ADVERTISEMENT

‘ಔಷಧಿ ಪರಿಣಾಮ: 8 ಮಂದಿಗೆ ಚಿಕಿತ್ಸೆ ಮುಂದುವರಿಕೆ’

ಮಿಂಟೊ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 19:45 IST
Last Updated 14 ಜುಲೈ 2019, 19:45 IST

ಬೆಂಗಳೂರು: ‘ಔಷಧಿ ಪರಿಣಾಮದಿಂದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವಿಫಲವಾಗಿರುವ ಸಾಧ್ಯತೆಯಿದ್ದು, 23ರಲ್ಲಿ 8 ಮಂದಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಉಳಿದವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ’ ಎಂದು ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್‌ ತಿಳಿಸಿದರು.

‘ಕಳೆದ ಮಂಗಳವಾರ ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ ವ್ಯತಿರಿಕ್ತ ಫಲಿತಾಂಶ ಕಾಣಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಶಸ್ತ್ರಚಿಕಿತ್ಸೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿಫಲವಾಗಿದೆ. ಈ ಹಿಂದಿನಿಂದ ಅನುಸರಿಸಿಕೊಂಡು ಬಂದಶಸ್ತ್ರಚಿಕಿತ್ಸೆ ವಿಧಾನವನ್ನೇ ಈ ಪ್ರಕರಣಗಳಲ್ಲಿ ಕೂಡ ಅನುಸರಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ನಮ್ಮ ಆಸ್ಪತ್ರೆಯಲ್ಲಿ 10 ಸಾವಿರ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕೆಲವು ಪ್ರಕರಣದಲ್ಲಿ ರೋಗಿಗಳು ಔಷಧಕ್ಕೆ ಸ್ಪಂದಿಸುವುದಿಲ್ಲ. ಸದ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿರುವ 8 ಮಂದಿ ಕೂಡ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಪ್ರತಿನಿತ್ಯಕಣ್ಣು ಮತ್ತು ಕೈಗೆ ಒಂದು ಇಂಜೆಕ್ಷನ್‌ ನೀಡಬೇಕಾಗುತ್ತದೆ. ಹಾಗಾಗಿ ಆಸ್ಪತ್ರೆಯಲ್ಲಿ ಉಳಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ.ದಾಕ್ಷಾಯಿಣಿ ನೇತೃತ್ವದ ವೈದ್ಯರ ತಂಡವನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.