ADVERTISEMENT

ಕೆಂಗೇರಿ: ಅಂಬೇಡ್ಕರ್‌ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಬುದ್ಧ ಮೂರ್ತಿ ಅನಾವರಣ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 16:10 IST
Last Updated 14 ಜನವರಿ 2026, 16:10 IST
ಎಐಟಿ ಕಾಲೇಜು ಆವರಣದಲ್ಲಿ ಬುದ್ಧ ಮೂರ್ತಿ ಅನಾವರಣಗೊಳಿಸಲಾಯಿತು. ಎಸ್.ಮರಿಸ್ವಾಮಿ, ಡಾ.ಎಂ.ಮಹದೇವ್‌,  ಎ.ಆರ್.ಕೃಷ್ಣಮೂರ್ತಿ, ಶಿವಮಲ್ಲು ಉಪಸ್ಥಿತರಿದ್ದರು
ಎಐಟಿ ಕಾಲೇಜು ಆವರಣದಲ್ಲಿ ಬುದ್ಧ ಮೂರ್ತಿ ಅನಾವರಣಗೊಳಿಸಲಾಯಿತು. ಎಸ್.ಮರಿಸ್ವಾಮಿ, ಡಾ.ಎಂ.ಮಹದೇವ್‌,  ಎ.ಆರ್.ಕೃಷ್ಣಮೂರ್ತಿ, ಶಿವಮಲ್ಲು ಉಪಸ್ಥಿತರಿದ್ದರು   

ಕೆಂಗೇರಿ: ಡಾ. ಅಂಬೇಡ್ಕರ್‌ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಬುಧವಾರ ಗೌತಮ ಬುದ್ಧನ ಏಕಶಿಲಾ ಮೂರ್ತಿಯನ್ನು ಅನಾವರಣಗೊಳಿಸಲಾಯಿತು.

ಬ್ರಿಟಿಷ್ ಮೂಲದ ಬೌದ್ಧ ಬಿಕ್ಕು ಅಜಾನ್ ಜಯಸಾರೋ ಮಹಾತೇರ ಅವರು ಬುದ್ಧ ಬೋಧನೆಗಳ ಪಠಣದೊಂದಿಗೆ ಪ್ರತಿಮೆಯನ್ನು ಅನಾವರಣಗೊಳಿಸಿದರು. ನೂರಾರು ಬೌದ್ಧ ಬಿಕ್ಕುಗಳು ಸಂಭ್ರಮಕ್ಕೆ ಸಾಕ್ಷಿಯಾದರು.

ಅಜಾನ್ ಜಯಸಾರೋ ಮಹಾತೇರ ಮಾತನಾಡಿ, ‘ಸ್ಥಾಪಿತ ಸಂಪ್ರದಾಯ ಹಾಗೂ ಆಚರಣೆಗಳನ್ನು ಪಾಲನೆ ಮಾಡುವ ಧರ್ಮಗಳ ನಡುವೆ ನೈಜ ಕರ್ಮಸಿದ್ದಾಂತ ಪ್ರತಿಪಾದನೆಗೆ ಒತ್ತು ನೀಡಿದ ಬೌದ್ಧ ಧರ್ಮ, ಜಾಗತಿಕ ಮತವಾಗಿ ರೂಪುಗೊಂಡಿದೆ’ ಎಂದು ಹೇಳಿದರು.

ADVERTISEMENT

‘ನರಮೇಧ ನಡೆಸಿ, ಹಿಂಸೆ, ಹೇರಿಕೆಯಿಂದ ಮತವನ್ನು ಸದೃಢಗೊಳಿಸಲು, ವಿಸ್ತರಿಸಲು ಸಾಧ್ಯವಿಲ್ಲ. ಅಂತಹ ನಡೆ ದೀರ್ಘಕಾಲದವರೆಗೆ ಫಲ ನೀಡುವುದಿಲ್ಲ. ಶಾಂತಿ ಹಾಗೂ ಮಾನವೀಯ ಮೌಲ್ಯ ಗುಣಗಳು ಎಲ್ಲಾ ವರ್ಗದವರನ್ನು ಆಕರ್ಷಸುತ್ತವೆ. ಸತ್ಕರ್ಮಗಳು ಸತ್ಫಲಗಳನ್ನೇ ನೀಡುತ್ತವೆ. ನಮ್ಮ ಭವಿಷ್ಯಕ್ಕೆ ನಾವೇ ಜವಾಬ್ದಾರರು’ ಎಂದು ತಿಳಿಸಿದರು.

‘ಬೌದ್ಧ ಧರ್ಮವು ದೈವದ ಕಲ್ಪನೆಯನ್ನು ಪುಷ್ಟೀಕರಿಸುವುದಿಲ್ಲ. ದೇವರ ಬಳಿಯ ಕೋರಿಕೆ ಹಾಗೂ ಬೇಡಿಕೆ ತಿರಸ್ಕಾರವಾದರೆ ನೋವು ಸೃಷ್ಟಿಯಾಗಿ ದೇಹ, ಮನಸ್ಸು ಬಾಧಿತವಾಗುವ ಸಂಭವವಿದೆ. ನಿರೀಕ್ಷೆರಹಿತ ಕೊಡುಗೆಗಳು ನಮ್ಮ ಸಮಾಜ ಹಾಗೂ ನೆರೆ ಹೊರೆಯವರಲ್ಲಿ ಸಹಿಷ್ಣುತೆ, ಸಹ ಬಾಳ್ವೆಯನ್ನು ತರುತ್ತವೆ’ ಎಂದರು.

ಪಿವಿಪಿ ಟ್ರಸ್ಟ್‌ ಕಾರ್ಯದರ್ಶಿ ಎಂ. ಮಹದೇವ್‌ ಮಾತನಾಡಿ, ಐದು ವರ್ಷಗಳ ಸತತ ಪರಿಶ್ರಮದ ಫಲವಾಗಿ ಬುದ್ಧ ಪ್ರತಿಮೆ ಅನಾವರಣಗೊಂಡಿದೆ ಎಂದರು.

ಪ್ರತಿಮೆ ರಚನೆಯ ರೂವಾರಿಗಳಾದ ರಾಮು ಎಸ್. ನಾಯಕ್ ಹಾಗೂ ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು.

ಬೌದ್ಧ ಬಿಕ್ಕು  ಕಸ್ಸಪ ಮಹಾತೇರ, ಪಿವಿಪಿ ಟ್ರಸ್ಟ್‌ ಅಧ್ಯಕ್ಷ ಎಸ್.ಮರಿಸ್ವಾಮಿ, ಖಜಾಂಚಿ ಮತ್ತು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಟ್ರಸ್ಟಿ ಶಿವಮಲ್ಲು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.