ADVERTISEMENT

ಮೆಟ್ರೊ: ಲಾಕ್‌ಡೌನ್‌ ನಡುವೆಯೂ ‘ಕ್ಯೂರಿಂಗ್’ ಕೆಲಸ

ಬೃಹತ್‌ ಕಾಮಗಾರಿ ಸ್ಥಗಿತ– ಕಾರ್ಯನಿರ್ವಹಿಸುತ್ತಿದ್ದಾರೆ ಭದ್ರತಾ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 19:47 IST
Last Updated 29 ಮಾರ್ಚ್ 2020, 19:47 IST
ನಮ್ಮ ಮೆಟ್ರೊ
ನಮ್ಮ ಮೆಟ್ರೊ   

ಬೆಂಗಳೂರು:ಕೋವಿಡ್‌–19 ಹಿನ್ನೆಲೆಯಲ್ಲಿಮೆಟ್ರೊ ಎರಡನೇ ಹಂತದ ಕಾಮಗಾರಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕೋ, ಬೇಡವೋ ಎನ್ನುವ ಸಂದಿಗ್ಧದಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮ ಸಿಲುಕಿದೆ.

ಹೊರ ರಾಜ್ಯಗಳಿಂದ ಹೆಚ್ಚು ಕಾರ್ಮಿಕರು ಬಂದಿದ್ದಾರೆ. ಮೆಟ್ರೊ ಕಾಮಗಾರಿ ಸ್ಥಳಗಳು ಮತ್ತು ಕಾಮಗಾರಿ ನಡೆಯುತ್ತಿರುವ ಪ್ರದೇಶಗಳ ರಕ್ಷಣೆಗಾದರೂ ಭದ್ರತಾ ಸಿಬ್ಬಂದಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಆದರೆ, ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಬೃಹತ್‌ ಕಾಮಗಾರಿಯನ್ನು ನಿಗಮ ಸ್ಥಗಿತಗೊಳಿಸಿದೆ.

‘ಮೆಟ್ರೊ ಕಾಮಗಾರಿಗಿಂತ ಪ್ರಗತಿಗಿಂತ ಕಾರ್ಮಿಕರ ಹಿತರಕ್ಷಣೆ ಮುಖ್ಯವಾಗಬೇಕು. ಆದರೂ, ಕಾರ್ಮಿಕರಿಂದ ಕೆಲಸ ಮಾಡಿಸಲಾಗುತ್ತಿದೆ. ಇದು ಸರಿಯಲ್ಲ’ ಎಂದು ರೈಲ್ವೆ ಹೋರಾಟಗಾರರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಕ್ರಮ ಕೈಗೊಳ್ಳಲಾಗಿದೆ:‘ಕೋವಿಡ್‌–19 ಹಿನ್ನೆಲೆಯಲ್ಲಿ ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿನ ಬೃಹತ್‌ ಕಾಮಗಾರಿಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

‘ಬೃಹತ್‌ ಕಾಮಗಾರಿಗಳನ್ನು ಕೈಗೊಳ್ಳುತ್ತಿಲ್ಲ. ಕೆಲವು ಕಡೆ ಪಿಲ್ಲರ್‌ ಹಾಗೂ ನಿಲ್ದಾಣದ ಕಾಮಗಾರಿ ನಡೆಯುತ್ತಿದ್ದು, ನೀರು ಹನಿಸಬೇಕಾದ (ಕ್ಯೂರಿಂಗ್‌) ಮಾಡಬೇಕಾದ ಅಗತ್ಯವಿದೆ. ಈ ಕಾರ್ಯವನ್ನು ಮಾತ್ರ ಕಾರ್ಮಿಕರಿಂದ ಮಾಡಿಸಲಾಗುತ್ತಿದೆ. ಅಲ್ಲದೆ, ಮೆಟ್ರೊ ಕಾಮಗಾರಿ ಪ್ರದೇಶ ಮತ್ತು ನಿಲ್ದಾಣಗಳಿಗೆ ಭದ್ರತೆ ಒದಗಿಸುವ ಅಗತ್ಯವಿರುವುದರಿಂದ ಕೆಲವು ಭದ್ರತಾ ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ’ ಎಂದು ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚವಾಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೆಟ್ರೊದ ಎರಡನೇ ಹಂತದಲ್ಲಿ 5,500ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹೊರ ರಾಜ್ಯ–ಹೊರ ಜಿಲ್ಲೆಗಳಿಂದ ಅವರು ಬಂದಿದ್ದು, ಮರಳಿ ಹೋಗಲು ಅವರಿಗೆ ಆಗುತ್ತಿಲ್ಲ. ಅವರಿಗೆ ಅವರು ಇರುವ ಕಡೆಗಳಲ್ಲಿಯೇ ಆಹಾರ ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಕಾಮಗಾರಿಯಲ್ಲಿ ಪಾಲ್ಗೊಂಡಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದ್ದು, ಈ ಕಾರ್ಯ ಸರಿಯಾಗಿ ನಡೆಯುತ್ತಿದೆಯೇ ಎಂದು ಪರಿಶೀಲಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಪರಿಸ್ಥಿತಿ ನೋಡಿಕೊಂಡು ನಂತರ, ಸಂಪೂರ್ಣವಾಗಿ ಕಾಮಗಾರಿ ಸ್ಥಗಿತಗೊಳಿಸಲಾಗುವುದು’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.