ADVERTISEMENT

ರಸ್ತೆ ತಡೆದು ಶಾಸಕರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 17:39 IST
Last Updated 31 ಜನವರಿ 2021, 17:39 IST
ಶಾಸಕ ಶ್ರೀನಿವಾಸ ಮೂರ್ತಿ ಹಾಗೂ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಶಾಸಕ ಶ್ರೀನಿವಾಸ ಮೂರ್ತಿ ಹಾಗೂ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.   

ದಾಬಸ್‌ಪೇಟೆ: ತ್ಯಾಮಗೊಂಡ್ಲು ಹೋಬಳಿಯಲ್ಲಿಕೆಐಎಡಿಬಿಯ ವತಿಯಿಂದ 'ಮಲ್ಟಿ ಮಾಡೆಲ್‌ ಲಾಜಿಸ್ಟಿಕ್‌ ಪಾರ್ಕ್ (ಎಂಎಂಎಲ್‌ಪಿ) ನಿರ್ಮಾಣಕ್ಕೆ 858 ಎಕರೆ ಭೂಸ್ವಾಧೀನಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಶಾಸಕ ಶ್ರೀನಿವಾಸ ಮೂರ್ತಿ ನೇತೃತ್ವದಲ್ಲಿ ನೂರಾರು ರೈತರು ಓಬಳಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಹೋಬಳಿಯ ಓಬಳಾಪುರ, ಹಾದಿಹೊಸಹಳ್ಳಿ, ದೊಡ್ಡ ಚನ್ನೋಹಳ್ಳಿ, ಮಾವಿನ ಕೊಮ್ಮನಹಳ್ಳಿ, ದೊಡ್ಡಬೆಲೆ, ಕಾರೇಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಎಕರೆಗಟ್ಟಲೆ ಭೂಮಿ ಸ್ವಾಧೀನಕ್ಕೆ ಸುತ್ತೋಲೆ ಹೊರಡಿಸಿರುವುದರಿಂದ ರೈತರು ವಿರೋಧ ವ್ಯಕ್ತಪಡಿಸಿದರು.

’ಈ ಭಾಗದಲ್ಲಿ ಸಣ್ಣಪುಟ್ಟ ರೈತರೇ ಹೆಚ್ಚಾಗಿ ಇದ್ದಾರೆ. ರೈತರ ಬಳಿ ಅಲ್ಪ ಭೂಮಿ ಮಾತ್ರ ಇದ್ದು, ಅದನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಅದನ್ನೂ ಸರ್ಕಾರ ಕಿತ್ತುಕೊಂಡರೇ ರೈತರ ಪಾಡೇನು? ಸರ್ಕಾರ ಯೋಜನೆಗೆ ಈ ಪ್ರದೇಶಕ್ಕೆ ಪರ್ಯಾಯವಾಗಿ ಬೇರೆಡೆಸ್ಥಳ ನೀಡಬೇಕು. ಇಲ್ಲದಿದ್ದರೆ ಹೋರಾಟ ಮುಂದುವರೆಯಲಿದೆ’ ಎಂದು ಶ್ರೀನಿವಾಸಮೂರ್ತಿ ಎಚ್ಚರಿಸಿದರು.

ADVERTISEMENT

‘ಬದುಕಿಗೆ ಕೃಷಿಯೇ ಆಧಾರ. ಸರ್ಕಾರ ಭೂಮಿ ಕಿತ್ತುಕೊಂಡರೆ, ಬದುಕುವುದಾದರೂ ಹೇಗೆ? ಭೂಮಿಗೆ ನೀಡುವ ಹಣ ಎಷ್ಟು ದಿನ ಇರುತ್ತದೆ? ಏನೇ ಆದರೂ ನಮ್ಮ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ. ರೈತರ ಹಿತದೃಷ್ಟಿಯಿಂದ ಸರ್ಕಾರ ಈ ಯೋಜನೆಯಿಂದ ಹಿಂದೆ ಸರಿಯಬೇಕು’ ಎನ್ನುತ್ತಾರೆ ರೈತ ಹನುಮಂತೇಗೌಡ.

ಟಿಎಪಿಸಿಎಂಎಸ್ ಅಧ್ಯಕ್ಷ ಗುರುಪ್ರಕಾಶ್, ಮುಖಂಡರಾದ ಪುರುಷೋತ್ತಮ್, ಕರಿರಾಜು, ಮಹಿಮಣ್ಣ, ರಂಗಸ್ವಾಮಿ, ನಟರಾಜು, ಶಿವಕುಮಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.