ADVERTISEMENT

ಮಿಂಟೊದಲ್ಲಿ ಲೇಸರ್‌ ಚಿಕಿತ್ಸೆ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 20:39 IST
Last Updated 20 ನವೆಂಬರ್ 2018, 20:39 IST
ಮಿಂಟೊ ಆಸ್ಪತ್ರೆ
ಮಿಂಟೊ ಆಸ್ಪತ್ರೆ   

ಬೆಂಗಳೂರು: ದೃಷ್ಟಿ ಸಮಸ್ಯೆ ಇದ್ದವರು, ಕನ್ನಡಕ ಬೇಡ, ಕಾಂಟ್ಯಾಕ್ಟ್‌ ಲೆನ್ಸ್‌ ಬೇಡ ಎನ್ನುವವರು ಹಾಗೂ ಕಣ್ಣಿಗೆ ಸಂಬಂಧಿಸಿದ ವಿವಿಧಸಮಸ್ಯೆ ಎದುರಿಸುತ್ತಿರುವವರು... ಎಲ್ಲರಿಗೂ ಹೊಸ ವರ್ಷದ ಹೊತ್ತಿಗೆ ಮಿಂಟೊ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ ಪಡೆಯುವ ಅವಕಾಶ ಸಿಗಲಿದೆ.

ಮಧ್ಯಮ ಮತ್ತು ಕೆಳವರ್ಗ ಎನ್ನದೆ, ಎಲ್ಲರಿಗೂ ಸುಲಭವಾಗಿ ಕೈಗೆಟಕುವ ದರದಲ್ಲಿಲೇಸರ್‌ ಚಿಕಿತ್ಸೆ ಸಿಗಲಿದ್ದು, ಖಾಸಗಿ ಆಸ್ಪತ್ರೆಯಲ್ಲಿ ₹50 ಸಾವಿರದಿಂದ ₹1 ಲಕ್ಷವರೆಗೆ ತಗಲುವ ಈ ಚಿಕಿತ್ಸೆಯನ್ನು ಮಿಂಟೊ ಆಸ್ಪತ್ರೆಯಲ್ಲಿ ಶೇ 30ರಿಂದ 40ರಷ್ಟು ರಿಯಾಯಿತಿ ದರದಲ್ಲಿ ಪಡೆಯಬಹುದಾಗಿದೆ. ಈ ಮೂಲಕ ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಲೇಸರ್‌ ಚಿಕಿತ್ಸೆಯನ್ನು ಜಾರಿಗೊಳಿಸುತ್ತಿರುವುದು ಮಿಂಟೊ ಆಸ್ಪತ್ರೆ ಹೆಗ್ಗಳಿಕೆಯಾಗಲಿದೆ.

‘ಹೈಟೆಕ್‌ ಚಿಕಿತ್ಸೆ ಜಾರಿಗೊಳಿಸಲು, ಆಸ್ಪತ್ರೆಗೆ ಸುಮಾರು₹6.5 ಕೋಟಿ ಮೌಲ್ಯದ ಲ್ಯಾಸಿಕ್‌ ಯಂತ್ರ ಅಳವಡಿಸಲು ಶರಣಪ್ರಕಾಶ್‌ ಪಾಟೀಲ ಅವರು ವೈದ್ಯಕೀಯ ಸಚಿವರಾಗಿದ್ದಾಗಲೇ ಈ ಪ್ರಕ್ರಿಯೆ ಕೈಗೊಳ್ಳಲಾಗಿತ್ತು. ಸದ್ಯ ಜರ್ಮನಿಯ ಜೈಸ್‌ ಕಂಪನಿ ಈ ಯಂತ್ರೋಪಕರಣಗಳನ್ನು ಪೂರೈಸಲಿದೆ’ ಎಂದು ಆಸ್ಪತ್ರೆಯವೈದ್ಯಕೀಯ ಅಧೀಕ್ಷಕಿಡಾ.ಸುಜಾತಾ ರಾಥೋಡ್‌ ತಿಳಿಸಿದರು.

ADVERTISEMENT

‘ದಶಕಗಳ ಹಿಂದೆಯೆ ಖಾಸಗಿ ಆಸ್ಪತ್ರೆಗಳಲ್ಲಿ ಲೇಸರ್‌ ಚಿಕಿತ್ಸೆ ಲಭ್ಯವಿದೆ. ಆದರೆ, ಬಹು ದುಬಾರಿಯಾಗಿದ್ದರಿಂದ ಎಲ್ಲ ವರ್ಗದ ಜನರಿಗೂ ಈ ಸೇವೆಯನ್ನು ಪಡೆಯುವುದು ಕಷ್ಟವಾಗಿದೆ. ಹಾಗಾಗಿ, ಸರ್ಕಾರಿ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಯನ್ನು ಆರಂಭಿಸುತ್ತಿರುವ ಕಾರಣ ಜನರಿಗೆ ಹೆಚ್ಚು ಅನುಕೂಲಕಾರಿಯಾಗಲಿದೆ’ ಎಂದು ಹೇಳಿದರು.

‘ಲ್ಯಾಸಿಕ್‌ ಯಂತ್ರದ ಜತೆಗೆ ಕಣ್ಣಿನಲ್ಲಿ ರಕ್ತಸ್ರಾವದ ಸಮಸ್ಯೆಗೆ ಚಿಕಿತ್ಸೆ ನೀಡಲು ವೆಕ್ಟ್ರಾಕ್ಟಮಿ ಯಂತ್ರವೂ ಸೇರಿದಂತೆ ಸುಮಾರು ₹12 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಆಸ್ಪತ್ರೆಯನ್ನು ಸೂಪರ್‌ ಸ್ಪೆಷಾಲಿಟಿ ದರ್ಜೆಗೆ ಏರಿಸುವ ಯೋಜನೆಆರಂಭಿಸುವ ಮೂಲಕ ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಕಾರ್ಯಕ್ಕೆ ಇದೀಗ ಚಾಲನೆ ನೀಡಲಾಗಿದೆ’ ಎಂದು ಹೇಳಿದರು.

ಸೆಕೆಂಡುಗಳಲ್ಲಿ ಚಿಕಿತ್ಸೆ ಪೂರ್ಣ: ಕಣ್ಣಿಗೆ ಸಂಬಂಧಪಟ್ಟ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಲು ಸಾಕಷ್ಟು ಸಮಯಬೇಕಾಗುತ್ತದೆ. ಆದರೆ, ಲೇಸರ್‌ ಶಸ್ತ್ರಚಿಕಿತ್ಸೆ ಕೆಲವೇ ಸೆಕೆಂಡುಗಳಲ್ಲಿ ನಡೆಯಲಿದ್ದು, ಪ್ರಕ್ರಿಯೆ ಪೂರ್ಣಗೊಳ್ಳಲು 5ರಿಂದ 6 ನಿಮಿಷ ಸಾಕಾಗುತ್ತದೆ. ರೋಗಿಯ ಲಕ್ಷಣಗಳನ್ನು ನೋಡಿ ಚಿಕಿತ್ಸೆ ನೀಡಲಾಗುವುದು. ಸಾಮಾನ್ಯವಾಗಿ 23 ವರ್ಷ ಮೇಲ್ಪಟ್ಟವರು ಈ ಚಿಕಿತ್ಸೆಯನ್ನು ಪಡೆಯಬಹುದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.