ADVERTISEMENT

ಮೆಟ್ರೊ ರೈಲು ಸಂಚಾರದ ಅವಧಿ ವಿಸ್ತರಿಸಿ: ನಾಗರಿಕರ ಆಗ್ರಹ

ಬಸ್, ರೈಲು ಸಂಚಾರಕ್ಕೆ ಇಲ್ಲದ ನಿರ್ಬಂಧ ಮೆಟ್ರೊ ರೈಲಿಗೆ ಮಾತ್ರವೇಕೆ– ನಾಗರಿಕರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 21:15 IST
Last Updated 11 ಸೆಪ್ಟೆಂಬರ್ 2021, 21:15 IST
ಅನುಷಾ
ಅನುಷಾ   

ಬೆಂಗಳೂರು: ನಗರದಲ್ಲಿ ಮೆಟ್ರೊ ರೈಲುಗಳ ಸಂಚಾರದ ಅವಧಿಯನ್ನು ಕಡಿತಗೊಳಿಸಿರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದ್ದು, ಅವಧಿಯನ್ನು ವಿಸ್ತರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬೈಯಪ್ಪನಹಳ್ಳಿ–ಕೆಂಗೇರಿ ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭವಾದ ನಂತರ, ಪ್ರಯಾಣಿಕರ ಸಂಖ್ಯೆ ಶೇ 5ರಿಂದ ಶೇ 8ರಷ್ಟು ಹೆಚ್ಚಾಗಿದೆ. ಸದ್ಯ, ರೈಲುಗಳು ಬೆಳಿಗ್ಗೆ 7ರಿಂದ ರಾತ್ರಿ 8ರವರೆಗೆ ಮಾತ್ರ ಸಂಚರಿಸುತ್ತಿವೆ. ರಾತ್ರಿ 9ರಿಂದ ಬೆಳಗಿನ ಜಾವ 5ರವರೆಗೆ ಕರ್ಫ್ಯೂ ವಿಧಿಸಿರುವುದರಿಂದ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಸಂಚಾರದ ಅವಧಿ ಕಡಿತ ಮಾಡಿದೆ.

ಅನೇಕ ಐಟಿ ಕಂಪನಿಗಳು, ಶಾಲಾ–ಕಾಲೇಜುಗಳು ಆರಂಭವಾಗಿವೆ. ಬೆಳಿಗ್ಗೆ ಶಾಲಾ–ಕಾಲೇಜುಗಳಿಗೆ ಹೋಗುವವರಿಗೆ, ರಾತ್ರಿ ವೇಳೆ ಕಚೇರಿಯಿಂದ ಮರಳುವವರಿಗೆ ತೊಂದರೆಯಾಗುತ್ತಿದೆ. ಈ ಮೊದಲಿನಂತೆ ಬೆಳಿಗ್ಗೆ 6ರಿಂದ ರಾತ್ರಿ 11ರವರೆಗೆ ಮೆಟ್ರೊ ರೈಲು ಸಂಚಾರಕ್ಕೆ ಅನುಮತಿ ನೀಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ADVERTISEMENT

‘ಬಸ್, ರೈಲುಗಳ ಸಂಚಾರ ಸಾಮಾನ್ಯವಾಗಿದೆ. ಆಟೊ, ಕ್ಯಾಬ್‌ಗಳ ಸಂಚಾರಕ್ಕೂ ಯಾವುದೇ ನಿರ್ಬಂಧವಿಲ್ಲ. ಬಸ್‌, ರೈಲುಗಳಲ್ಲಿ ತಡರಾತ್ರಿ ಬೆಂಗಳೂರಿಗೆ ಬರುವವರಿಗೆ ಅಥವಾ ಹೋಗುವವರಿಗೆ ಮೆಟ್ರೊ ರೈಲು ಸೌಲಭ್ಯವಿಲ್ಲದೆ ತೊಂದರೆಯಾಗುತ್ತಿದೆ. ಸಂಚಾರ ಸಮಯ ವಿಸ್ತರಿಸಲು ಅವಕಾಶ ನೀಡುವಂತೆ ಕೋರಿ ನಿಗಮವು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಖಾಸಗಿ ಕಂಪನಿ ಉದ್ಯೋಗಿ ಭಾವನಾ ಒತ್ತಾಯಿಸಿದರು.

‘ಕೋವಿಡ್‌ ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಕರ್ಫ್ಯೂ ಹೇರಿದೆ. ಈ ನಿರ್ಬಂಧಗಳನ್ನು ಹಿಂತೆಗೆದುಕೊಂಡ ನಂತರವೇ ಮೆಟ್ರೊ ರೈಲು ಸಂಚಾರ ಅವಧಿ ವಿಸ್ತರಣೆಯ ಬಗ್ಗೆ ಯೋಚಿಸಬಹುದು’ ಎಂದು ನಿಗಮದ ಅಧಿಕಾರಿಗಳು ಹೇಳಿದರು.

‘ಅಸುರಕ್ಷತೆಯೇ ಹೆಚ್ಚು’

ಕಚೇರಿ ಕೆಲಸ ಮುಗಿಯುವುದಕ್ಕೇ ತಡವಾಗಿ ಬಿಡುತ್ತದೆ. ರಾತ್ರಿ 8ಗಂಟೆಯ ವೇಳೆಗೆ ಮೆಟ್ರೊ ನಿಲ್ದಾಣ ತಲುಪಲು ಸಾಧ್ಯವಾಗುತ್ತಿಲ್ಲ. ಮೆಟ್ರೊ ರೈಲು ಸಂಚಾರ ಇದ್ದರೆ ಯಾವುದೇ ಆತಂಕ, ಶ್ರಮವಿಲ್ಲದೆ ಬೇಗ ಮನೆ ತಲುಪಬಹುದು. ಇಲ್ಲದಿದ್ದರೆ, ರಾತ್ರಿಯ ವೇಳೆ ಬಸ್‌ ಅಥವಾ ಆಟೊದಲ್ಲಿ ಓಡಾಡಲು ಅಸುರಕ್ಷಿತ ಭಾವ ಕಾಡುತ್ತದೆ.

ಅನುಷಾ ಗಂಗಾಧರ್, ಖಾಸಗಿ ಕಂಪನಿ ಉದ್ಯೋಗಿ

---------------

ಬೆಳಿಗ್ಗೆಯೂ ಬೇಗ ಸಂಚಾರ ಆರಂಭಿಸಿ

ಬೆಳಿಗ್ಗೆ 7ರ ನಂತರವೇ ಮೆಟ್ರೊ ರೈಲು ಸಂಚಾರ ಆರಂಭವಾಗುತ್ತಿದೆ. ಬೆಳಿಗ್ಗೆಯೇ ಟ್ಯೂಷನ್‌ಗೆ ಹೋಗಿ ನಂತರವೇ ಕಾಲೇಜಿಗೆ ಹೋಗಬೇಕು. ಬಸ್‌, ರೈಲುಗಳು ಎಲ್ಲ ಸಂಚರಿಸುತ್ತಿರುವಾಗ ಮೆಟ್ರೊ ರೈಲು ಸಂಚಾರಕ್ಕೆ ಮಾತ್ರ ನಿರ್ಬಂಧ ಏಕೆ ಎಂಬುದು ಗೊತ್ತಾಗುತ್ತಿಲ್ಲ. ಮೊದಲಿನಂತೆ, ಬೆಳಿಗ್ಗೆ 6ರಿಂದಲೇ ಸಂಚಾರ ಆರಂಭಿಸಿದರೆ ಅನುಕೂಲವಾಗುತ್ತದೆ.

ಭಾವನಾ, ಎಂಜಿನಿಯರಿಂಗ್ ವಿದ್ಯಾರ್ಥಿನಿ

------------------

ಸಮಯ, ಹಣ ವ್ಯರ್ಥ

ನನ್ನ ಮನೆ ವಿದ್ಯಾರಣ್ಯಪುರದಲ್ಲಿ ಇದೆ. ಕೆಲಸ ಮಾಡುವುದು ವಿಜಯನಗರದಲ್ಲಿ. ಪೀಣ್ಯ ಮೆಟ್ರೊ ನಿಲ್ದಾಣದಿಂದ ವಿಜಯನಗರಕ್ಕೆ ಹೋಗುತ್ತಿದ್ದೆ. ಈಗಮೆಟ್ರೊ ಸಂಚಾರದ ಅವಧಿ ಕಡಿತಗೊಳಿಸಿರುವುದರಿಂದ ಸಮಯ ಮತ್ತು ಹಣ ಎರಡೂ ವ್ಯರ್ಥವಾಗುತ್ತಿದೆ. ಕಚೇರಿಯಿಂದ ಸಮಯಕ್ಕೆ ಸರಿಯಾಗಿ ನಿಲ್ದಾಣ ತಲುಪದಿದ್ದರೆ ಆಟೊಗೆ ಹೋಗಬೇಕು. ಜೊತೆಗೆ, ವಾಹನ ನಿಲುಗಡೆಗೂ ಹೆಚ್ಚು ಶುಲ್ಕ ತೆರಬೇಕಾಗಿದೆ

ಸುಬ್ರಮಣಿ ಸಂಪತ್, ಖಾಸಗಿ ಕಂಪನಿ ಉದ್ಯೋಗಿ

-------------

ಎಲ್ಲ ಸಾರಿಗೆ ವ್ಯವಸ್ಥೆಗೆ ಒಂದೇ ನಿಯಮವಿರಲಿ

ಬಸ್‌ ಮತ್ತು ರೈಲುಗಳ ಸಂಚಾರಕ್ಕೆ ಯಾವುದೇ ನಿರ್ಬಂಧ ಅಥವಾ ಸಮಯ ಮಿತಿ ಇಲ್ಲ. ಆದರೆ, ಮೆಟ್ರೊ ರೈಲು ಸಂಚಾರವನ್ನು ಮಾತ್ರ ಬೇಗ ಸ್ಥಗಿತಗೊಳಿಸಲಾಗುತ್ತಿದೆ. ದೂರದ ಊರಿಗೆ ಪ್ರಯಾಣಿಸಬೇಕೆಂದರೆ ಬಸ್‌ ಅಥವಾ ರೈಲುಗಳು ರಾತ್ರಿ 10 ಅಥವಾ 11ರ ನಂತರವೇ ಹೊರಡುತ್ತವೆ. 8 ಗಂಟೆಗೇ ಮೆಟ್ರೊ ರೈಲು ಸಂಚಾರ ಸ್ಥಗಿತಗೊಳ್ಳುವುದರಿಂದ ಸಮಸ್ಯೆ ಆಗುತ್ತದೆ.

ಕೆ.ಪಿ. ನಾಗೇಶ್, ಖಾಸಗಿ ಕಂಪನಿ ಉದ್ಯೋಗಿ

------------

ಸಾರ್ವಜನಿಕ ಸಾರಿಗೆ ಉತ್ತೇಜಿಸಿ

ಮೆಟ್ರೊ ರೈಲು ಸಂಚಾರದಿಂದ ಪರಿಸರ, ವಾಯು ಹಾಗೂ ಶಬ್ದಮಾಲಿನ್ಯ ಆದಷ್ಟು ತಗ್ಗುತ್ತದೆ. ಸಾರ್ವಜನಿಕರ ಸಾರಿಗೆ ಸಂಚಾರ ಉತ್ತೇಜಿಸುವ ಬದಲು, ಸರ್ಕಾರ ಹೀಗೆ ನಿರ್ಬಂಧ ವಿಧಿಸುವುದು ಸರಿಯಲ್ಲ. ರಾತ್ರಿಯ ವೇಳೆ ಆಟೊ, ಕ್ಯಾಬ್‌ಗಳಲ್ಲಿಯೂ ಓಡಾಡುವುದೂ ಕಷ್ಟವಾಗುತ್ತದೆ. ಹೆಚ್ಚು ಹಣವೂ ಖರ್ಚಾಗುತ್ತದೆ. ಮೆಟ್ರೊ ರೈಲು ಸಂಚಾರ ಸಮಯವನ್ನು ವಿಸ್ತರಿಸಬೇಕು.

ವಿನಯಾ, ಕಾಲೇಜು ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.