ADVERTISEMENT

ಮೆಟ್ರೊ ಮಾರ್ಗ: ತೆರವುಗೊಂಡ ಮರ ಕೆರೆ ದಂಡೆಗೆ ಸ್ಥಳಾಂತರ

ಬೆನ್ನಿಗಾನಹಳ್ಳಿ ಕೆರೆ ಪಕ್ಕದಲ್ಲಿ ಮರಗಳ ಮರುನಾಟಿ * ಸ್ಥಳೀಯರ ಮೆಚ್ಚುಗೆ

ಪ್ರವೀಣ ಕುಮಾರ್ ಪಿ.ವಿ.
Published 13 ಜುಲೈ 2021, 19:57 IST
Last Updated 13 ಜುಲೈ 2021, 19:57 IST
ಸ್ಥಳಾಂತರಗೊಳಿಸುವ ಮರಗಳ ಬುಡವನ್ನು ಬಿಡಿಸಿರುವುದು
ಸ್ಥಳಾಂತರಗೊಳಿಸುವ ಮರಗಳ ಬುಡವನ್ನು ಬಿಡಿಸಿರುವುದು   

ಬೆಂಗಳೂರು: ಕೆ.ಆರ್‌.ಪುರ ಬೆನ್ನಿಗಾನಹಳ್ಳಿ ಕೆರೆ ಸಮೀಪ ‘ನಮ್ಮ ಮೆಟ್ರೊ’ ನೂತನ ಮಾರ್ಗದ ಕಾಮಗಾರಿ ಸಲುವಾಗಿ ತೆರವುಗೊಳಿಸಬೇಕಾದ ಮರಗಳನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಈ ಕೆರೆ ದಂಡೆಯ ಇನ್ನೊಂದು ಬದಿಗೆ ಸ್ಥಳಾಂತರ ಮಾಡುತ್ತಿದೆ.

ಕಾಮಗಾರಿಗೆ ಅಡ್ಡಿಯಾಗಿದ್ದ ಸುಮಾರು 60 ಮರಗಳನ್ನು ಮರುನಾಟಿ ಮಾಡುವ ಕಾರ್ಯವನ್ನು ನಿಗಮವು ಕಳೆದ ವಾರ ಆರಂಭಿಸಿದೆ. ಮರಗಳನ್ನು ಕಡಿಯುವ ಬದಲು ಕೆರೆ ದಂಡೆಯ ಇನ್ನೊಂದು ಬದಿಗೆ ಸ್ಥಳಾಂತರ ಮಾಡುವ ಮೂಲಕ ಅವುಗಳನ್ನು ಉಳಿಸಿಕೊಂಡಿದ್ದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಇಲ್ಲಿ ಮೆಟ್ರೊ ಮಾರ್ಗಕ್ಕಾಗಿ ಬೆನ್ನಿಗಾನಹಳ್ಳಿ ಕೆರೆ ಪರಿಸರದ 83 ಮರ ತೆರವುಗೊಳಿಸಲು ಬಿಎಂಆರ್‌ಸಿಎಲ್‌ ಮುಂದಾಗಿತ್ತು. ರಕ್ತಚಂದನ, ಆಕಾಶ ಮಲ್ಲಿಗೆ, ಮತ್ತಿ, ಹೊನ್ನೆ ಮೊದಲಾದ ಜಾತಿಗಳ 20 ವರ್ಷಗಳಿಗಿಂತ ಹಳೆಯ ಮರಗಳೂ ಇದರಲ್ಲಿದ್ದವು. ಇವೆಲ್ಲವೂ ಸ್ಥಳೀಯರೇ ಬೆಳೆಸಿದ ಮರಗಳು. ಇವುಗಳನ್ನು ನಮ್ಮ ಪರಿಸರದಲ್ಲೇ ಉಳಿಸಿಕೊಡಿ ಎಂದು ಬೆನ್ನಿಗಾನಹಳ್ಳಿ ಕೆರೆ ಅಭಿವೃದ್ಧಿ ಟ್ರಸ್ಟ್‌ ಹಾಗೂ ಸಿಟಿಜನ್ಸ್‌ ಫಾರ್‌ ಕೆ.ಆರ್‌.ಪುರ ವತಿಯಿಂದ ಬಿಎಂಆರ್‌ಸಿಎಲ್‌ಗೆಮನವಿ ಸಲ್ಲಿಸಿದ್ದೆವು. ಇದಕ್ಕೆ ಒಪ್ಪಿದ್ದ ನಿಗಮವು ಮರಗಳನ್ನು ಸ್ಥಳಾಂತರಿಸಿ ಮರುನಾಟಿ ಮಾಡುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ’ ಎಂದು ಸಿಟಿಜನ್ಸ್‌ ಫಾರ್‌ ಕೆ.ಆರ್‌.ಪುರ ಸಂಘಟನೆಯ ಬಾಲಾಜಿ ರಘೋತ್ತಮ್ ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಇಲ್ಲಿನ ಮರಗಳನ್ನು ದೇವನಹಳ್ಳಿಯ ವಿಮಾನ ನಿಲ್ದಾಣದ ಸಮೀಪ ಮರುನಾಟಿ ಮಾಡಲು ಬಿಎಂಆರ್‌ಸಿಎಲ್‌ ಬಯಸಿತ್ತು. ಬೆನ್ನಿಗಾನಹಳ್ಳಿ ಕೆರೆಯ ಪೂರ್ವ ಹಾಗೂ ಉತ್ತರ ದಿಕ್ಕಿನಲ್ಲಿ ಲಭ್ಯವಿದ್ದ ಜಾಗದಲ್ಲೇ ಮರಗಳನ್ನು ನಮ್ಮ ಕೋರಿಕೆ ಮೇರೆಗೆ ಮರುನಾಟಿ ಮಾಡಿದ್ದಾರೆ. ಇದುವರೆಗೆ 25 ಮರಗಳ ಸ್ಥಳಾಂತರ ಕಾರ್ಯ ಪೂರ್ಣಗೊಂಡಿದೆ. ಇನ್ನೂ ಸುಮಾರು 35 ಮರಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಸ್ಥಳೀಯರೇ ಬೆಳೆಸಿದ ಮರಗಳನ್ನು ಇಲ್ಲೇ ಉಳಿಸಿಕೊಂಡಿದ್ದು ಖುಷಿ ತಂದಿದೆ’ ಎಂದರು.

‘ನಮ್ಮ ಮೆಟ್ರೊ ಹೊಸ ಮಾರ್ಗಗಳ ಕಾಮಗಾರಿ ಸಲುವಾಗಿ ತೆರವುಗೊಳಿಸಬೇಕಾಗುವ ಬಹಳಷ್ಟು ಮರಗಳನ್ನು ಹೈಕೋರ್ಟ್‌ ನಿರ್ದೇಶನದ ಮೇರೆಗೆ ಸ್ಥಳಾಂತರ ಮಾಡಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ತಜ್ಞರ ಸಮಿತಿಯ ಸಲಹೆ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ತಜ್ಞರ ಮಾರ್ಗದರ್ಶನದಂತೆಮರ ಸ್ಥಳಾಂತರ ಕಾರ್ಯವನ್ನು ಕೈಗೊಳ್ಳುತ್ತಿದ್ದೇವೆ. ಕೆಲವು ಸರ್ಕಾರೇತರ ಸಂಸ್ಥೆಗಳೂ ಈ ಕಾರ್ಯದಲ್ಲಿ ನೆರವಾಗುತ್ತಿವೆ’ ಎಂದು ಬಿಎಂಆರ್‌ಸಿಎಲ್‌ನ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇವಲ ಸ್ಥಳಾಂತರ ಮಾಡುವುದಷ್ಟೇ ಅಲ್ಲ. ಮೂರು ವರ್ಷಗಳ ಕಾಲ ಈ ಮರಗಳನ್ನು ಪೋಷಣೆಯ ಹೊಣೆಯನ್ನೂ ನಿಗಮವು ವಹಿಸಲಿದೆ. ಸ್ಥಳಾಂತರ ಕಾರ್ಯಕ್ಕೆ ತಗಲುವ ವೆಚ್ಚವನ್ನೂ ಭರಿಸಲಿದೆ’ ಎಂದು ತಿಳಿಸಿದರು.

***

ಮರಗಳ ಸ್ಥಳಾಂತರವು ‘ಹಳೆ ಬೇರು ಹೊಸ ಚಿಗುರು’ ಎಂಬ ಮಾತಿಗೆ ಅನ್ವರ್ಥ. 20 ವರ್ಷಗಳಷ್ಟು ಹಳೆ ಮರಗಳನ್ನು ಮರುನಾಟಿ ಮಾಡಿ ಉಳಿಸುವುದು ಸುಲಭವಲ್ಲ. ಕೆಲವು ಬದುಕುಳಿದರೂ ಈ ಕಾರ್ಯ ಸಾರ್ಥಕ.

- ಬಾಲಾಜಿ ರಘೋತ್ತಮ ರಾವ್‌, ಸಿಟಿಜನ್ಸ್‌ ಫಾರ್ ಕೆ.ಆರ್‌.ಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.