ADVERTISEMENT

ಶಾಸಕರ ಕೊಲೆಗೆ ಸಂಚು: ಕುಳ್ಳ ದೇವರಾಜ್ ಬಂಧನ

ರಾಜಾನುಕುಂಟೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲು l ಪುರಾವೆಗಳನ್ನು ಪೊಲೀಸರಿಗೆ ನೀಡಿದ ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 21:30 IST
Last Updated 2 ಡಿಸೆಂಬರ್ 2021, 21:30 IST
ಬಂಧನ–ಪ್ರಾತಿನಿಧಿಕ ಚಿತ್ರ
ಬಂಧನ–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಆರ್. ವಿಶ್ವನಾಥ್ ಕೊಲೆಗೆ ಸಂಚು ರೂಪಿಸಿದ್ದ ಬಗ್ಗೆ ರಾಜಾ
ನುಕುಂಟೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಇದರ ಬೆನ್ನಲ್ಲೇ ಆರೋಪಿ ಕುಳ್ಳ ದೇವರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.

‘ಕೊಲೆಗೆ ಸಂಚು ರೂಪಿಸಿದ್ದ ಬಗ್ಗೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಹಾಗೂ ಕುಳ್ಳ ದೇವರಾಜ್ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ವಿಡಿಯೊ ಹಾಗೂ ಆಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ವಿಶ್ವನಾಥ್ ನೀಡಿರುವ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಲಯವನ್ನು ಕೋರಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪದ ಬಗ್ಗೆ ಆರಂಭದಲ್ಲಿ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ಮಾತ್ರ ದಾಖಲಿಸಿಕೊಂಡು, ನ್ಯಾಯಾಲ
ಯಕ್ಕೆ ವರದಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಆದೇಶ
ನೀಡಿದೆ. ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಠ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಪಿತೂರಿ (ಐಪಿಸಿ 120ಬಿ) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ADVERTISEMENT

ಪುರಾವೆ ನೀಡಿದ ಶಾಸಕ: ಪ್ರಕರಣ ದಾಖಲಾಗುತ್ತಿದ್ದಂತೆ ವಿಶ್ವನಾಥ್ ಅವರಿಗೆ ನೋಟಿಸ್ ನೀಡಿದ್ದ ಪೊಲೀಸರು, ‘ಕೊಲೆಗೆ ಸಂಚು ರೂಪಿಸಿದ್ದ ಬಗ್ಗೆ ಪುರಾವೆಗಳು ಇದ್ದರೆ ಹಾಜರುಪಡಿಸಿ’ ಎಂದು ಕೋರಿದ್ದರು.

ರಾಜಾನುಕುಂಟೆ ಠಾಣೆಗೆ ಗುರುವಾರ ಹಾಜರಾದ ವಿಶ್ವನಾಥ್, ತಮ್ಮ ಬಳಿಯ ಪುರಾವೆಗಳನ್ನು ಪೊಲೀಸರಿಗೆ ನೀಡಿದರು. ಪೊಲೀಸರ ಪ್ರಶ್ನೆಗಳಿಗೂ ಉತ್ತರಿಸಿದರು.

ಠಾಣೆ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪ್ರಕರಣಕ್ಕೆ ಪುರಾವೆಯಾದ ವಿಡಿಯೊಗಳು ಇರುವ ಪೆನ್‌ಡ್ರೈವ್‌ ಅನ್ನು ಪೊಲೀಸರಿಗೆ ನೀಡಲಾಗಿದೆ. ಎಲ್ಲವನ್ನೂ ಪೊಲೀಸರು ಪರಿಶೀಲಿಸಲಿದ್ದಾರೆ’ ಎಂದರು.

‘ಇಂಥ ಸಂಚುಗಳು ಹಲವು ದಿನಗಳಿಂದ ನಡೆಯುತ್ತಿದ್ದು, ವಿಡಿಯೊ ಹಾಗೂ ಆಡಿಯೊ ನೋಡಿದ ಮೇಲೆ ನನಗೆ ಗೊತ್ತಾಗಿದೆ. ಈ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿದ್ದೇನೆ’ ಎಂದೂ ಹೇಳಿದರು.

‘ಹಳೇ ವಿಡಿಯೊ: ಪ್ರಯೋಗಾಲಯಕ್ಕೆ’

‘ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರುದಾರರು ನೀಡಿರುವ ವಿಡಿಯೊ, 2–3 ವರ್ಷಗಳ ಹಿಂದೆ ಚಿತ್ರೀಕರಿಸಿದ್ದು ಎಂಬ ಮಾಹಿತಿ ಇದೆ. ವಿಡಿಯೊವನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮಾಹಿತಿ ತಿಳಿಯಲಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೊಲೆ ಸಂಚಿನಲ್ಲಿ ಎಳೆತಂದು ಮಾನಹಾನಿ’

‘ಶಾಸಕನಾಗಿ ನಾನು ಮಾಡುತ್ತಿರುವ ಜನಸೇವೆಯನ್ನು ಸಹಿಸದ ಗೋಪಾಲಕೃಷ್ಣ ಹಾಗೂ ಇತರರು, ದ್ವೇಷ ಹಾಗೂ ಅಸೂಯೆಯಿಂದ ನನ್ನನ್ನು ಕೊಲೆ ಮಾಡಿಸಲು ಆಂಧ್ರಪ್ರದೇಶದ ಯುವಕರಿಂದ ಸಂಚು ರೂಪಿಸಿದ್ದಾರೆ. ಚುನಾವಣಾ ದೃಷ್ಟಿಯಿಂದ ನನ್ನ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ವಿಶ್ವನಾಥ್ ದೂರಿನಲ್ಲಿ ತಿಳಿಸಿದ್ದಾರೆ.

‘ಯಲಹಂಕದ ಕೋಗಿಲು ಕ್ರಾಸ್ ಬಳಿ ನಡೆದಿದ್ದ ಕಡಬಗೆರೆ ಸೀನ ಕೊಲೆ ಸಂಚಿನ ಪ್ರಕರಣದಲ್ಲೂ ನನ್ನನ್ನು ಸುಖಾಸುಮ್ಮನೇ ಎಳೆದು ತರಲಾಗಿತ್ತು. ಕೊಲೆ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಿ ಮಾನಹಾನಿ ಸಹ ಮಾಡಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.