ಬೆಂಗಳೂರು: ಸಣ್ಣ ಕೈಗಾರಿಕೋದ್ಯಮಿಗಳು ಯಾವತ್ತೂ ಪಲಾಯನ ಮಾಡುವವರಲ್ಲ. ದೊಡ್ಡ ಉದ್ಯಮಿಗಳೇ ದೇಶಬಿಟ್ಟು ಓಡಿದವರು ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮವು (ಎನ್‌ಎಸ್‌ಐಸಿ) ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಸಹಯೋಗದಲ್ಲಿ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಎಂಎಸ್‌ಎಂಇ ಮಾರುಕಟ್ಟೆ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಜಿಡಿಪಿಗೆ ಎಂಎಸ್‌ಎಂಇ ಕೊಡುಗೆ ಶೇ 40ರಷ್ಟಿದೆ. ಒಟ್ಟು ರಫ್ತಿನಲ್ಲಿ ಎಂಎಸ್‌ಎಂಇ ಪಾಲು ಕೂಡ ಶೇ 40ರಷ್ಟಾಗಿದೆ. ಒಟ್ಟು ಉತ್ಪಾದನೆಯಲ್ಲಿ ಶೇ 45ರಷ್ಟು ಈ ಕ್ಷೇತ್ರದಿಂದ ಬರುತ್ತಿದೆ. 2047ರ ಹೊತ್ತಿಗೆ ವಿಕಸಿತ ಭಾರತವಾಗಲು ಸಣ್ಣ ಉದ್ಯಮಿಗಳ ಪಾತ್ರ ದೊಡ್ಡದಿದೆ ಎಂದು ಹೇಳಿದರು.
ಕೃಷಿ, ಆಹಾರ ಸಂಸ್ಕರಣೆ, ಉತ್ಪಾದನೆ, ಡಿಜಿಟಲ್ ಮತ್ತು ಕೃತಕ ಬುದ್ಧಿಮತ್ತೆಯಂಥ ತಂತ್ರಜ್ಞಾನಗಳಲ್ಲಿ ಮುಂದುವರಿದಾಗ ದೇಶವೂ ಮುಂದುವರಿಯುತ್ತದೆ. ರೈತರ ಆದಾಯವನ್ನು ಹೆಚ್ಚಿಸಲು ಮೌಲ್ಯವರ್ಧನೆ ಮತ್ತು ಆಹಾರ ಸಂಸ್ಕರಣೆಯತ್ತಲೂ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ನಾವು ಯಾವುದೇ ಉತ್ಪಾದನೆಗಳನ್ನು ಮಾಡಿದರೂ ಅವು ರಫ್ತು ಮಾಡುವಷ್ಟು ಗುಣಮಟ್ಟವನ್ನು ಹೊಂದಿರಬೇಕು. ಬೇರೆ ದೇಶಗಳಿಗೆ ಕಳುಹಿಸುವ ಪದಾರ್ಥಗಳಷ್ಟೇ ಆ ಗುಣಮಟ್ಟ ಹೊಂದುವುದಲ್ಲ. ನಮ್ಮ ದೇಶದ ಜನರು ಬಳಸುವ ವಸ್ತಗಳ ಗುಣಮಟ್ಟವೂ ಅದೇ ರೀತಿ ಇರಬೇಕು. ಆದರೆ, ಆಹಾರ ಸಹಿತ ಎಲ್ಲ ಪರೀಕ್ಷೆಗಳು ರಫ್ತಿಗಷ್ಟೇ ಸೀಮಿತವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಆಧುನಿಕ ತಂತ್ರಜ್ಞಾನಗಳೊಂದಿಗೆ ಜಗತ್ತು ವೇಗವಾಗಿ ಬದಲಾಗುತ್ತಿದೆ. ಆದಕ್ಕೆ ಸರಿಯಾಗಿ ನಮ್ಮ ಎಂಎಸ್‌ಎಂಇಗಳಿರಬೇಕು. ಬ್ಯಾಂಕ್‌ಗಳಿಂದ ಇನ್ನಷ್ಟು ಹಣಕಾಸಿನ ಬೆಂಬಲ ಸಿಗಬೇಕು. ಭಾರತದಲ್ಲಿ ಕಾರ್ಮಿಕರ ಕೊರತೆ ಇಲ್ಲದೇ ಇದ್ದರೂ ಕೌಶಲಪೂರ್ಣ ಕಾರ್ಮಿಕರ ಕೊರತೆಯೇ ದೊಡ್ಡ ಸವಾಲಾಗಿದೆ. ದೇಶಿಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಹುಡುಕಿಕೊಳ್ಳುವುದು ಮತ್ತೊಂದು ಸವಾಲು. ಇವುಗಳನ್ನು ಮೀರಿ ಎಂಎಸ್‌ಎಂಇಗಳು ಬೆಳೆಯಬೇಕು ಎಂದರು.
ಎಂಎಸ್‌ಎಂಇ ಸಚಿವಾಲಯದ ಜಂಟಿ ಕಾರ್ಯದರ್ಶಿ ಅತೀಶ್ ಕುಮಾರ್ ಸಿಂಗ್, ಎನ್‌ಎಸ್‌ಐಸಿ ವ್ಯವಸ್ಥಾಪಕ ನಿರ್ದೇಶಕ ಸುಭ್ರಂಶು ಶೇಖರ್ ಆಚಾರ್ಯ, ಕಾಸಿಯಾ ಉಪಾಧ್ಯಕ್ಷ ನಿಂಗಣ್ಣ ಎಸ್. ಬಿರಾದಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.