ADVERTISEMENT

ಸಚಿವ ಸ್ಥಾನ: ನಳಿನ್‌ಗೆ ಶಾಸಕರ ಒತ್ತಡ

‘ಬಿಜೆಪಿಯಿಂದಲೇ ನಾಲ್ಕೈದು ಬಾರಿ ಆಯ್ಕೆಯಾದವರಿಗೆ ಅವಕಾಶ ನೀಡಿ’

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 21:04 IST
Last Updated 19 ನವೆಂಬರ್ 2020, 21:04 IST

ಬೆಂಗಳೂರು: ಸಚಿವ ಸಂಪುಟದಲ್ಲಿರುವ ನಿಷ್ಕ್ರಿಯ ಹಾಗೂ ಹಿರಿತಲೆಗಳನ್ನು ಕೈಬಿಟ್ಟು ಬಿಜೆಪಿಯಿಂದಲೇ ನಾಲ್ಕೈದು ಬಾರಿ ಆಯ್ಕೆಯಾದವರಿಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಶಾಸಕರು ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಒತ್ತಡ ಹೇರಿದ್ದಾರೆ.

ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ಲಿಂಗಪ್ಪ, ಎಸ್.ವಿ. ರಾಮಚಂದ್ರ, ರಾಜೂಗೌಡ ಸೇರಿದಂತೆ 10 ಶಾಸಕರು ಕಟೀಲ್ ಅವರನ್ನು ಭೇಟಿ ಮಾಡಿ ತಮ್ಮ ಆಗ್ರಹವನ್ನು ಪ್ರತಿಪಾದಿಸಿದ್ದಾರೆ.

‘ಹೊರಗಿನಿಂದ ಬಂದವರಿಗೆ ಹಾಗೂ ಚುನಾವಣೆಯಲ್ಲಿ ಸೋತಿರುವ ಕೆಲವರಿಗೆ ಸಚಿವ ಸ್ಥಾನ ಕೊಡುತ್ತಲೇ ಹೋದರೆ ಪಕ್ಷದಲ್ಲೇ ಇದ್ದು ನಾಲ್ಕೈದು ಬಾರಿ ಶಾಸಕರಾಗಿ ಆಯ್ಕೆಯಾದವರಿಗೆ ಅವಕಾಶ ಸಿಗುವುದಿಲ್ಲ. ಈ ಬಾರಿ ಹೊಸಬರಿಗೆ ಅವಕಾಶ ಕೊಡಬೇಕು’ ಎಂದು ಬೇಡಿಕೆ ಮಂಡಿಸಿದ್ದಾರೆ.

ADVERTISEMENT

ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಬಳಿಕ ಪರಿಷತ್ತಿಗೆ ಆಯ್ಕೆ ಮಾಡಲಾಯಿತು. ಅಥಣಿ ಕ್ಷೇತ್ರದ ಉಪಚುನಾವಣೆ ಕಾರಣಕ್ಕೆ ಅವರಿಗೆ ಹುದ್ದೆ ನೀಡಲಾಯಿತು ಎಂದು ಹೇಳಲಾಗುತ್ತಿದೆ. ಅವರಿಲ್ಲದೇ ಇದ್ದರೂ ಅಥಣಿಯಲ್ಲಿ ಪಕ್ಷ ಗೆಲ್ಲುತ್ತಿತ್ತು. ಚುನಾವಣೆಯಲ್ಲಿ ಸೋತ ಯೋಗೇಶ್ವರ್ ಅವರನ್ನು ಪರಿಷತ್ತಿನ ಸದಸ್ಯರಾಗಿ ಮಾಡಲಾಗಿದೆ. ಅವರು ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಈ ರೀತಿಯ ಕ್ರಮಗಳಿಂದ ಕಾರ್ಯಕರ್ತರಿಗೆ ಯಾವ ರೀತಿಯ ಸಂದೇಶ ನೀಡಲಾಗುತ್ತಿದೆ ಎಂದು ಶಾಸಕರು ಪ್ರಶ್ನಿಸಿದರು ಎಂದು ಮೂಲಗಳು ಹೇಳಿವೆ.

‘ಪಕ್ಷದ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಅವರು ಬೆಂಗಳೂರಿಗೆ ಬಂದು ಶಾಸಕರ ಅಹವಾಲು ಆಲಿಸಲಿದ್ದಾರೆ. ಆಗ ನಿಮ್ಮ ಅಭಿಪ್ರಾಯ ಹೇಳಿ. ನಾನೂ ಮುಖ್ಯಮಂತ್ರಿ ಜತೆ ಮಾತನಾಡುತ್ತೇನೆ ಎಂದು ಕಟೀಲ್ ಭರವಸೆ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.