(ಸಂಗ್ರಹ ಚಿತ್ರ)
ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗ) ಕೆಲಸದ ದಿನಗಳನ್ನು ಕುಟುಂಬವೊಂದಕ್ಕೆ 150 ದಿನಗಳಿಗೆ ಹೆಚ್ಚಿಸುವಂತೆ ಆಗ್ರಹಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಮತ್ತೆ ಪತ್ರ ಬರೆದಿದ್ದಾರೆ.
ಕೇಂದ್ರ ಸಚಿವರನ್ನು ಖುದ್ದಾಗಿ ಭೇಟಿಮಾಡಿ ಬೇಡಿಕೆ ಸಲ್ಲಿಸಲು ಪ್ರಿಯಾಂಕ್ ಅವರು ಕಳೆದ ವಾರದ ದೆಹಲಿ ಪ್ರವಾಸದ ಸಂದರ್ಭದಲ್ಲಿ ಪ್ರಯತ್ನಿಸಿದ್ದರು. ಆದರೆ, ಗಿರಿರಾಜ್ ಸಿಂಗ್ ಅವರು ಭೇಟಿಗೆ ಸಮಯಾವಕಾಶ ನೀಡಿರಲಿಲ್ಲ. ಕೆಲಸದ ದಿನಗಳ ಹೆಚ್ಚಳ ಹಾಗೂ ನರೇಗ ವೇತನದ ಬಾಕಿ ಮೊತ್ತ ಪಾವತಿಸಬೇಕೆಂಬ ಬೇಡಿಕೆಗಳುಳ್ಳ ಪತ್ರವನ್ನು ಕೇಂದ್ರ ಸಚಿವರ ಕಾರ್ಯಾಲಯಕ್ಕೆ ಸಲ್ಲಿಸಿ ಬಂದಿದ್ದಾರೆ.
‘ರಾಜ್ಯದ 223 ಬರಪೀಡಿತ ತಾಲ್ಲೂಕುಗಳಲ್ಲಿ ನರೇಗ ಅಡಿಯಲ್ಲಿ ಕುಟುಂಬವೊಂದಕ್ಕೆ ನೀಡುತ್ತಿರುವ ಕೆಲಸದ ದಿನಗಳನ್ನು 100ರಿಂದ 150ಕ್ಕೆ ಹೆಚ್ಚಿಸುವಂತೆ ಹಾಗೂ ವೇತನ ಬಾಕಿ ಮೊತ್ತ ₹400 ಕೋಟಿ ಬಿಡುಗಡೆ ಮಾಡುವಂತೆ ಒತ್ತಾಯಿಸಲು ಕೇಂದ್ರ ಸಚಿವರನ್ನು ಭೇಟಿಮಾಡಲು ಕಳೆದ ವಾರ ಹಲವು ಬಾರಿ ಪ್ರಯತ್ನಿಸಿದೆ. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ’ ಎಂದು ಪ್ರಿಯಾಂಕ್ ಅವರು ಪತ್ರವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
ರಾಜ್ಯದ 31 ಜಿಲ್ಲೆಗಳಲ್ಲೂ ಭೀಕರ ಬರಗಾಲ ಇದೆ. 223 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಇಂತಹ ಸಂಕಷ್ಟದ ಕಾಲದಲ್ಲಿ ನರೇಗಾ ಕೆಲಸದ ದಿನಗಳನ್ನು 100ರಿಂದ 150ಕ್ಕೆ ಹೆಚ್ಚಿಸಿದರೆ ಜನರಿಗೆ ಅನುಕೂಲವಾಗುತ್ತದೆ. ಈ ಕುರಿತು 2023ರ ಸೆಪ್ಟೆಂಬರ್ 20ರಂದೇ ಪತ್ರ ಬರೆದಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.