ADVERTISEMENT

ಹೆಚ್ಚುವರಿ ಸುರಕ್ಷತೆಯೊಂದಿಗೆ ಸಜ್ಜಾಗುತ್ತಿದೆ ಮಿಂಟೊ

ಔಷಧ ಬಳಕೆಗೂ ಮುನ್ನ ಆಸ್ಪತ್ರೆ ಹಂತದಲ್ಲಿ ಮಾದರಿ ಪರೀಕ್ಷೆ l ಅವಘಡ ತಡೆಗೆ ಕ್ರಮ

ವರುಣ ಹೆಗಡೆ
Published 12 ಆಗಸ್ಟ್ 2019, 19:40 IST
Last Updated 12 ಆಗಸ್ಟ್ 2019, 19:40 IST
ಮಿಂಟೊ ಕಣ್ಣಿನ ಆಸ್ಪತ್ರೆ–ಪ್ರಜಾವಾಣಿ ಚಿತ್ರ
ಮಿಂಟೊ ಕಣ್ಣಿನ ಆಸ್ಪತ್ರೆ–ಪ್ರಜಾವಾಣಿ ಚಿತ್ರ   

ಬೆಂಗಳೂರು: ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳು ದೃಷ್ಟಿ ಕಳೆದುಕೊಂಡ ಪ್ರಕರಣ ನಡೆದ ಬಳಿಕ ಎಚ್ಚೆತ್ತುಕೊಂಡ ಮಿಂಟೊ ಕಣ್ಣಿನ ಆಸ್ಪತ್ರೆ ರೋಗಿಗಳ ಹಿತದೃಷ್ಟಿಯಿಂದ ಹೆಚ್ಚುವರಿ ಸುರಕ್ಷತಾ ಕ್ರಮವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಇನ್ನು ಮುಂದೆ ಶಸ್ತ್ರಚಿಕಿತ್ಸೆ ವೇಳೆ ಬಳಸುವ ಔಷಧದ ಮಾದರಿಯನ್ನು ಆಸ್ಪತ್ರೆಯ ಹಂತ ದಲ್ಲಿ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸುವ ನಿರ್ಧಾರ ಕೈಗೊಂಡಿದೆ.

ಜುಲೈ 9ರಂದು ಆಸ್ಪತ್ರೆಯಲ್ಲಿ ನಡೆದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯು ರೋಗಿಗಳ ಜತೆಗೆ ವೈದ್ಯರಿಗೂ ಆಘಾತ ನೀಡಿತ್ತು. ಶಸ್ತ್ರಚಿಕಿತ್ಸೆಗೆ ಒಳಪಟ್ಟ 24 ಮಂದಿಯಲ್ಲಿ ಬಹುತೇಕರು ಔಷಧದ ವ್ಯತಿರಿಕ್ತ ಪರಿಣಾಮದಿಂದ ದೃಷ್ಟಿ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಶಸ್ತ್ರಚಿಕಿತ್ಸೆ ವೇಳೆ ಬಳಸಿದ ಔಷಧದಲ್ಲಿ ಸೂಡೋಮೋನಾಸ್‌ ವೈರಾಣು ಇದ್ದುದೇ ಇದಕ್ಕೆ ಕಾರಣ ಎಂಬುದು ಆಸ್ಪತ್ರೆ ಹಾಗೂ ವಿವಿಧ ಪ್ರಯೋಗಾಲಯಗಳ ವರದಿಯಿಂದ ಸಾಬೀತಾಗಿದೆ. ಇಂತಹ ಅವಘಡ ಮರುಕಳಿಸುವುದನ್ನು ತಡೆಯುವ ಉದ್ದೇಶ
ದಿಂದ ಆಸ್ಪತ್ರೆಯು ಔಷಧವನ್ನು ಎರಡನೇ ಹಂತದಲ್ಲಿ ಪರಿಶೀಲಿಸಲು ಮುಂದಾಗಿದೆ.

ಒಂದು ತಿಂಗಳಿನಿಂದ ಶಸ್ತ್ರಚಿಕಿತ್ಸಾ ಕೇಂದ್ರ (ಓ.ಟಿ) ಸ್ಥಗಿತವಾಗಿರುವುದರಿಂದ ಕಣ್ಣಿನ ಗಂಭೀರ ಸಮಸ್ಯೆ ಎದುರಿಸುತ್ತಿದ್ದವರು ಶಸ್ತ್ರಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳತ್ತೆ ಮುಖ ಮಾಡುತ್ತಿದ್ದಾರೆ. ಕೆಲವರು ಶಸ್ತ್ರಚಿಕಿತ್ಸೆಯನ್ನು ಮುಂದೂಡಿದ್ದು, ಶಸ್ತ್ರಚಿಕಿತ್ಸಾ ಕೇಂದ್ರ ಆರಂಭವಾಗುವುದನ್ನು ಎದುರು ನೋಡುತ್ತಿದ್ದಾರೆ.ಪ್ರತಿನಿತ್ಯ ನೂರಾರು ಮಂದಿ ಕರೆ ಮಾಡುವ ಜತೆಗೆ ಆಸ್ಪತ್ರೆಗೆ ಬಂದು ವಿಚಾರಿಸುತ್ತಿದ್ದಾರೆ. ಆ.15ರಿಂದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮತ್ತೆ ಆರಂಭವಾಗುವ ನಿರೀಕ್ಷೆಯಿದೆ.

ADVERTISEMENT

ಸೂಕ್ಷ್ಮಾಣು ಜೀವಿ ಶಮನ: ‘ಅಖಿಲ ಭಾರತ ಕಣ್ಣಿನ ವಿಜ್ಞಾನ ಸೊಸೈಟಿ (ಎಐಒಎಸ್) ಮಾರ್ಗಸೂಚಿ ಅನುಸಾರ ಶಸ್ತ್ರಚಿಕಿತ್ಸೆಗೆ ಔಷಧಗಳನ್ನು ಬಳಕೆ ಮಾಡಲಾಗುತ್ತಿದೆ. ಆಸ್ಪತ್ರೆಯ ಹಂತದಲ್ಲಿ ಔಷಧವನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಬೇಕೆಂಬ ನಿಯಮ ಇಲ್ಲ. ಆದರೆ, ಶಸ್ತ್ರಚಿಕಿತ್ಸೆ ನಡೆಸಿದ ರೋಗಿಗಳಿಗೆ ಉಪಯೋಗಿಸಿದ ಔಷಧದಲ್ಲಿ (ಆಕ್ಯುಜೆಲ್‌ 2%) ಸೋಂಕು ಇದ್ದಿದ್ದು ಪ್ರಯೋಗಾಲಯಗಳ ವರದಿಗಳಿಂದ ಸಾಬೀತಾಗಿದೆ. ಹಾಗಾಗಿ ರೋಗಿಗಳ ಹಿತದೃಷ್ಟಿಯಿಂದಆಸ್ಪತ್ರೆಯ ಹಂತದಲ್ಲಿ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸ
ಲಾಗುತ್ತದೆ. ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯ (ಪಿಎಂಎಸ್‌ಎಸ್‌ವೈ) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಯಲ್ಲಿ ಔಷಧದ ಮಾದರಿಯನ್ನು ಪರೀಕ್ಷೆ ಮಾಡಿ, ವರದಿ ತರಿಸಿಕೊಳ್ಳುತ್ತೇವೆ’ ಎಂದು ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಸ್ತ್ರಚಿಕಿತ್ಸಾ ಕೇಂದ್ರವನ್ನು ಸೂಕ್ಷ್ಮಾಣು ಜೀವಿಮುಕ್ತಗೊಳಿಸಲು ಮೂರು ಬಾರಿ ಶುಚೀಕರಿಸಿ, ಮಾದರಿಯನ್ನು ಲ್ಯಾಬ್‌ಗಳಿಗೆ ಕಳುಹಿಸಲಾಗುತ್ತದೆ. ಪ್ರತಿ ಬಾರಿ ಶುಚೀಕರಿಸಲು 10 ದಿನ ಬೇಕಾಗುತ್ತದೆ. ಕಲ್ಚರ್‌ ಪ್ಲೇಟ್‌ ಸಹ ಪರೀಕ್ಷೆ ಮಾಡಬೇಕು.ಈ ಪ್ರಕ್ರಿಯೆಗಳು ನಡೆಯುತ್ತಿದೆ. ಖಾಸಗಿ ಪ್ರಯೋಗಾಲಯಗಳಿಂದ ವರದಿ ಬಂದ ಬಳಿಕ ಶಸ್ತ್ರಚಿಕಿತ್ಸೆ ಆರಂಭಿಸಲಾಗುತ್ತದೆ. ವಾರ್ಡ್‌ಗಳಿಗೆ ಸಹರಾಸಾಯನಿಕಗಳನ್ನು ಬಳಸಿ ಫಾಗಿಂಗ್ ಮಾಡಬೇಕು. ಒಮ್ಮೆ ಶಸ್ತ್ರಚಿಕಿತ್ಸೆ ಸ್ಥಗಿತಗೊಳಿಸಿದ ಬಳಿಕ ಈ ಪ್ರಕ್ರಿಯೆ ಪುನರಾರಂಭ ಮಾಡಲು ಕಡ್ಡಾಯವಾಗಿ ಪ್ರಯೋಗಾಲಯದ ವರದಿ ಪಡೆದುಕೊಳ್ಳಬೇಕಾಗುತ್ತದೆ’ ಎಂದು ಮಾಹಿತಿ ನೀಡಿದರು.

ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ಎಲ್ಲಾ ಕೊಠಡಿಗಳು ಸದ್ಯ ಖಾಲಿ ಇವೆ. ಹಾಗಾಗಿ ಇದೀಗ ನವೀಕರಣ ಕಾರ್ಯವೂ ಆರಂಭವಾಗಿದೆ. ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿರುವ ವ್ಯಕ್ತಿಯನ್ನು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಅಧೀನದಲ್ಲಿರುವ ಬೌರಿಂಗ್ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಬೌರಿಂಗ್ ಆಸ್ಪತ್ರೆಯು ಪ್ರತಿನಿತ್ಯ 15 ಶಸ್ತ್ರಚಿಕಿತ್ಸೆ ಮಾಡುವ ಸಾಮರ್ಥ್ಯ ಹೊಂದಿದೆ.

‘ಆರೋಪಿಗಳಂತೆ ನೋಡಿದರು’

‘ಜುಲೈ 9ರಂದು ನಡೆದ ಘಟನೆಯಿಂದ ವೈದ್ಯರು ಮಾನಸಿಕವಾಗಿ ಜರ್ಜರಿತರಾಗಿದ್ದಾರೆ. ಶಸ್ತ್ರಚಿಕಿತ್ಸೆಯಲ್ಲಿ ಯಾವುದೇ ಲೋಪ ಮಾಡದಿದ್ದರೂ ವೈದ್ಯರನ್ನು ಆರೋಪಿಗಳ ಹಾಗೆ ನೋಡಲಾಯಿತು. ಇದರಿಂದಾಗಿ ಬೇಸರಗೊಂಡ ವೈದ್ಯರು ವೃತ್ತಿಯಿಂದ ಹಿಂದೆ ಸರಿಯಲು ಮುಂದಾಗಿದ್ದರು. ಒಬ್ಬ ವೈದ್ಯರು ನಿಮ್ಹಾನ್ಸ್‌ನಲ್ಲಿ ಕೌನ್ಸೆಲಿಂಗ್‌ ಪಡೆದುಕೊಳ್ಳುತ್ತಿದ್ದಾರೆ’ ಎಂದು ಡಾ. ಸುಜಾತಾ ರಾಥೋಡ್‌ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.