ADVERTISEMENT

ಕದ್ದ ಸ್ಕೂಟರ್‌ ಬಳಸಿ ಮೊಬೈಲ್‌ ಕಳ್ಳತನ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 19:33 IST
Last Updated 23 ಡಿಸೆಂಬರ್ 2021, 19:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕದ್ದ ಸ್ಕೂಟರ್‌ನಲ್ಲಿ ನಗರದ ವಿವಿಧೆಡೆ ಸುತ್ತಾಡಿ ರಸ್ತೆಯಲ್ಲಿ ಏಕಾಂಗಿಯಾಗಿ ಓಡಾಡುವವರನ್ನು ಗುರಿಯಾಗಿಟ್ಟುಕೊಂಡು ಮೊಬೈಲ್‌ ಕಳ್ಳತನ ಮಾಡುತ್ತಿದ್ದ ಮೊಹಮ್ಮದ್‌ ಯಾಸಿನ್‌ (22) ಎಂಬಾತನನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಆರೋಪಿಯಿಂದ ಸ್ಕೂಟರ್‌ ಹಾಗೂ ಎರಡು ಮೊಬೈಲ್‌ಗಳು ಸೇರಿ ₹1.26 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜ‍ಪ್ತಿ ಮಾಡಲಾಗಿದೆ. ಜೆ.ಜೆ.ನಗರ ನಿವಾಸಿಯಾಗಿರುವ ಆರೋಪಿ, ತನ್ನ ಸ್ನೇಹಿತನ ಜೊತೆಗೂಡಿ ಹೈಗ್ರೌಂಡ್ಸ್‌, ಶೇಷಾದ್ರಿಪುರ, ಮಲ್ಲೇಶ್ವರ, ಉಪ್ಪಾರಪೇಟೆ ಸೇರಿದಂತೆ ವಿವಿಧೆಡೆ ಮೊಬೈಲ್‌ ಕಳ್ಳತನ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ. ಈತನ ಕೃತ್ಯಕ್ಕೆ ಸಹಕರಿಸಿದ್ದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘‌ಇದೇ 17ರಂದು ರಾತ್ರಿ 9.30ರ ಸುಮಾರಿಗೆ ವ್ಯಕ್ತಿಯೊಬ್ಬರು ಠಾಣೆ ವ್ಯಾಪ್ತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿಗಳು, ಮಾತನಾಡಿಸುವ ನೆಪದಲ್ಲಿ ವ್ಯಕ್ತಿಯ ಹತ್ತಿರ ಹೋಗಿ ಅವರ ಬಳಿ ಇದ್ದ ಮೊಬೈಲ್‌ ಕದ್ದು ಪರಾರಿಯಾಗಿದ್ದರು. ಈ ಸಂಬಂಧ ವ್ಯಕ್ತಿಯು ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಸಿಬ್ಬಂದಿ, ಆರೋಪಿಯನ್ನು ಬಂಧಿಸಿ ವಿಚಾರಿಸಿದಾಗ ಆತ ಕಳ್ಳತನ ಮಾಡಿರುವ ವಿಷಯ ಒಪ್ಪಿಕೊಂಡಿದ್ದ. ತನ್ನ ಸ್ನೇಹಿತನ ಜೊತೆಗೂಡಿ ಬ್ಯಾಟರಾಯನಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸ್ಕೂಟರ್‌ ಕದ್ದಿರುವ ವಿಚಾರವನ್ನೂ ಬಾಯ್ಬಿಟ್ಟಿದ್ದ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.