ADVERTISEMENT

ಬಿಸಿಯೂಟ: ಮೊಟ್ಟೆ ಬದಲಿಗೆ ಮೊಳಕೆಕಾಳು?

ವಿವಾದ ಬಗೆಹರಿಸಲು ಸರ್ಕಾರದಿಂದ ಕ್ರಮ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 20:15 IST
Last Updated 5 ಅಕ್ಟೋಬರ್ 2019, 20:15 IST
ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ– ಸಾಂದರ್ಭಿಕ ಚಿತ್ರ
ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ– ಸಾಂದರ್ಭಿಕ ಚಿತ್ರ   

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆ ಉದ್ದೇಶಿತ ಮೊಟ್ಟೆ ನೀಡುವ ಬದಲಿಗೆ ಮೊಳಕೆಕಾಳು ನೀಡಲು ಸರ್ಕಾರ ಚಿಂತನೆ ನಡೆಸಿದೆ.

ಮೊಟ್ಟೆ ನೀಡಬೇಕು ಎಂಬ ನಿಟ್ಟಿನಲ್ಲಿ ಒತ್ತಡ ಜಾಸ್ತಿಯಾಗುತ್ತಿದ್ದಂತೆಯೇ ಇನ್ನೊಂದು ವರ್ಗದಿಂದ ಅದಕ್ಕೆತೀವ್ರ ಆಕ್ಷೇಪ ವ್ಯಕ್ತವಾಗುವ ಲಕ್ಷಣವೂ ಕಾಣಿಸಿತ್ತು. ಇದನ್ನು ಮನಗಂಡ ಸರ್ಕಾರ ಮೊಳಕೆಕಾಳಿನ ಮೊರೆ ಹೋಗಿದೆ ಎಂದು ಹೇಳಲಾಗಿದೆ.

‘ಮೊಟ್ಟೆ ಮತ್ತು ಮೊಳಕೆಕಾಳಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳು ಇವೆ. ಬಿಸಿಯೂಟದಲ್ಲಿ ಮೊಳಕೆಕಾಳನ್ನು ನೀಡಿದ್ದೇ ಆದರೆ ಮೊಟ್ಟೆ ನೀಡುವುದರಿಂದ ಎದುರಾಗುವ ವಿವಾದವನ್ನು ನಿವಾರಿಸುವುದು ಸಾಧ್ಯ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಬಿಸಿಯೂಟದಲ್ಲಿ ಮೊಳಕೆಕಾಳು ಸೇರಿಸುವ ಬಗ್ಗೆ ನಾವು ಈಗಲೂ ಚಿಂತನೆ ನಡೆಸುತ್ತಿದ್ದೇವೆ. ಆದರೆ ಇದುವರೆಗೆ ಯಾವ ವಿಚಾರವನ್ನೂ ಅಂತಿಮಗೊಳಿಸಲಾಗಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದರು.

ಸದ್ಯ ಮಕ್ಕಳಿಗೆ ಬಿಸಿಯೂಟದ ಜತೆಗೆ ಅನ್ನ, ತರಕಾರಿ ಸಾಂಬಾರ್‌, ಮೊಸರು, ಬೇಳೆ ಸಾರು, ಉಪ್ಪಿಟ್ಟು, ಅವಲಕ್ಕಿ, ಪೊಂಗಲ್‌, ಬಿಸಿಬೇಳೆಬಾತ್‌ ನೀಡಲಾಗುತ್ತಿದೆ. ಕ್ಷೀರಭಾಗ್ಯ ಯೋಜನೆಯಲ್ಲಿ ಮಕ್ಕಳಿಗೆ ಪರಿಮಳಭರಿತ ಹಾಲು, ಕೆಲವು ಜಿಲ್ಲೆಗಳಲ್ಲಿ ಎನ್‌ಜಿಒಗಳ ಸಹಕಾರದಲ್ಲಿ ಪೌಷ್ಟಿಕಾಂಶಯುಕ್ತ ಹಾಲು ನೀಡಲಾಗುತ್ತಿದೆ. ಬಿಸಿಯೂಟದಲ್ಲಿ ಸಿರಿಧಾನ್ಯಗಳನ್ನೂ ನೀಡಬಹುದು ಎಂದು ಕೇಂದ್ರಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಈಚೆಗೆ ರಾಜ್ಯಗಳಿಗೆ ಸೂಚಿನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.