ADVERTISEMENT

ರಾಜ್ಯಗಳ ವಿಭಜನೆಯಿಂದ ಪ್ರಗತಿ: ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2025, 21:22 IST
Last Updated 12 ಫೆಬ್ರುವರಿ 2025, 21:22 IST
<div class="paragraphs"><p>ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರನ್ನು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಸ್ವಾಗತಿಸಿದರು</p></div>

ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರನ್ನು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಸ್ವಾಗತಿಸಿದರು

   

ಬೆಂಗಳೂರು: ‘ಆರ್ಥಿಕ ಪ್ರಗತಿ ಸಾಧಿಸಲು ರಾಜ್ಯಗಳ ವಿಭಜನೆ ಮಾಡಬೇಕು. ಸಣ್ಣ ಸಣ್ಣ ರಾಜ್ಯಗಳ ರಚನೆಯಿಂದ ತ್ವರಿತ ಅಭಿವೃದ್ಧಿ ಸಾಧ್ಯ’ ಎಂದು ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅಭಿಪ್ರಾಯಪಟ್ಟರು.

ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ‘ಇನ್ವೆಸ್ಟ್‌ ಕರ್ನಾಟಕ’ ಸಮಾವೇಶದ ಎರಡನೇ ದಿನವಾದ ಬುಧವಾರ ಆಯೋಜಿಸಿದ್ದ ‘ಭಾರತದ ಆರ್ಥಿಕ ಅಭಿವೃದ್ಧಿ ಮತ್ತು ಜಾಗತಿಕ ಸವಾಲುಗಳು’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ADVERTISEMENT

ರಾಜ್ಯಗಳು ಭೌಗೋಳಿಕವಾಗಿ ಚಿಕ್ಕದಿದ್ದರೆ ಪರಿಣಾಮಕಾರಿ ಆಡಳಿತ ಜಾರಿಗೆ ತರಬಹುದು. ರಾಜ್ಯಗಳ ರಚನೆಯಿಂದ ಜಲ ಬಿಕ್ಕಟ್ಟು ಸೇರಿ ಹಲವು ಸಮಸ್ಯೆ ಸೃಷ್ಟಿಯಾಗಬಹುದು. ಆದರೆ, ಬೇರೆ ದೇಶಗಳು ನೀರಿನ ಹಂಚಿಕೆಗೆ ಕೆಲ ಮಾರ್ಗಗಳನ್ನು ಅನುಸರಿಸುತ್ತಿವೆ. ಅದೇ ರೀತಿ ಕೇಂದ್ರ ಸರ್ಕಾರವು ದೇಶದಲ್ಲಿ ಯಾವ ರೀತಿ ನೀರು ಹಂಚಿಕೆ ಮಾಡಬೇಕು ಎನ್ನುವುದನ್ನು ನಿರ್ಧರಿಸಬೇಕು ಎಂದು ಸಲಹೆ ನೀಡಿದರು.

ಅಭಿವೃದ್ಧಿಯ ಹಂಚಿಕೆ ಮತ್ತು ದಕ್ಷ ಆಡಳಿತದ ದೃಷ್ಟಿಯಿಂದ ದೊಡ್ಡ ರಾಜ್ಯಗಳ ವಿಭಜನೆ ಅತ್ಯಗತ್ಯ. ರಾಜ್ಯಗಳಲ್ಲಿ ಒಂದೇ ನಗರಕ್ಕೆ ಅಭಿವೃದ್ಧಿ ಕೇಂದ್ರೀಕರಿಸುವುದರಿಂದ ಹಲವು ಸಮಸ್ಯೆಗಳು ತಲೆದೋರಿವೆ ಎಂದು ಅಭಿಪ್ರಾಯಪಟ್ಟರು.

1991ರಿಂದ ದೇಶದಲ್ಲಿ ಸುಧಾರಣೆ ಪರ್ವ ಶುರುವಾಯಿತು. ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರ ನೇತೃತ್ವದಲ್ಲಿ ಮನಮೋಹನ್‌ಸಿಂಗ್‌ ಅವರು ದೇಶದಲ್ಲಿ ಉಂಟಾಗಿದ್ದ ಬಿಕ್ಕಟ್ಟನ್ನು ಬಗೆಹರಿಸುವ ಜೊತೆಗೆ ಸುಧಾರಣೆ ಕ್ರಮಗಳನ್ನು ಕೈಗೊಂಡರು. ಅಂದು ಸಮನ್ವಯ ಇತ್ತು. ಆದರೆ, ಇಂದು ಶೇ 8ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಲು ಮತ್ತಷ್ಟು ಆರ್ಥಿಕ ಸುಧಾರಣೆಗಳ ಅಗತ್ಯವಿದೆ ಎಂದರು.

ಅರ್ಥಶಾಸ್ತ್ರಜ್ಞ ಮತ್ತು ಲೇಖಕ ಸಲ್ಮಾನ್‌ ಸೋಝ್ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.