ADVERTISEMENT

ಪಿಲ್ಲರ್‌ 155ಕ್ಕೆ ಐಐಎಸ್‌ಸಿ ನಿಗಾ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 19:56 IST
Last Updated 30 ಡಿಸೆಂಬರ್ 2018, 19:56 IST

ಬೆಂಗಳೂರು: ಟ್ರಿನಿಟಿ ಮೆಟ್ರೊ ನಿಲ್ದಾಣದ ಬಳಿಯ ಪಿಲ್ಲರ್‌ ಸಂಖ್ಯೆ 155ರ ಮೇಲೆ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಒಂದು ತಿಂಗಳ ಕಾಲ ನಿಗಾ ವಹಿಸಲಿದ್ದಾರೆ. ಪಿಲ್ಲರ್‌ ಜಾಗತಿಕ ಗುಣಮಟ್ಟ ಮಾನದಂಡಗಳ ಪ್ರಕಾರ ಸುರಕ್ಷಿತವಾಗಿದೆ ಎಂಬುದನ್ನು ಖಾತ್ರಿ ಪಡಿಸಲು ಈ ಪ್ರಕ್ರಿಯೆ ನಡೆಸಲಿದ್ದಾರೆ. ದುರಸ್ತಿ ಕಾಮಗಾರಿ ಡಿ. 31ಕ್ಕೆ ಮುಗಿಯಲಿದ್ದು ಜ.1ರಿಂದ ತಜ್ಞರು ನಿಗಾ ವಹಿಸಲಿದ್ದಾರೆ.

ಐಐಎಸ್‌ಸಿಯ ತಜ್ಞ ಪ್ರೊ.ಚಂದ್ರ ಕಿಶನ್‌ ಜೈನ್‌ ಅವರು ಭಾನುವಾರ ಸಂಜೆ ದುರಸ್ತಿ ಕಾಮಗಾರಿ ಪರಿಶೀಲಿಸಿದರು. ‘ಮಾರ್ಗದ ರಚನೆಗಳು ಸುರಕ್ಷಿತವಾಗಿಯೇ ಇವೆ. ಆದರೆ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗುವಂತಿಲ್ಲ. ಅದಕ್ಕಾಗಿ ಒಂದು ತಿಂಗಳ ಕಾಲ ನಿಗಾ ವಹಿಸಲಾಗುತ್ತದೆ’ ಎಂದರು.

‘ದುರಸ್ತಿ ಕಾಮಗಾರಿ ವೇಳೆ ನಾವೂ ತೊಡಗಿಸಿಕೊಂಡಿದ್ದೆವು. ವಯಡಕ್ಟನ್ನು ಎತ್ತುವಾಗ ಎಲ್ಲಿಯಾದರೂ ಒತ್ತಡ ಬಿದ್ದು ಯಾವುದೇ ಭಾಗದಲ್ಲಿ ಬಿರುಕು ಉಂಟಾಗುವುದನ್ನು ತಪ್ಪಿಸಬೇಕಾಗಿತ್ತು. ಇದು ಹನಿಕಾಂಬ್‌ ಉಂಟಾದ ಕ್ರಾಸ್‌ಬೀಮ್‌ ಪ್ರದೇಶಕ್ಕೂ ಅನ್ವಯಿಸುತ್ತದೆ. ಸಮಸ್ಯಾತ್ಮಕ ಪ್ರದೇಶಕ್ಕೆ ಅಧಿಕ ಒತ್ತಡದಲ್ಲಿ ಕಾಂಕ್ರಿಟ್‌ ತುಂಬಲಾಗಿದೆ. ಹಾನಿಗೊಳಗಾದ ಪ್ರದೇಶವನ್ನು ಗಟ್ಟಿಗೊಳಿಸಲು ಈ ರೀತಿ ಮಾಡಲಾಗಿದೆ’ ಎಂದು ಅವರು ವಿವರಿಸಿದರು.

ADVERTISEMENT

‘27 ಸೆನ್ಸರ್‌ಗಳನ್ನು ಹಾನಿಗೊಳಗಾದ ರಚನೆಯ ಸಮೀಪ ಅಳವಡಿಸಲಾಗಿದೆ. ಈಗ ಜಾಕ್‌ಗಳ ಮೂಲಕ ವಯಡಕ್ಟ್‌ಗೆ ಕಾಂಕ್ರಿಟ್‌ ತುಂಬಿದ ಬಳಿಕ ಅದನ್ನು ಇಳಿಸಿ ನಿಗದಿತ ಸ್ಥಾನದಲ್ಲಿ ಕೂರಿಸಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.