ADVERTISEMENT

ರೈಲಿನಲ್ಲಿ ದುರ್ವರ್ತನೆ; ಪೊಲೀಸರ ‘ವ್ಯಾಪ್ತಿ’ ನೆಪ

ಅಸಭ್ಯ ವರ್ತನೆ ತೋರಿದ ವ್ಯಕ್ತಿ l ಫೇಸ್‌ಬುಕ್‌ನಲ್ಲಿ ಹರಿಹಾಯ್ದ ಸಂತ್ರಸ್ತೆ l ಪೊಲೀಸರ ನಡೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಮೇ 2019, 19:45 IST
Last Updated 21 ಮೇ 2019, 19:45 IST
   

ಬೆಂಗಳೂರು: ರೈಲಿನಲ್ಲಿ ನಿದ್ರೆಗೆ ಜಾರಿದ್ದಾಗ ತಮ್ಮ ಮೈಮುಟ್ಟಿದ್ದಲ್ಲದೆ ಮರ್ಮಾಂಗ ತೋರಿಸಿ ವಿಕೃತಿ ಮೆರೆದಿದ್ದವನ ವಿರುದ್ಧ ದೂರು ಕೊಡಲು ಹೋದರೆ, ವ್ಯಾಪ್ತಿಯ ನೆಪ ಹೇಳಿ ಠಾಣೆಯಿಂದ ಠಾಣೆಗೆ ಅಲೆದಾಡಿಸಿದ ಪೊಲೀಸರ ವಿರುದ್ಧ ಸಂತ್ರಸ್ತ ಯುವತಿ ಫೇಸ್‌ಬುಕ್‌ನಲ್ಲಿ ಹರಿಹಾಯ್ದಿದ್ದಾರೆ.

ಕೇಂದ್ರ ಸರ್ಕಾರ, ರೈಲ್ವೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರು ಪೊಲೀಸ್‌ ಫೇಸ್‌ಬುಕ್‌ ಪೇಜ್‌ಗಳಿಗೂ ತಮ್ಮ ಬರಹ ಟ್ಯಾಗ್ ಮಾಡಿರುವ ಸಂತ್ರಸ್ತೆ, ‘ರೈಲಿನಲ್ಲಿ ಇಂತಹ ಅದ್ಭುತ ‘ಸೇವೆ’ ಒದಗಿಸಿದ್ದಕ್ಕೆ ‌ನಿಮ್ಮೆಲ್ಲರಿಗೂ ಧನ್ಯವಾದಗಳು. ನೀವಿರದಿದ್ದರೆ ಈ ರೀತಿಯ ಸೇವೆ ಸಿಗುತ್ತಿರಲಿಲ್ಲ’ ಎಂದೂ ವ್ಯಂಗ್ಯವಾಗಿ ಹೇಳಿದ್ದಾರೆ.

ಯುವತಿಯ ಬರಹ: ‘ಮೇ 17ರ ರಾತ್ರಿ ರೈಲಿನಲ್ಲಿ ಬೆಂಗಳೂರಿಗೆ ಬರುತ್ತಿದ್ದೆ. ನಾನು ಅರ್ಧ ನಿದ್ರೆಯಲ್ಲಿದ್ದಾಗ ಸುಮಾರು 55 ವರ್ಷದ ವ್ಯಕ್ತಿಯೊಬ್ಬ ನನ್ನ ದೇಹ ಮುಟ್ಟುತ್ತಿದ್ದ. ಎಚ್ಚರಗೊಂಡಾಗ ಆತ ಮರ್ಮಾಂಗ ತೋರಿಸಿಕೊಂಡು ನಿಂತಿದ್ದ. ಪಕ್ಕದ ಕೋಚ್‌ನಲ್ಲಿದ್ದ ಸ್ನೇಹಿತರನ್ನು ಕೂಗುತ್ತಿದ್ದಂತೆಯೇ ಆತ ಬೇರೆ ಕೋಚ್‌ಗೆ ತೆರಳಿ, ರೈಲಿನ ವೇಗ ಕಡಿಮೆ ಆಗುತ್ತಿದ್ದಂತೆಯೇ ಇಳಿದು ಹೊರಟು ಹೋದ’ ಎಂದು ಸಂತ್ರಸ್ತೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

‘ನಾನು ಹಾಗೂ ಇಬ್ಬರು ಸ್ನೇಹಿತರು ಆತನಿಗಾಗಿ ಸುಮಾರು ಹೊತ್ತು ಹುಡು ಕಾಡಿದೆವು. ಕೊನೆಗೆ ವೈಟ್‌ಫೀಲ್ಡ್ ಠಾಣೆಯ ಮೆಟ್ಟಿಲೇರಿದೆವು. ಪೂರ್ತಿ ಕತೆ ಕೇಳಿದ ಆ ಪೊಲೀಸರು, ‘ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಕಾಡುಗೋಡಿ ಠಾಣೆಗೆ ಹೋಗಿ’ ಎಂದರು. ಅಂತೆಯೇ ಕಾಡುಗೋಡಿಯತ್ತ ಹೋದರೆ, ಅಲ್ಲಿನವರು ಠಾಣೆಯ ಒಳಗೂ ಬಿಟ್ಟುಕೊಳ್ಳದೆ, ರೈಲ್ವೆ ಪೊಲೀಸರತ್ತ ಹೋಗುವಂತೆ ಸೂಚಿಸಿದರು.’

‘ಕೊನೆಯ ಪ್ರಯತ್ನವೆಂದು ಅಲ್ಲಿಗೆ ಹೋದಾಗ ಇಬ್ಬರು ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಂದ ನನಗೆ ದಿಗಿಲು ಬಡಿದಂತಾಯಿತು. ಅವನ ಹೆಸರು ಗೊತ್ತ? ಫೋನ್ ನಂಬರ್ ಇದೆಯಾ? ಮನೆ ವಿಳಾಸ ಗೊತ್ತಾ... ಎಂದು ಪ್ರಶ್ನೆಗಳ ಸುರಿಮಳೆಗೈದರು. ಆ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಲು ಬಂದಾಗ ನಾನು ಮೊದಲು ಆತನ ಹೆಸರು, ವಿಳಾಸ ತಿಳಿದುಕೊಳ್ಳಬೇಕಿತ್ತು ಎಂಬಂತಿತ್ತು ರೈಲ್ವೆ ಪೊಲೀಸರ ವಿಚಾರಣೆ’ ಎಂದು ಕಿಡಿಕಾರಿದ್ದಾರೆ.

‘ಪೊಲೀಸರೇ ದೊಡ್ಡ ಸಮಸ್ಯೆ’

ಪೊಲೀಸರ ವರ್ತನೆಗೆ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ‘ಮೊದಲು ದೂರು ತೆಗೆದುಕೊಂಡು, ಸಂತ್ರಸ್ತೆಗೆ ಸಾಂತ್ವನ ಹೇಳುವ ಕೆಲಸ ಮಾಡಿ. ಆನಂತರ ಬೇಕಿದ್ದರೆ, ಸಂಬಂಧಪಟ್ಟ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿಕೊಳ್ಳಿ. ಸಮಸ್ಯೆ ಹೊತ್ತು ಬಂದವರಿಗೆ, ನೀವು ಇನ್ನೂ ದೊಡ್ಡ ಸಮಸ್ಯೆಯಾದರೆ ಹೇಗೆ? ಇದೇನಾ ನಿಮ್ಮ ಜನಸ್ನೇಹಿ ಪೊಲೀಸಿಂಗ್?’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಪೊಲೀಸರ ವರ್ತನೆಗೆ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ‘ಮೊದಲು ದೂರು ತೆಗೆದುಕೊಂಡು, ಸಂತ್ರಸ್ತೆಗೆ ಸಾಂತ್ವನ ಹೇಳುವ ಕೆಲಸ ಮಾಡಿ. ಆನಂತರ ಬೇಕಿದ್ದರೆ, ಸಂಬಂಧಪಟ್ಟ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿಕೊಳ್ಳಿ. ಸಮಸ್ಯೆ ಹೊತ್ತು ಬಂದವರಿಗೆ, ನೀವು ಇನ್ನೂ ದೊಡ್ಡ ಸಮಸ್ಯೆಯಾದರೆ ಹೇಗೆ? ಇದೇನಾ ನಿಮ್ಮ ಜನಸ್ನೇಹಿ ಪೊಲೀಸಿಂಗ್?’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.