ADVERTISEMENT

ಶಾಲೆ ಅಂಗಳಕ್ಕೆ ‘ಸಂಚಾರಿ ತಾರಾಲಯ’

ಮಕ್ಕಳಿಗೆ ವಿಜ್ಞಾನ ವಿಚಾರಗಳನ್ನು ಮನದಟ್ಟು ಮಾಡುವ ಉದ್ದೇಶದಿಂದ 3ಡಿ ಆಯಾಮಗಳ ಪ್ರಾತ್ಯಕ್ಷಿಕೆ

ಮನೋಹರ್ ಎಂ.
Published 20 ಅಕ್ಟೋಬರ್ 2019, 19:53 IST
Last Updated 20 ಅಕ್ಟೋಬರ್ 2019, 19:53 IST
ಸಂಚಾರಿ ತಾರಾಲಯದ ಒಳನೋಟ
ಸಂಚಾರಿ ತಾರಾಲಯದ ಒಳನೋಟ   

ಬೆಂಗಳೂರು: ಶೈಕ್ಷಣಿಕ ಪ್ರವಾಸಕ್ಕೆಂದು ಬೆಂಗಳೂರಿಗೆ ಬರುವ ವಿದ್ಯಾರ್ಥಿಗಳು ನೆಹರೂ ತಾರಾಲಯ ವೀಕ್ಷಿಸದೆ ಮರಳುವುದಿಲ್ಲ. ಇನ್ನುಮುಂದೆ ತಾರಾಲಯ ನೋಡುವ ಸಲುವಾಗಿ ವಿದ್ಯಾರ್ಥಿಗಳು ರಾಜಧಾನಿಗೆ ಬರಬೇಕಾಗಿಲ್ಲ. ‘ಸ್ಕೈಪಾರ್ಕ್‌ 360 ಡಿಗ್ರಿ ಸಂಚಾರಿ ತಾರಾಲಯ’ವನ್ನು ತಮ್ಮ ಶಾಲಾ ಅಂಗಳದಲ್ಲೇ ವೀಕ್ಷಿಸಬಹುದು.

ರಾಜ್ಯದ ಎಲ್ಲ ಸರ್ಕಾರಿ ಶಾಲಾ ಮಕ್ಕಳಿಗೆ ವಿಜ್ಞಾನದ ವಿಚಾರಗಳನ್ನು ಮನದಟ್ಟು ಮಾಡುವ ಉದ್ದೇಶದಿಂದ ಯುವ ಬೆಂಗಳೂರು ಟ್ರಸ್ಟ್‌ ಹಾಗೂ ಡೈರಿ ಡೇ ಸಂಸ್ಥೆಗಳು ಇದನ್ನು ಅಭಿವೃದ್ಧಿಪಡಿಸಿವೆ. ಈತಾರಾಲಯವನ್ನು ಸುಲಭವಾಗಿ ಎಲ್ಲಿಗಾದರೂ ಕೊಂಡೊಯ್ಯಬಹುದು. ವೀಕ್ಷಣೆಯ ಬಳಿಕ ತಾರಾಲಯವನ್ನು ಮಡಚಿ ಒಂದು ಬ್ಯಾಗ್‌ ಒಳಗೆ ತುಂಬಿಸಿ ಇನ್ನೊಂದು ಕಡೆಗೆ ಒಯ್ಯಬಹುದು.

‘ರಾಜ್ಯದಲ್ಲಿ ಸದ್ಯ ಬೆಂಗಳೂರು, ಮಂಗಳೂರು ಹಾಗೂ ಬಳ್ಳಾರಿಯಲ್ಲಿ ಮಾತ್ರ ತಾರಾಲಯಗಳಿವೆ. ಬಳ್ಳಾರಿ ತಾರಾಲಯ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ತಾರಾಲಯ ವೀಕ್ಷಿಸಲು ವಿದ್ಯಾರ್ಥಿಗಳು ₹300ರಿಂದ ₹400 ಹಣ ವ್ಯಯಿಸಿ ಬೆಂಗಳೂರಿಗೆ ಬರಬೇಕಾದ ಸ್ಥಿತಿ ಇದೆ. ಈ ಸಮಸ್ಯೆ ತಪ‍್ಪಿಸಲು ವಿದ್ಯಾರ್ಥಿಗಳ ಸನಿಹವೇ ತಲುಪುವಂತೆ ಈ ಸಂಚಾರಿ ತಾರಾಲಯವನ್ನು ರೂಪಿಸಿದ್ದೇವೆ’ ಎಂದು ಸಂಸ್ಥೆಯ ಸ್ಥಾಪಕ ಕಿರಣ್ ಸಾಗರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಬಾಹ್ಯಾಕಾಶದ ಬಗ್ಗೆ ಮಕ್ಕಳಿಗೆ ಪಾಠ ಕೇಳುವುದಕ್ಕಿಂತ ಅದನ್ನು ದೃಶ್ಯಗಳಲ್ಲಿ ತೋರಿಸಿದರೆ ಅವರ ಮನಸ್ಸಿಗೆ ನಾಟುತ್ತದೆ. ಹೀಗಾಗಿ ರಾಜ್ಯದ ಲ್ಲಿರುವ ಎಲ್ಲಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ತಾರಾಲಯದ ಮೂಲಕ ಬಾಹ್ಯಾಕಾಶ ವೀಕ್ಷಣೆಯ ಅವಕಾಶ ನೀಡುವ ಉದ್ದೇಶ ನಮ್ಮದು’ ಎಂದರು.

‘ಇದಕ್ಕಾಗಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ 31 ವಿಷಯಗಳ ಬಗ್ಗೆ ‘ಮೂರು ಆಯಾಮಗಳ ಪ್ರಾತ್ಯಕ್ಷಿಕೆ’ (3ಡಿ) ತಂತ್ರಜ್ಞಾನದ ಮೂಲಕ ಸಿದ್ಧಪಡಿಸಿದ್ದೇವೆ. ಇದು ನರ್ಸರಿಯಿಂದ ದ್ವಿತೀಯ ಪಿಯುಸಿವರೆಗಿನ ವಿಜ್ಞಾನ ಪಠ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ. ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ವಿದ್ಯಾರ್ಥಿಗಳ ಜೊತೆ ಮಾತನಾಡುವಂತೆ ಹಿನ್ನೆಲೆ ಧ್ವನಿ ಅಳವಡಿಸಲಾಗಿದೆ’ ಎಂದು ವಿವರಿಸಿದರು.

‘ತಾರಾಲಯವನ್ನು80 ಲಕ್ಷ ವಿದ್ಯಾರ್ಥಿಗಳಿಗೆ ತಲುಪಿಸುವ ಉದ್ದೇಶವಿದೆ. ಇದು ನೋಡಲು ಗುಮ್ಮಟ (ಡೋಮ್‌) ಆಕಾರದಲ್ಲಿದೆ. ಒಮ್ಮೆಗೆ 45 ವಿದ್ಯಾರ್ಥಿಗಳು ವೀಕ್ಷಣೆ ಮಾಡುವಷ್ಟು ಆಸನ ವ್ಯವಸ್ಥೆ ಇದೆ. ಇದು ನೀರು, ಹಾಗೂ ಬೆಂಕಿ ನಿರೋಧಕವಾಗಿದ್ದು, ₹14 ಲಕ್ಷ ಮೌಲ್ಯದ ಅಪರೂಪದ ‘360 ಡಿಗ್ರಿ ಪ್ರೊಜೆಕ್ಟರ್‌’ ಮೂಲಕ ಕಾರ್ಯನಿರ್ವಹಿಸಲಿದೆ’ ಎಂದರು.

ಉದ್ಘಾಟನೆ ಇಂದು

ಈ ಸಂಚಾರಿ ತಾರಾಲಯದ ಉದ್ಘಾಟನಾ ಕಾರ್ಯಕ್ರಮ ಸೋಮವಾರ (ಅ.21) ಸಂಜೆ 4 ಗಂಟೆಗೆ ರಾಜಾಜಿನಗರದಲ್ಲಿರುವ ಪಿವಿಪಿ ಪ್ರೌಢಶಾಲೆಯ ಗಾಂಧಿಭವನದಲ್ಲಿ ನಡೆಯಲಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್‌,ನಟ ರಮೇಶ್‌ ಅರವಿಂದ್, ಡೈರಿ ಡೇ ಸಹ ಸಂಸ್ಥಾಪಕರಾದ ಎಂ.ಎನ್‌.ಜಗನ್ನಾಥ್‌, ಎ.ಬಾಲರಾಜು ಭಾಗವಹಿಸಲಿದ್ದಾರೆ. ಈ ಸಂಚಾರಿ ತಾರಾಲಯವನ್ನು ಸರ್ಕಾರಿ ಶಾಲೆಗೆ ಉಚಿತವಾಗಿ ತರಿಸಿಕೊಳ್ಳಬಹುದು. ಸಂಪರ್ಕ: 8660821611

‘ವಿಶೇಷತೆಗಳು

* ಗುಮ್ಮಟದ ಆಕಾರದಲ್ಲಿರುವ ತಾರಾಲಯ

*₹40 ಲಕ್ಷ ವೆಚ್ಚದಲ್ಲಿ ನಿರ್ಮಾಣ

* 40ರಿಂದ 45 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ

* ‘360 ಡಿಗ್ರಿ ಪ್ರೊಜೆಕ್ಟರ್‌’ ಮೂಲಕ ಕಾರ್ಯನಿರ್ವಹಿಸಲಿದೆ

* ಕನ್ನಡ, ಇಂಗ್ಲಿಷ್‌ ಭಾಷೆಗಳಲ್ಲಿ ಬಾಹ್ಯಾಕಾಶ ವಿಷಯಗಳ ಪ್ರಸ್ತುತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.