ADVERTISEMENT

ಬೆಂಗಳೂರಿನಲ್ಲಿ ಇಂದು Mock Drill ಅಭ್ಯಾಸ: ಎಲ್ಲೆಲ್ಲಿ?

​ಪ್ರಜಾವಾಣಿ ವಾರ್ತೆ
Published 6 ಮೇ 2025, 21:02 IST
Last Updated 6 ಮೇ 2025, 21:02 IST
   

ಬೆಂಗಳೂರು: ಯಾವುದೇ ರೀತಿಯ ವಾಯುದಾಳಿ ನಡೆದರೆ ನಾಗರಿಕರು ಸ್ವರಕ್ಷಣೆಗಾಗಿ ಅನುಸರಿಸಬೇಕಾದ ಕ್ರಮಗಳ ಕುರಿತು ತಾಲೀಮು ನಡೆಸಲು ರಾಜ್ಯದಲ್ಲೂ ಸಿದ್ಧತೆಗಳು ನಡೆದಿವೆ.

ಕೇಂದ್ರ ಗೃಹ ಇಲಾಖೆ ಸೂಚನೆ ಮೇರೆಗೆ ಸ್ವರಕ್ಷಣೆಯ ತಾಲೀಮು ನಡೆಸಲು ಬೆಂಗಳೂರು, ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಲ್ಲಾಪುರ ಹಾಗೂ ರಾಯಚೂರಿನ ಶಕ್ತಿನಗರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.  

ರಾಜಧಾನಿ ಬೆಂಗಳೂರಿನಲ್ಲಿ ರಕ್ಷಣಾ ಇಲಾಖೆಯ ಹಲವು ಸಂಸ್ಥೆಗಳು, ಇಸ್ರೊ, ಡಿಆರ್‌ಡಿಒ, ಭಾರತೀಯ ವಿಜ್ಞಾನ ಸಂಸ್ಥೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಐ.ಟಿ–ಬಿ.ಟಿ ಕಂಪನಿಗಳಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೈಗಾ ಅಣುಶಕ್ತಿ ಸ್ಥಾವರ, ಸೀಬರ್ಡ್ ನೌಕಾ ನೆಲೆ ಹಾಗೂ ರಾಯಚೂರಿನಲ್ಲಿ ಶಾಖೋತ್ಪನ್ನ ವಿದ್ಯುತ್‌ ಉತ್ಪಾದನಾ ಕೇಂದ್ರಗಳಿದ್ದು, ಹೆಚ್ಚಿನ ನಿಗಾ ಇಡುವಂತೆ ಕೇಂದ್ರದಿಂದ ಸೂಚನೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಬೆಂಗಳೂರಿನ 35 ಸ್ಥಳಗಳಲ್ಲಿ ಸೈರನ್‌ ವ್ಯವಸ್ಥೆಯಿದ್ದು, ಈ ‍ಪೈಕಿ ಮೂರು ತಾಂತ್ರಿಕ ಕಾರಣದಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಬುಧವಾರ ಮಧ್ಯಾಹ್ನ 3.30ಕ್ಕೆ ಹಲಸೂರಿನ ನಾಗರಿಕ ರಕ್ಷಣಾ ಕೇಂದ್ರದಲ್ಲಿ ಮಾತ್ರ ಸೈರನ್‌ ಮೊಳಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಉಳಿದ 31 ಸ್ಥಳಗಳಲ್ಲಿ ಹಂತಹಂತವಾಗಿ ತಾಲೀಮು ನಡೆಸಲಾಗುತ್ತದೆ.

ಉತ್ತರ ಕನ್ನಡ, ರಾಯಚೂರು, ಮೈಸೂರು, ಮಂಡ್ಯದಲ್ಲೂ ಸ್ವರಕ್ಷಣೆಯ ತಾಲೀಮು ನಡೆಸುವ ದಿನಾಂಕವನ್ನು ಮುಂದಿನ ವಾರ ನಿರ್ಧರಿಸಲಾಗುವುದು ಎಂದು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್‌ ತಿಳಿಸಿದ್ದಾರೆ. 

ವಾಯುದಾಳಿಯಾದ ಸಂದರ್ಭದಲ್ಲಿ ನಾಗರಿಕರು ಯಾವ ರೀತಿ ವರ್ತಿಸಬೇಕು ಎಂಬುದನ್ನು ತಾಲೀಮು ವೇಳೆ ತಿಳಿಸಲಾಗುತ್ತದೆ. ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ, ಗಾಯಾಳುಗಳ ಸ್ಥಳಾಂತರ, ತುರ್ತು ಚಿಕಿತ್ಸೆಗೆ ಆಸ್ಪತ್ರೆಗಳ ಸಜ್ಜುಗೊಳಿಸುವಿಕೆಯ ಕುರಿತು ಅಣಕು ಕಾರ್ಯಾಚರಣೆ ನಡೆಯಲಿದೆ.   

ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆ ಸಿಬ್ಬಂದಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌) ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ಇರುವ ಅಗ್ನಿಶಾಮಕ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಸಿದ್ಧತೆ ಮಾಡಿಕೊಳ್ಳಲಾಯಿತು.

ಮೂರು ಕಡೆ ತಾಂತ್ರಿಕ ದೋಷ: ಹುಳಿಮಾವು, ಮಹದೇವಪುರ, ಮೆಯೋ ಹಾಲ್‌ ಅಗ್ನಿಶಾಮಕ ಠಾಣೆಯಲ್ಲಿರುವ ಸೈರನ್‌ಗಳು ತಾಂತ್ರಿಕ ದೋಷದಿಂದ ಕೆಲಸ ಮಾಡುತ್ತಿಲ್ಲ. ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ದುರಸ್ತಿಯಾದರೆ ಅಲ್ಲಿಯೂ ಸೈರನ್‌ ಮೊಳಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸಂಭವನೀಯ ದಾಳಿಗಳ ವೇಳೆ ಸ್ವಯಂ ರಕ್ಷಣೆ ಮಾಡಿಕೊಳ್ಳುವುದು ಹೇಗೆಂದು ನಾಗರಿಕರಿಗೆ ತಿಳಿಸಲಾಗುವುದು. ತಾಲೀಮು ವೇಳೆ ವಿದ್ಯಾರ್ಥಿಗಳಿಗೆ ಅಗತ್ಯವಾದ ರಕ್ಷಣಾ ತಂತ್ರಗಳ ಕುರಿತು ತರಬೇತಿ ನೀಡಲಾಗುವುದು. ಬೆಂಗಳೂರಿನಲ್ಲಿ ಒಂದು ವಾರ ಈ ತಾಲೀಮು ನಡೆಯಲಿದೆ. ಮೂರು ಕಿ.ಮೀ ವ್ಯಾಪ್ತಿಯವರೆಗೆ ಸೈರನ್‌ ಕೇಳಿಸಲಿದೆ. ಕೇಂದ್ರದ ಅಧಿಕಾರಿಗಳ ಜತೆಗೆ ಚರ್ಚಿಸಲಾಗಿದೆ. ‘ಆಪರೇಷನ್‌ ಅಭ್ಯಾಸ್’ ಅನ್ನು ಯಶಸ್ವಿಗೊಳಿಸಲಾಗುವುದು’ ಎಂದು ಪ್ರಶಾಂತ್ ಕುಮಾರ್ ಠಾಕೂರ್‌ ತಿಳಿಸಿದ್ದಾರೆ. 

ಸೈರನ್‌ ಇರುವ ಸ್ಥಳಗಳು 

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌
ಸಿಕ್ಯುಎಎಲ್‌
ಇಎಸ್ಐ ಆಸ್ಪತ್ರೆ, ರಾಜಾಜಿನಗರ
ಎನ್‌ಎಎಲ್‌
ಬೆಂಗಳೂರು ಡೇರಿ
ಕೆನರಾ ಬ್ಯಾಂಕ್‌, ಪುರಭವನ ವೃತ್ತ
ಎಸ್‌ಆರ್‌ಎಸ್, ಪೀಣ್ಯ
ವಿ.ವಿ ಟವರ್‌, ಅಗ್ನಿಶಾಮಕ ಠಾಣೆ
ಜ್ಞಾನಭಾರತಿ, ಅಗ್ನಿಶಾಮಕ ಠಾಣೆ (ನಾಗರಬಾವಿ)
ಥಣಿಸಂದ್ರ ಅಗ್ನಿಶಾಮಕ ಠಾಣೆ, ಹೆಬ್ಬಾಳ
ಬಾಣಸವಾಡಿ, ಅಗ್ನಿಶಾಮಕ ಠಾಣೆ
ಯಶವಂತಪುರ ಅಗ್ನಿಶಾಮಕ ಠಾಣೆ
ಬನಶಂಕರಿ ಅಗ್ನಿಶಾಮಕ ಠಾಣೆ
ರಾಜಾಜಿನಗರ ಅಗ್ನಿಶಾಮಕ ಠಾಣೆ
ಚಾಮರಾಜಪೇಟೆ ಅಗ್ನಿಶಾಮಕ ಠಾಣೆ
ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆ
ಹಲಸೂರು ಗೇಟ್‌ ಪೊಲೀಸ್‌ ಠಾಣೆ
ಹಲಸೂರು ಪೊಲೀಸ್ ಠಾಣೆ
ಉಪ್ಪಾರಪೇಟೆ ಪೊಲೀಸ್ ಠಾಣೆ
ರಾಜರಾಜೇಶ್ವರಿ ಪೊಲೀಸ್‌ ಠಾಣೆ
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
ಕೆಆರ್‌ ಮಾರುಕಟ್ಟೆ ಪೊಲೀಸ್‌ ಠಾಣೆ
ವಯಾಲಿಕಾವಲ್‌ ಪೊಲೀಸ್ ಠಾಣೆ
ಹಲಸೂರು ಗೃಹರಕ್ಷಕ ದಳ, ಕೇಂದ್ರ ಕಚೇರಿ
ಬೆಂಗಳೂರು ಗ್ರಾಮಾಂತರ ಗೃಹರಕ್ಷಕ ದಳ ಕಚೇರಿ
ಬಾಗಲೂರು ಅಗ್ನಿಶಾಮಕ ದಳ ಕಚೇರಿ(ಯಲಹಂಕ)
ಪೀಣ್ಯ ಅಗ್ನಿಶಾಮಕ ಠಾಣೆ
ಅಂಜನಾಪುರ ಠಾಣೆ
ಐಟಿಪಿಎಲ್‌ ಅಗ್ನಿಶಾಮಕ ಠಾಣೆ (ವೈಟ್‌ಫೀಲ್ಡ್‌)
ಸರ್ಜಾಪುರ ಅಗ್ನಿಶಾಮಕ ಠಾಣೆ
ಎಲೆಕ್ಟ್ರಾನಿಕ್ ಅಗ್ನಿಶಾಮಕ ಠಾಣೆ
ಡೇರಿ ಸರ್ಕಲ್‌ ಅಗ್ನಿಶಾಮಕ ಠಾಣೆ(ಜಯನಗರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.