ADVERTISEMENT

₹6.50 ಲಕ್ಷ ಸಾಲ ಪಡೆದು ವಂಚಿಸಿದ ಆರೋಪ: ಕಿರುತೆರೆ ನಟಿ ವಿಸ್ಮಯಾ ವಿರುದ್ಧ FIR

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 11:38 IST
Last Updated 6 ಮಾರ್ಚ್ 2025, 11:38 IST
   

ಬೆಂಗಳೂರು: ಹಣ ಪಡೆದು ವಂಚಿಸಿದ್ದ ಆರೋಪದ ಅಡಿ ಕಿರುತೆರೆಯ ನಟಿ ವಿಸ್ಮಯಾಗೌಡ(34) ಅವರ ವಿರುದ್ಧ ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.‌

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಕ್ತಿ ಗಣಪತಿ ನಗರದ ನಿವಾಸಿ ಹಿಮಾನ್ವಿ ಎಂಬುವವರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ವಿಸ್ಮಯಾ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ 24ನೇ ಎಸಿಎಂಎಂ ನ್ಯಾಯಾಲಯವು ನಿರ್ದೇಶನ ನೀಡಿದ ಬೆನ್ನಲ್ಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ.

‘2019ರಲ್ಲಿ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಂನಲ್ಲಿ ವಿಸ್ಮಯಾ ಪರಿಚಯವಾಗಿದ್ದರು. ತಾನು ಸಿನಿಮಾ ನಿರ್ದೇಶನ ಮಾಡುತ್ತಿದ್ದೇನೆ. ಅಲ್ಲದೇ, ಇನ್‌ಸ್ಟಾಗ್ರಾಂನಲ್ಲಿ ಲೈಫ್‌ ಕೋಚರ್‌ ಆಗಿರುವುದಾಗಿಯೂ ಹೇಳಿಕೊಂಡಿದ್ದರು. ವಿಸ್ಮಯಾ ಅವರು ನಮ್ಮ ಕ್ಲಿನಿಕ್‌ಗೂ ಭೇಟಿ ನೀಡಿದ್ದರು. 2024ರ ಫೆಬ್ರುವರಿಯಲ್ಲಿ ಮನೆಗೂ ಭೇಟಿ ನೀಡಿದ್ದರು. ಆರ್ಥಿಕ ಸಮಸ್ಯೆಯಿದ್ದು, ಹಣ ನೀಡುವಂತೆ ಕೇಳಿಕೊಂಡಿದ್ದರು’ ಎಂದು ಹಿಮಾನ್ವಿ ನೀಡಿರುವ ದೂರು ಆಧರಿಸಿ ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ತಾಯಿಯ ಬ್ಯಾಂಕ್‌ ಖಾತೆಯಿಂದ ₹5 ಲಕ್ಷ, ನನ್ನ ಉಳಿತಾಯ ಖಾತೆಯಿಂದ ₹1.50 ಲಕ್ಷ ಸೇರಿದಂತೆ ಒಟ್ಟು ₹6.50 ಲಕ್ಷ ನೀಡಿದ್ದೆ. ಇದಕ್ಕೆ ಪ್ರತಿಯಾಗಿ ಮುಂದಿನ ದಿನಾಂಕ ನಮೂದಿಸಿ ವಿಸ್ಮಯಾ ಅವರು ಚೆಕ್‌ ನೀಡಿದ್ದರು. ಹಣ ವಾಪಸ್‌ ನೀಡುವಂತೆ ಕೇಳಿದಾಗ ಸಬೂಬು ಹೇಳಿದ್ದಾರೆ. ಅವರು ನೀಡಿದ್ದ ಚೆಕ್‌ ಅನ್ನು ಬ್ಯಾಂಕ್‌ಗೆ ಹಾಕಿದಾಗ ಸಹಿ ವ್ಯತ್ಯಾಸವಿದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದರು. ಆರೋಪಿಯು ಮೋಸ ಮಾಡುವ ಉದ್ದೇಶದಿಂದ ಸರಿಯಾದ ಮಾದರಿಯಲ್ಲಿ ಸಹಿ ಹಾಕಿರಲಿಲ್ಲ. ಅಲ್ಲದೇ, ಹಣ ವಾಪಸ್‌ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ಹಿಮಾನ್ವಿ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.