ADVERTISEMENT

ಮತದಾರರ ಪಟ್ಟಿಯಲ್ಲಿ ಹೆಸರುಗಳು ಅದಲು-ಬದಲು: ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 16:04 IST
Last Updated 11 ಡಿಸೆಂಬರ್ 2020, 16:04 IST
ಕಾಂಗ್ರೆಸ್ ಮುಖಂಡರು ತಹಶೀಲ್ದಾರ್ ಕೆ.ನರಸಿಂಹಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. 
ಕಾಂಗ್ರೆಸ್ ಮುಖಂಡರು ತಹಶೀಲ್ದಾರ್ ಕೆ.ನರಸಿಂಹಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.    

ಯಲಹಂಕ: ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರುಗಳನ್ನು ಒಂದು ವಾರ್ಡ್‌ನಿಂದ ಮತ್ತೊಂದು ವಾರ್ಡ್‌ಗೆ ಸೇರಿಸಿ, ಅದಲು-ಬದಲು ಮಾಡುವ ಮೂಲಕ ಕಂದಾಯ ಇಲಾಖೆಯ ಅಧಿಕಾರಿಗಳು ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿ ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಕೆ.ಅಶೋಕನ್, ’ಚಿಕ್ಕಜಾಲದ ಗ್ರಾಮ ಲೆಕ್ಕಾಧಿಕಾರಿ ಸಂದೀಪ್ ಅವರು ಬಿಜೆಪಿಯವರ ಮಾತನ್ನು ಕೇಳಿಕೊಂಡು ರಾತ್ರೋರಾತ್ರಿ ಮತದಾರರ ಪಟ್ಟಿಯಲ್ಲಿ ಚಿಕ್ಕಜಾಲದ 4 ವಾರ್ಡ್‌ಗಳ ಮತದಾರರ ಹೆಸರುಗಳನ್ನು ಒಂದು ವಾರ್ಡ್‌ನಿಂದ ಮತ್ತೊಂದು ವಾರ್ಡ್‌ಗೆ ಸೇರಿಸುವ ಮೂಲಕ ಅಕ್ರಮ ಎಸಗಿದ್ದಾರೆ. ಇದರಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲದಂತೆ ಅನಾನುಕೂಲವಾಗಿದೆ‘ ಎಂದು ಆರೋಪಿಸಿದರು.

’ಅವರ ಬಣ್ಣ ಬಯಲಾಗುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದು, ಈ ವ್ಯಕ್ತಿಯ ವಿರುದ್ಧ ಕೂಡಲೇ ಕಾನೂನುಕ್ರಮ ಕೈಗೊಳ್ಳುವುದರ ಜೊತೆಗೆ ಪಂಚಾಯಿತಿ ಚುನಾವಣೆಯನ್ನು ರದ್ಧುಪಡಿಸಬೇಕು. ಇಲ್ಲದಿದ್ದರೆ ಮತದಾರರ ಪಟ್ಟಿಯನ್ನು ಯಥಾಸ್ಥಿತಿಯಲ್ಲಿ ಸಿದ್ಧಪಡಿಸಬೇಕು‘ ಎಂದರು.

ADVERTISEMENT

ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ತಪ್ಪಿದಲ್ಲಿ ಚುನಾವಣಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಸೋಮವಾರದಿಂದ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಉದಯಶಂಕರ್, ’ಚಿಕ್ಕಜಾಲ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ 4 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಇದರಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಅಧಿಕಾರಿಗಳು ಅವೈಜ್ಞಾನಿಕವಾಗಿ ಒಂದು ವಾರ್ಡ್‌ನಿಂದ ಮತ್ತೊಂದು ವಾರ್ಡ್‌ಗೆ ಸೇರಿಸಿದ್ದಾರೆ. ಗ್ರಾಮಪಂಚಾಯಿತಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಉದ್ದೇಶಪೂರ್ವಕವಾಗಿ ಅನ್ಯಮಾರ್ಗದಿಂದ ಗೆಲ್ಲಲು ಬಿಜೆಪಿಯವರು ಈ ರೀತಿಯ ವಾಮಮಾರ್ಗ ಹಿಡಿದಿದ್ದಾರೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿ ಇಂತಹ ಅಕ್ರಮವೆಸಗಿದ್ದಾರೆ‘ ಎಂದು ದೂರಿದರು.

ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮೀಪತಿ, ’ಜನರನ್ನು ದಿಕ್ಕುತಪ್ಪಿಸುವ ಸಲುವಾಗಿ ಕಂದಾಯ ಅಧಿಕಾರಿಗಳು ಇಂತಹ ಅಕ್ರಮ ಎಸಗಿದ್ದಾರೆ. ಮತದಾರರು ವಾಸವಾಗಿರುವ ವಾರ್ಡ್‌ನಲ್ಲಿ ಮತದಾನ ಮಾಡಿದರೆ ಯಾವುದೇ ಕೆಲಸ ಮಾಡಿಸಿಕೊಳ್ಳಲು ಸಾಧ್ಯ. ಆದರೆ, ಮತ್ತೊಂದು ವಾರ್ಡ್‌ನಲ್ಲಿ ಮತದಾನ ಮಾಡುವುದರಿಂದ ಭವಿಷ್ಯದಲ್ಲಿ ಸಮಸ್ಯೆಯಾಗಲಿದೆ‘ ಎಂದರು.

ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ತಹಶೀಲ್ದಾರ್ ಕೆ.ನರಸಿಂಹಮೂರ್ತಿ, ’ಮತದಾರರ ಪಟ್ಟಿಯಲ್ಲಿ ಹೆಸರುಗಳು ಒಂದು ವಾರ್ಡ್‌ನಿಂದ ಮತ್ತೊಂದು ವಾರ್ಡ್‌ ಗೆ ಸೇರ್ಪಡೆಯಾಗಿವೆ ಎಂದು ಚಿಕ್ಕಜಾಲ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು ದೂರು ನೀಡಿದ್ದಾರೆ. ಈ ಬಗ್ಗೆ ಈಗಾಗಲೇ ಪರಿಶೀಲಿಸಿ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಆ ರೀತಿಯ ವ್ಯತ್ಯಾಸವಾಗಿದ್ದರೆ ಕಾನುನುಕ್ರಮ ಕೈಗೊಳ್ಳಲಾಗುವುದು‘ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡರಾದ ಎಂ.ಜಯಗೋಪಾಲಗೌಡ, ಎನ್.ಎನ್.ಶ್ರೀನಿವಾಸಯ್ಯ, ಜಾಲಾ ಕಿಟ್ಟಿ, ಎಚ್.ಎ.ಶಿವಕುಮಾರ್, ಗೌರೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.