ADVERTISEMENT

ಪ್ರಯಾಣಿಕರನ್ನು ದೋಚುತ್ತಿದೆ ಮೆಟ್ರೊ: ಜನಾಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2025, 21:00 IST
Last Updated 9 ಫೆಬ್ರುವರಿ 2025, 21:00 IST
ನಮ್ಮ ಮೆಟ್ರೊ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಜನಸಂದಣಿ (ಸಾಂದರ್ಭಿಕ ಚಿತ್ರ)
ನಮ್ಮ ಮೆಟ್ರೊ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಜನಸಂದಣಿ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ‘ನಮ್ಮ ಮೆಟ್ರೊ’ ಪ್ರಯಾಣ ದರವನ್ನು ವಿಪರೀತ ಹೆಚ್ಚಳ ಮಾಡಿ ಪ್ರಯಾಣಿಕರನ್ನು ದೋಚುತ್ತಿದೆ ಎಂದು ಮೆಟ್ರೊ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಬೆಲೆ ಏರಿಕೆ ಮಾಡಲೇ ಬೇಕಿದ್ದರೆ ಶೇಕಡ 10ರಷ್ಟು ಮಾಡಲಿ. ಅದು ಬಿಟ್ಟು ಮನಸ್ಸಿಗೆ ಬಂದಷ್ಟು ಮಾಡಿದ್ದಾರೆ. ಶೇ 47 ಎಂದು ಮೆಟ್ರೊದವರು ಹೇಳಿಕೊಂಡಿದ್ದರೂ ಶೇ 100ರಷ್ಟು ಹೆಚ್ಚಳವಾಗಿದೆ. ನನಗೆ ಚಲ್ಲಘಟ್ಟದಿಂದ ವಿಜಯನಗರಕ್ಕೆ ನಿನ್ನೆಯವರೆಗೆ ₹ 30 ವೆಚ್ಚವಾಗುತ್ತಿತ್ತು. ಈಗ ₹ 60 ಆಗಿದೆ. ಬಿಎಂಆರ್‌ಸಿಎಲ್ ಸುಳ್ಳು ಅಂಕಿ ಅಂಶ ನೀಡಿ ನಮ್ಮನ್ನು ಯಾಮಾರಿಸಿದೆ’ ಎಂದು ಪ್ರಯಾಣಿಕ ವಿಜಯ್‌ ಆರೋಪಿಸಿದ್ದಾರೆ.

‘ಕೆಂಗೇರಿಯಿಂದ ವೈಟ್‌ಫೀಲ್ಡ್‌ಗೆ ಪ್ರಯಾಣಿಸಲು ಸ್ಮಾರ್ಟ್‌ಕಾರ್ಡ್‌ನಲ್ಲಿ ₹ 57 ಕಡಿತವಾಗುತ್ತಿತ್ತು. ಇನ್ನು ಮುಂದೆ ₹ 90 ಕೊಡಬೇಕಂತೆ. ದಿನಕ್ಕೆ ₹ 180 ಎತ್ತಿಡಬೇಕು. ಬೆಲೆ ಏರಿಕೆಗೂ ಸರ್ಕಾರಕ್ಕೂ ಸಂಬಂಧವಿಲ್ಲ, ದರ ನಿಗದಿ ಸಮಿತಿಯ ನಿರ್ಧಾರ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಹಾಗಾದರೆ ಸಮಿತಿಯನ್ನು ರಚಿಸಿದ್ದು ಯಾರು’ ಎಂದು ಸಂತೋಷ್‌ ಕುಮಾರ್‌ ಎಲ್‌.ಎಂ. ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.

ADVERTISEMENT

‘ಸಾರ್ವಜನಿಕ ಸಾರಿಗೆಯನ್ನು ಬಳಸಿ ಎಂದು ಮೈಕ್‌ ಸಿಕ್ಕಿದಾಗಲೆಲ್ಲ ರಾಜಕಾರಣಿಗಳು, ಅಧಿಕಾರಿಗಳು ಹೇಳುತ್ತಾರೆ. ಹಾಗೆ ಹೇಳುವವರಂತೂ ಬಳಸುತ್ತಿಲ್ಲ. ಬಸ್‌ಗಳಲ್ಲಿ ಓಡಾಡೋಣ ಎಂದರೆ ಇಲ್ಲಿನ ವಾಹನ ದಟ್ಟಣೆಯಲ್ಲಿ ಪ್ರಯಾಣದಲ್ಲಿಯೇ ಸಮಯ ಕಳೆದು ಹೋಗುತ್ತದೆ. ನಿಂತುಕೊಳ್ಳಲೂ ಜಾಗ ಇಲ್ಲದಿದ್ದರೂ ಮೆಟ್ರೊದಲ್ಲಿ ಸಂಚಾರ ಮಾಡುತ್ತಿದ್ದೆವು. ಇದೀಗ ದುಪ್ಪಟ್ಟು ದರ ಮಾಡಿದ್ದಾರೆ. ತಿಂಗಳಿಗೆ ₹ 2000 ಮೆಟ್ರೊ ಪ್ರಯಾಣ ವೆಚ್ಚಕ್ಕಾಗಿ ಇಡುತ್ತಿದ್ದೆ. ಇನ್ನುಮುಂದೆ ₹ 4000 ಬೇಕಾಗುತ್ತದೆ. ಹೆಚ್ಚುವರಿ ₹ 2000 ಎಲ್ಲಿಂದ ತರುವುದು’ ಎಂದು ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಸೃಜನ್‌ ಪಿ. ಪ್ರಶ್ನಿಸಿದರು.

‘ಹೊಸಹಳ್ಳಿಯಿಂದ ಕಬ್ಬನ್‌ ಪಾರ್ಕ್‌ಗೆ ₹ 20 ಇದ್ದಿದ್ದು ₹ 40 (ಶೇ 100 ಹೆಚ್ಚಳ) ಆಗಿದೆ’ ಎಂದು ಮನೋಜ್‌, ‘ಯಶವಂತಪುರದಿಂದ ಸೆಂಟ್ರಲ್‌ ಕಾಲೇಜಿಗೆ ₹23.50 ಇದ್ದಿದ್ದು ₹40 (ಶೇ 70) ಏರಿಕೆಯಾಗಿದೆ’ ಎಂದು ಕಾರ್ತಿಕ್‌ ತಿಳಿಸಿದ್ದು, ‘ಇದಕ್ಕಿಂತ ಬೈಕ್‌ನಲ್ಲೇ ಓಡಾಡುವುದಿಂದ ವೆಚ್ಚ ಕಡಿಮೆಯಾಗಲಿದೆ’ ಎಂದು ತಿಳಿಸಿದರು.

‘₹100 ಪೆಟ್ರೊಲ್ ಹಾಕಿದರೆ ನನ್ನ ಬೈಕ್‌ನಲ್ಲಿ 70 ಕಿ.ಮೀ. ಹೋಗಬಹುದು. ಮೆಟ್ರೊದಲ್ಲಿ ಹೋಗುವುದಕ್ಕಿಂತ ಇದೇ ಉತ್ತಮ’ ಎಂದು ಆದಿತ್ಯ ಹೇಳಿದರು.

‘ಪ್ರಯಾಣಿಕರಿಲ್ಲದೇ ನಷ್ಟವಾಗುತ್ತಿದ್ದರೆ ಬೇರೆ ಸಂಗತಿ. ದಟ್ಟಣೆ ಅವಧಿಯಲ್ಲಿ ನಿಲ್ಲಲೂ ಜಾಗವಿಲ್ಲದಷ್ಟು ಜನರು ಪ್ರಯಾಣಿಸುತ್ತಿರುತ್ತಾರೆ. ಬೇರೆ ಸಮಯದಲ್ಲಿಯೂ ಪ್ರಯಾಣಿಕರ ಕೊರತೆ ಇರುವುದಿಲ್ಲ. ಮತ್ತೆ ಹೇಗೆ ನಷ್ಟವಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಬಿಎಂಆರ್‌ಸಿಎಲ್‌ ನಮ್ಮ ಜೇಬಿಗೆ ಕತ್ತರಿ ಹಾಕಿದೆ’ ಎಂದು ಪ್ರಯಾಣಿಕ ಯೋಗೀಶ್‌ ಅಸಮಾಧಾನ ವ್ಯಕ್ತಪಡಿಸಿದರು.

ಬಡವರ ಮೇಲೆ ಬರೆ: ಆರ್‌ ಅಶೋಕ

ಮೆಟ್ರೊ ಪ್ರಯಾಣ ದರವನ್ನು ಏಕಾಏಕಿ ಶೇ 50ರಷ್ಟು ಏರಿಕೆ ಮಾಡುವ ಮೂಲಕ ಕಾಂಗ್ರೆಸ್‌ ಸರ್ಕಾರ ಜನಸಾಮಾನ್ಯರ ಗಾಯದ ಮೇಲೆ ಮತ್ತೊಂದು ಬರೆ ಎಳೆದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಟೀಕಿಸಿದ್ದಾರೆ. ಪೆಟ್ರೋಲ್ ಡೀಸೆಲ್‌ ಹಾಲು ಬಸ್ಸಿನ ಪ್ರಯಾಣ ದರ ಏರಿಕೆಯಿಂದ ಜನರು ಕಂಗೆಟ್ಟಿರುವಾಗಲೇ ಮೆಟ್ರೊ ಪರಯಾಣ ದರ ಏರಿಕೆ ಆಘಾತವುಂಟು ಮಾಡಿದೆ ಎಂದು ಅವರು ‘ಎಕ್ಸ್‌’ ನಲ್ಲಿ ಹೇಳಿದ್ದಾರೆ. ದರ ಏರಿಕೆಯಿಂದ ಜನಸಾಮಾನ್ಯರಿಗೆ ಮೆಟ್ರೊ ಸಂಚಾರ ಕೈಗೆಟುಕದ ಪರಿಸ್ಥಿತಿ ಎದುರಾಗಿದೆ. ಮೆಟ್ರೊ ಪ್ರಯಾಣಕ್ಕಿಂತ ಸ್ವಂತ ಸ್ಕೂಟರ್‌ ಬೈಕಿನ ಪ್ರಯಾಣವೇ ಜೇಬಿಗೆ ಹಿತ ಎನ್ನುವಂತಾಗಿದೆ. ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಿ ಬೆಂಗಳೂರಿನ ಸಂಚಾರ ಸಮಸ್ಯೆ ಪರಿಸರ ಮಾಲಿನ್ಯಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರ ಜನರನ್ನು ಮೆಟ್ರೊದಿಂದ ವಿಮುಖರಾಗುವಂತೆ ಮಾಡುತ್ತಿದೆ. ಆದ್ದರಿಂದ ಮೆಟ್ರೊ ದರ ಏರಿಕೆಯ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಯಾಣದರ ಮಾತ್ರ ಪಡೆಯಲಿ

ಸಾರ್ವಜನಿಕ ಸಾರಿಗೆಗಳು ಪ್ರಯಾಣಿಕರಿಂದ ಪ್ರಯಾಣ ಶುಲ್ಕವನ್ನಷ್ಟೇ ಪಡೆಯಬೇಕು. ಸಂಸ್ಥೆಯ ಬಂಡವಾಳ ಹೆಚ್ಚು ಮಾಡಿಕೊಳ್ಳಲು ಪ್ರಯಾಣಿಕರ ಮೇಲೆ ದರ ಏರಿಕೆಯ ಹೊರೆ ಹೇರಬಾರದು. ಆದರೆ ‘ನಮ್ಮ ಮೆಟ್ರೊ’ ಸುಲಿಗೆ ಮಾಡಲು ಹೊರಟಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ತಿಳಿಸಿದ್ದಾರೆ. ವಾಣಿಜ್ಯ ಸಾರಿಗೆಗಿಂತ ಸಾರ್ವಜನಿಕ ಸಾರಿಗೆಯ ದರ ಯಾವಾಗಲೂ ಕಡಿಮೆ ಇರಬೇಕು. ಮೆಟ್ರೊ ವಿಸ್ತರಣೆಗೆ ಮುಂದಿನ ಕಾರ್ಯಯೋಜನೆಗೆ ಹಣ ಹೊಂದಿಸಿಕೊಡುವುದು ಪ್ರಯಾಣಿಕರ ಜವಾಬ್ದಾರಿಯಲ್ಲ. ಅದನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರದಿಂದ ಪಡೆಯಬೇಕು. ಇಲ್ಲವೇ ಹಣಕಾಸು ಸಂಸ್ಥೆಗಳಿಂದ ಸಾಲದ ರೂಪದಲ್ಲಿ ಪಡೆದುಕೊಳ್ಳಬೇಕು. ಪ್ರಯಾಣಿಕರು ತಾವು ಪ್ರಯಾಣಿಸಿದ ದೂರಕ್ಕೆ ಅನುಗುಣವಾಗಿ ಸೇವಾಶುಲ್ಕ ಮಾತ್ರ ಭರಿಸುವಂಥದ್ದು. ನಮ್ಮ ಮೆಟ್ರೊ ದುಬಾರಿ ದರ ಜಾರಿಗೆ ತಂದಿರುವುದು ಸಮರ್ಥನೀಯವೂ ಅಲ್ಲ ಒಪ್ಪಿತವೂ ಅಲ್ಲ ಎಂದು ಹೇಳಿದ್ದಾರೆ. ದೇಶದ ರಾಜಧಾನಿಯಾದ ದೆಹಲಿಯಲ್ಲಿಯೇ ಇಷ್ಟೊಂದು ದರ ಇಲ್ಲ. ಅಲ್ಲದೇ ಅಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಯೋಜನೆ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ. ಬೆಂಗಳೂರಿನಲ್ಲಿ ದರ ಹೆಚ್ಚಿಸಿರುವುದು ಜನರು ಈಗ ಖಾಸಗಿ ವಾಹನಗಳಿಗೆ ಮರಳುವಂತೆ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.