ 30ರಷ್ಟು ಕಡಿಮೆ ಮಾಡಲಾಗುವುದು ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಸ್‌. ಮಹೇಶ್ವರ ರಾವ್‌ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ದರ ಏರಿಕೆಯನ್ನು ಸಮರ್ಥಿಸಿಕೊಂಡರು.

ADVERTISEMENT

ಮೆಟ್ರೊ ಪ್ರಯಾಣ ಏರಿಕೆ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಒಟ್ಟು ಹೆಚ್ಚಳದಲ್ಲಿ ಇಳಿಕೆಯೂ ಇರುವುದಿಲ್ಲ. ‌ಕನಿಷ್ಠದರ ₹ 10, ಗರಿಷ್ಠ ದರ ₹ 90 ನಿಗದಿ ಮಾಡಲಾಗಿದ್ದು, ಅದೇ ದರ ಮುಂದುವರಿಯಲಿದೆ ಎಂದು ತಿಳಿಸಿದರು.

ಒಟ್ಟು 70 ಮೆಟ್ರೊ ನಿಲ್ದಾನಗಳಿವೆ. ದರ ಹೆಚ್ಚಳ ವೇಳೆ ಕೆಲವು ಸ್ಟೇಜ್‌ಗಳ ದರದಲ್ಲಿ ವ್ಯತ್ಯಾಸವಾಗಿದೆ. ಈ ವ್ಯತ್ಯಾಸವನ್ನು ಮಾತ್ರ ಸರಿಪಡಿಸಲಾಗುವುದು. ಇದರಿಂದ 2.5 ಲಕ್ಷ ಪ್ರಯಾಣಿಕರಿಗೆ ತುಸು ಇಳಿಕೆಯ ಅನುಕೂಲ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.

8 ವರ್ಷ ಹೆಚ್ಚಳವಾಗಿಲ್ಲ: ‘2017ರ ನಂತರ ಮೆಟ್ರೊ ದರ ಹೆಚ್ಚಳವಾಗಿಲ್ಲ. 8 ವರ್ಷಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ವೇತನ ಶೇ 43ರಷ್ಟು ಹೆಚ್ಚಳವಾಗಿದೆ. ವಿದ್ಯುತ್‌ ವೆಚ್ಚವು ಶೇ 40ರಷ್ಟು ಜಾಸ್ತಿಯಾಗಿದೆ. ನಮ್ಮ ಹಲವು ರೈಲುಗಳು, ನಿಲ್ದಾಣಗಳಿಗೆ 15 ವರ್ಷವಾಗುತ್ತಾ ಬಂದಿದ್ದು, ಅವುಗಳ ನಿರ್ವಹಣೆಯ ವೆಚ್ಚ ಶೇ 60ರಷ್ಟು ಹೆಚ್ಚಾಗಿದೆ. ಇವುಗಳನ್ನೆಲ್ಲ ಪರಿಶೀಲಿಸಿ, ಪರಿಗಣಿಸಿ ದರ ನಿಗದಿ ಸಮಿತಿ ವರದಿ ನೀಡಿದೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಸ್‌. ಮಹೇಶ್ವರ ರಾವ್‌ ಪ್ರತಿಕ್ರಿಯಿಸಿದರು.

ಪ್ರಯಾಣದ ದರ ಅಂದರೆ ಎಲ್ಲ ವೆಚ್ಚಗಳನ್ನು ಸೇರಿಸಿಯೇ ಇರುತ್ತದೆ. ಸಾಲವನ್ನು ಕೂಡ ಪ್ರಯಾಣಿಕರ ಸಂಚಾರಕ್ಕಾಗಿಯೇ ಮಾಡಲಾಗಿರುತ್ತದೆ. ಇನ್ನು ಐದು ವರ್ಷದಲ್ಲಿ ₹ 10,422 ಕೋಟಿ ಸಾಲ ಮರುಪಾವತಿ ಮಾಡಬೇಕಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.