ಬೆಂಗಳೂರಿನಲ್ಲಿ ಸೋಮವಾರ ಆಯೋಜಿಸಿದ್ದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ 6,599 ಹೊಸ ಗ್ರಾಮ ಗ್ರಂಥಾಲಯ– ‘ಅರಿವು ಕೇಂದ್ರ’ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಿಮೋಟ್ ಒತ್ತುವ ಮೂಲಕ ಚಾಲನೆ ನೀಡಿದರು.
ಪ್ರಜಾವಾಣಿ ಚಿತ್ರ.
ಬೆಂಗಳೂರು: ರಾಜ್ಯದ ಎಲ್ಲಾ ಗ್ರಂಥಾಲಯ ಮೇಲ್ವಿಚಾರಕರನ್ನು ಕನಿಷ್ಠ ವೇತನಕ್ಕೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೋಮವಾರ ಆಯೋಜಿಸಿದ್ದ ಗ್ರಂಥಾಲಯ ಮೇಲ್ವಿಚಾರಕರ ರಾಜ್ಯ ಸಮ್ಮೇಳನ ಉದ್ಘಾಟಿಸಿ ಹಾಗೂ 6,599 ಹೊಸ ಗ್ರಾಮ ಗ್ರಂಥಾಲಯ– ‘ಅರಿವು ಕೇಂದ್ರ’ಗಳಿಗೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದರು.
‘ಪುಸ್ತಕಗಳು ಒಳ್ಳೆಯ ಸ್ನೇಹಿತನಿದ್ದಂತೆ. ಜ್ಞಾನ ವಿಕಾಸ ಶಾಲಾ ಶಿಕ್ಷಣದಿಂದ ಮಾತ್ರ ಸಾಧ್ಯವಿಲ್ಲ. ಶಾಲೆಗಳ ಹೊರಗೂ ಕಲಿಕೆ ಅಗತ್ಯ. ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದ ಸಮುದಾಯಗಳಿಗೆ ಅಂಬೇಡ್ಕರ್ ಅವರ ಸಂವಿಧಾನದ ಕಾರಣದಿಂದ ಶಿಕ್ಷಣ ಪಡೆಯುವ ಅವಕಾಶ ಸಿಕ್ಕಿದೆ’ ಎಂದು ಹೇಳಿದರು.
ಓದುವ ಹವ್ಯಾಸ ಬೆಳೆಸುವ ಉದ್ದೇಶದಿಂದಲೇ ಗ್ರಾಮ ಮಟ್ಟದಲ್ಲೂ ಉತ್ತಮ ಗ್ರಂಥಾಲಯಗಳನ್ನು ಆರಂಭಿಸಲಾಗುತ್ತಿದೆ ಎಂದರು.
ಡಿಜಿಟಲ್ ಗ್ರಂಥಾಲಯ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಪ್ರಸ್ತುತ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳನ್ನು ‘ಅರಿವು ಕೇಂದ್ರ'ಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. 5,895 ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಪೈಕಿ 5,691 ಗ್ರಂಥಾಲಯಗಳಿಗೆ ತಲಾ 2 ಗಣಕಯಂತ್ರಗಳು ಹಾಗೂ ಪೂರಕ ಸಾಧನಗಳನ್ನು ಒದಗಿಸಿ, ಅಂತರ್ಜಾಲ ವ್ಯವಸ್ಥೆ ಕಲ್ಪಿಸುವ ಮೂಲಕ ಡಿಜಿಟಲೀಕರಣಗೊಳಿಸಲಾಗಿದೆ. ಅಂಗವಿಕಲರಿಗೆ ಅನುಕೂಲ ಮಾಡಿಕೊಡಲು ರಾಜ್ಯಾದಾದ್ಯಂತ 814 ಬೀಕನ್ ಗ್ರಂಥಾಲಯಗಳನ್ನು ಪ್ರಾರಂಭಿಸಲಾಗಿದೆ ಎಂದರು.
‘ಓದುವ ಬೆಳಕು' ಕಾರ್ಯಕ್ರಮದಡಿ 6ರಿಂದ 18 ವರ್ಷದ ಮಕ್ಕಳಿಗೆ ಗ್ರಂಥಾಲಯದ ಸದಸ್ಯತ್ವ ನೀಡಿ ಮನೆಗೆ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಓದಲು ಅವಕಾಶ ಕಲ್ಪಿಸಿಕೊಡಲಾಗಿದೆ. ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಒಟ್ಟು 48.57 ಲಕ್ಷ ಮಕ್ಕಳು ನೋಂದಣಿಯಾಗಿದ್ದಾರೆ ಎಂದು ವಿವರಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.