ADVERTISEMENT

ಹೆಚ್ಚು ಅಪಘಾತ; 46 ಸ್ಥಳಗಳ ಗುರುತು

25 ಸ್ಥಳಗಳಲ್ಲಿ ವಿಪರೀತ ದಟ್ಟಣೆ ನಿಯಂತ್ರಣಕ್ಕೆ ಕ್ರಮ: ಪಿ.ಹರಿಶೇಖರನ್

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 20:12 IST
Last Updated 19 ಜೂನ್ 2019, 20:12 IST
ಪಿ.ಹರಿಶೇಖರನ್
ಪಿ.ಹರಿಶೇಖರನ್   

ಬೆಂಗಳೂರು: ನಗರದ ಹಲವೆಡೆ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿದ್ದು, ಸಾವು– ನೋವುಗಳು ಉಂಟಾಗುತ್ತಿವೆ. ಇಂಥ ಅಪಘಾತಗಳಿಗೆ ಕಡಿವಾಣ ಹಾಕಲೆಂದು ಸಂಚಾರ ಪೊಲೀಸರು, ಅತೀ ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಿದ್ದಾರೆ.

‘ಹೊರವರ್ತುಲ ರಸ್ತೆ, ರಾಷ್ಟ್ರೀಯ ಹೆದ್ದಾರಿ ಹಾಗೂ ಅದರ ಅಕ್ಕ– ಪಕ್ಕದಲ್ಲಿರುವ ರಸ್ತೆಗಳಲ್ಲಿ ನಿತ್ಯವೂ ಲಕ್ಷಾಂತರ ವಾಹನಗಳು ಸಂಚರಿಸುತ್ತಿವೆ.

ಅತೀ ವೇಗದ ಚಾಲನೆ ಹಾಗೂ ಸಂಚಾರ ನಿಯಮ ಪಾಲಿಸದಿದ್ದರಿಂದ ಅಪಘಾತಗಳು ಹೆಚ್ಚಾಗುತ್ತಿವೆ’ ಎಂದು ಸಂಚಾರ ವಿಭಾಗದ ಪೊಲೀಸ್ ಕಮಿಷನರ್ ಪಿ.ಹರಿಶೇಖರನ್ ತಿಳಿಸಿದರು.

ADVERTISEMENT

‘ಠಾಣೆ ಮಟ್ಟದ ಅಧಿಕಾರಿಗಳು ಸಮೀಕ್ಷೆ ನಡೆಸಿ 46 ಬ್ಲಾಕ್‌ ಸ್ಪಾಟ್‌ಗಳನ್ನು (ಅತೀ ಹೆಚ್ಚು ಅಪಘಾತ ಸಂಭವಿಸುವ ಸ್ಥಳ) ಗುರುತಿಸಿದ್ದಾರೆ.

ಬಿಬಿಎಂಪಿ ಅಧಿಕಾರಿಗಳ ಜೊತೆಯಲ್ಲಿ ಚರ್ಚಿಸಿ ಅವರ ಅನುದಾನದಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಹೇಳಿದರು.‘ಅಪಘಾತ ಸ್ಥಳಗಳಲ್ಲಿ ಸೂಚನಾ ಫಲಕ ಹಾಗೂ ಸಿಗ್ನಲ್‌ಗಳನ್ನು ಅಳವಡಿಸಬೇಕು. ಕೆಲವೆಡೆ ರಸ್ತೆ ವಿಸ್ತರಣೆ ಮಾಡಬೇಕು’ ಎಂದರು.

25 ಸ್ಥಳಗಳಲ್ಲಿ ವಿಪರೀತ ದಟ್ಟಣೆ

ಟಿನ್‌ ಫ್ಯಾಕ್ಟರಿ ಸೇರಿದಂತೆ ನಗರದ 25 ಸ್ಥಳಗಳಲ್ಲಿ ವಿಪರೀತ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಅದರ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ಸಿದ್ಧಪಡಿಸಿ ಬಿಬಿಎಂಪಿಗೆ ನೀಡಲಾಗಿದೆ.

ಬಿಬಿಎಂಪಿ ಆಯುಕ್ತರನ್ನೇ ಸ್ಥಳಕ್ಕೆ ಕರೆದೊಯ್ದು ಪರಿಸ್ಥಿತಿ ಬಗ್ಗೆ ವಿವರಿಸಲಿದ್ದೇನೆ’ ಎಂದು ಹರಿಶೇಖರನ್ ಹೇಳಿದರು.

ಪ್ರಮುಖ ಬ್ಲಾಕ್ ಸ್ಪಾಟ್‌ಗಳು

ಹಳೇ ವಿಮಾನ ನಿಲ್ದಾಣ ರಸ್ತೆ ಕಮಾಂಡ್ ಆಸ್ಪತ್ರೆ ಬಸ್ ನಿಲ್ದಾಣ, ಕೋರಮಂಗಲ್ ಹೋಂಡಾ ಶೋರೂಂ, ಬಾಣಸವಾಡಿ ಭೀಮಾ ಜ್ಯುವೆಲರ್ಸ್, ಕ್ರೋಮ್ ಶೋರೂಂ, ಅರಣ್ಯ ಕಚೇರಿ ಹತ್ತಿರ, ಭಟ್ಟರಹಳ್ಳಿ ಜಂಕ್ಷನ್, ಬಿ.ನಾರಾಯಣಪುರ ಬಸ್ ನಿಲ್ದಾಣ, ರಾಮಮೂರ್ತಿನಗರ ಎಎಸ್‌ಆರ್‌ ಕಲ್ಯಾಣ ಮಂಟಪ, ಕೆ.ಆರ್.ಪುರ ಸೇತುವೆ, ಇಬ್ಬಲೂರು ಜಂಕ್ಷನ್, ವೀರಸಂದ್ರ ಜಂಕ್ಷನ್, ಸಿಂಗಸಂದ್ರ ಬಸ್ ನಿಲ್ದಾಣ.

25 ವ್ಯಾಪಾರಿಗಳ ವಿರುದ್ಧ ಪ್ರಕರಣ

ವಾಣಿಜ್ಯ ಪ್ರದೇಶ, ಶಾಲಾ ವಲಯ ಹಾಗೂ ದೇವಸ್ಥಾನಗಳಿರುವ ಪ್ರದೇಶಗಳಲ್ಲಿ ಫುಟ್‌ಪಾತ್‌ನ ಬಹುತೇಕ ಪ್ರದೇಶವನ್ನು ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಅವುಗಳ ತೆರವಿಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.’ಮಲ್ಲೇಶ್ವರ, ಗಾಂಧಿನಗರ ಸೇರಿ ಹಲವೆಡೆ ಫುಟ್‌ಪಾತ್ ತೆರವು ಮಾಡಲಾಗಿದೆ. ಫುಟ್‌ಪಾತ್‌ ಮೇಲೆ ತ್ಯಾಜ್ಯವನ್ನು ಎಸೆದು ಹೋಗುವುದನ್ನು ನಿಷೇಧಿಸಲಾಗಿದೆ. ಅಷ್ಟಾದರೂ ಕಸವನ್ನು ಎಸೆದಿದ್ದ 25 ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹರಿಶೇಖರನ್ ಹೇಳಿದರು.

‘ಮಲ್ಲೇಶ್ವರದ ಸಂಪಿಗೆ ರಸ್ತೆಯ ಫುಟ್‌ಪಾತ್‌ನಲ್ಲಿ ವ್ಯಾಪಾರಿಗಳೇ ತುಂಬಿರುತ್ತಿದ್ದರು. ಈಗ ಎಲ್ಲರನ್ನೂ ತೆರವು ಮಾಡಲಾಗಿದೆ. ಮಲ್ಲೇಶ್ವರದ 13ನೇ ಅಡ್ಡರಸ್ತೆಯಲ್ಲಿ ಸಂಜೆ 4ರಿಂದ 5 ಗಂಟೆವರೆಗೆ ಶಾಲಾ ಮಕ್ಕಳ ಸಂಖ್ಯೆ ಹೆಚ್ಚಿರುತ್ತದೆ. ಅವರು ರಸ್ತೆ ದಾಟಲು ಕಷ್ಟಪಡುತ್ತಿರುವುದು ಗಮನಕ್ಕೆ ಬಂದಿದ್ದು, ಅವರಿಗೆ ದಾರಿ ಮಾಡಿಕೊಡಲು ಸಹಾಯಕ ಸಬ್‌ ಇನ್‌ಸ್ಪೆಕ್ಟರೊಬ್ಬರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.