ADVERTISEMENT

ಬಿಪಿಎಲ್‌ ಕಾರ್ಡ್‌: 1.50 ಲಕ್ಷ ಹೊಸ ಅರ್ಜಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 18:57 IST
Last Updated 23 ಆಗಸ್ಟ್ 2022, 18:57 IST

ಬೆಂಗಳೂರು: ‘ರಾಜ್ಯದಲ್ಲಿ ಹೊಸದಾಗಿ 1.50 ಲಕ್ಷ ಮಂದಿ ಬಿಪಿಎಲ್‌ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಒಪ್ಪಿಗೆ ಪಡೆಯಲು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ಸಿಕ್ಕಿದ ತಕ್ಷಣವೇ ಪಡಿತರ ಚೀಟಿ ವಿತರಿಸಲು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಆಹಾರ ಸಚಿವ ಉಮೇಶ ಕತ್ತಿ ತಿಳಿಸಿದರು.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಹೊಸದಾಗಿ ಪಡಿತರ ಕಾರ್ಡ್‌ ನೀಡುವ ಸಂಬಂಧ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ’ ಎಂದು ಹೇಳಿದರು.

ಯಾರಿಗೆ ಅರ್ಹತೆ ಇಲ್ಲವೋ ಅವರ ಬಳಿ ಇದ್ದ ಬಿಪಿಎಲ್‌ ಕಾರ್ಡ್‌ಗಳನ್ನು ಪತ್ತೆ ಮಾಡಿ ಒಟ್ಟು 3.20 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡಿದ್ದೇವೆ. ಈಗ 4.1 ಕೋಟಿ ಬಿಪಿಎಲ್‌ ಕಾರ್ಡುದಾರರಿಗೆ ತಲಾ 12 ಕೆ.ಜಿ ಅಕ್ಕಿ, ಜೋಳ ಅಥವಾ ರಾಗಿಯನ್ನು ನೀಡಲಾಗುತ್ತಿದೆ. ಕೋವಿಡ್‌ ವೇಳೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ‘ಗರೀಬ್‌ ಕಲ್ಯಾಣ್’ ಯೋಜನೆ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳುತ್ತದೆ. ಆ ಬಳಿಕ ರಾಜ್ಯ ಸರ್ಕಾರದಿಂದ ಈ ಹಿಂದೆ ನೀಡುತ್ತಿದ್ದ ಪ್ರಮಾಣದಷ್ಟೇ ಅಕ್ಕಿ, ಜೋಳ ಅಥವಾ ರಾಗಿ ವಿತರಿಸಲಾಗುವುದು ಎಂದರು.

ADVERTISEMENT

ಗರೀಬ್‌ ಕಲ್ಯಾಣ್‌ ಯೋಜನೆ ನಿಲ್ಲಿಸಿದ ನಂತರ ಮುಂದೆ ಏನು ಮಾಡ ಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುತ್ತದೆ. ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಮಾರ್ಚ್‌ನಲ್ಲೇ ಕೊನೆಗೊಳ್ಳಬೇಕಿದ್ದ ಈ ಯೋಜನೆಯು ಆಹಾರ ಧಾನ್ಯಗಳ ಸಂಗ್ರಹ ದಾಸ್ತಾನು ಸಾಕಷ್ಟು ಇದ್ದ ಕಾರಣ ಸೆಪ್ಟೆಂಬರ್‌ವರೆಗೆ ವಿಸ್ತರಿಸಲಾಗಿತ್ತು ಎಂದರು.

ಸರ್ಕಾರದ ವಿವಿಧ ಯೋಜನೆಗಳು ನೇರ ನಗದು ವರ್ಗಾವಣೆ ವ್ಯವಸ್ಥೆಗೆ ಬರುತ್ತಿದ್ದು, ಆಹಾರ ಇಲಾಖೆಯಲ್ಲೂ ಈ ವ್ಯವಸ್ಥೆ ಜಾರಿಗೆ ಬರಲಿದೆಯೇ ಎಂಬ ಪ್ರಶ್ನೆಗೆ, ‘ಕೆಲವು ರಾಜ್ಯಗಳಲ್ಲಿ ಈ ವ್ಯವಸ್ಥೆ ಯಶಸ್ವಿಯಾಗಿಲ್ಲ. ನಮ್ಮಲ್ಲಿ ಆ ರೀತಿಯ ಚಿಂತನೆ ಇಲ್ಲ. ಕೇಂದ್ರ ಸರ್ಕಾರ ಸೂಚನೆ ಕೊಟ್ಟರೆ ಪರಿಶೀಲನೆ ನಡೆಸುತ್ತೇವೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.