ಹೈಕೋರ್ಟ್
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಜಾರಿ ಮಾಡಿದ್ದ ಸಮನ್ಸ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಪಾರ್ವತಿ ಮತ್ತು ಸುರೇಶ್ ಸಲ್ಲಿಸಿರುವ ಅರ್ಜಿಗಳನ್ನು ಸೋಮವಾರ ತುರ್ತು ವಿಚಾರಣೆಗೆ ತೆಗೆದುಕೊಂಡ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ಧ ಏಕಸದಸ್ಯ ಪೀಠವು, ಇಬ್ಬರೂ ಅರ್ಜಿದಾರರಿಗೆ ಇ.ಡಿ. ಅಧಿಕಾರಿಗಳು ನೀಡಿರುವ ಸಮನ್ಸ್‌ಗಳಿಗೆ ಫೆಬ್ರುವರಿ 10ರವರೆಗೂ ತಡೆ ನೀಡಿತು.
ಪಾರ್ವತಿ ಅವರಿಗೆ ಜನವರಿ 3ರಂದು ಮೊದಲ ಸಮನ್ಸ್ ಜಾರಿ ಮಾಡಿದ್ದ ಇ.ಡಿ. ಅಧಿಕಾರಿಗಳು, ಜ.9ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ, ದಾಖಲೆ ಹೊಂದಿಸಿಕೊಳ್ಳಲು ಎರಡು ವಾರ ಕಾಲಾವಕಾಶ ನೀಡುವಂತೆ ಕೋರಿ ಮುಖ್ಯಮಂತ್ರಿಯವರ ಪತ್ನಿ ತನಿಖಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಜ.24ರಂದು ಎರಡನೇ ಬಾರಿ ಸಮನ್ಸ್ ಜಾರಿಮಾಡಿದ್ದು, ಮಂಗಳವಾರ (ಜ.28) ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.
‘ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನುಡಿಯಲು ಹಾಗೂ ದಾಖಲೆಗಳನ್ನು ಸಲ್ಲಿಸಲು ಶಾಂತಿನಗರದಲ್ಲಿರುವ ಇ.ಡಿ. ವಲಯ ಕಚೇರಿಗೆ ಖುದ್ದಾಗಿ ಹಾಜರಾಗಬೇಕು’ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಇ.ಡಿ. ಬೆಂಗಳೂರು ವಲಯ ಕಚೇರಿಯ ಸಹಾಯಕ ನಿರ್ದೇಶಕ ವಿ. ಮುರಳಿಕಣ್ಣನ್ ಅವರು ಸಮನ್ಸ್‌ನಲ್ಲಿ ನಿರ್ದೇಶನ ನೀಡಿದ್ದರು.
ಸಚಿವ ಬೈರತಿ ಸುರೇಶ್ ಅವರಿಗೆ ಜ.22ರಂದು ಸಮನ್ಸ್ ಜಾರಿಮಾಡಿದ್ದ ಇ.ಡಿ. ಸಹಾಯಕ ನಿರ್ದೇಶಕರು, ಸೋಮವಾರ (ಜ.27) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಜ.24ರಂದು ಇ.ಡಿ. ಅಧಿಕಾರಿಗಳಿಗೆ ಪತ್ರ ಬರೆದಿದ್ದ ಸುರೇಶ್, ‘ಫೆಬ್ರುವರಿ 6ರಿಂದ 9ರವರೆಗೆ ನನ್ನ ಮಗನ ಮದುವೆ ಇದೆ. ಈ ಕಾರಣದಿಂದ ವಿಚಾರಣೆಗೆ ಹಾಜರಾಗಲು ಫೆಬ್ರುವರಿ 10ರವರೆಗೂ ಕಾಲಾವಕಾಶ ನೀಡಬೇಕು’ ಎಂದು ಮನವಿ ಮಾಡಿದ್ದರು.
ಪಾರ್ವತಿ ಅವರಿಗೆ ಮುಡಾದಿಂದ 14 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿರುವುದರಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಖಾಸಗಿ ದೂರಿನ ಆಧಾರದಲ್ಲಿ ಲೋಕಾಯುಕ್ತ ಪೊಲೀಸ್ ವಿಭಾಗದ ಮೈಸೂರು ಜಿಲ್ಲಾ ಘಟಕ 2024ರ ಸೆಪ್ಟೆಂಬರ್ 28ರಂದು ಎಫ್‌ಐಆರ್ ದಾಖಲಿಸಿ, ತನಿಖೆ ಆರಂಭಿಸಿತ್ತು. ಲೋಕಾಯುಕ್ತ ಪೊಲೀಸರ ಎಫ್‌ಐಆರ್ ಆಧಾರದಲ್ಲಿ ಪಿಎಂಎಲ್‌ಎ ಅಡಿಯಲ್ಲಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಪ್ರಕರಣ (ಇಸಿಐಆರ್) ದಾಖಲಿಸಿದ್ದ ಇ.ಡಿ. ಅಧಿಕಾರಿಗಳು, ತನಿಖೆ ಕೈಗೊಂಡಿದ್ದರು.
ಅಕ್ಟೋಬರ್‌ನಲ್ಲಿ ಮುಡಾ ಕಚೇರಿ, ಪ್ರಕರಣದಲ್ಲಿ ನೇರ ಸಂಬಂಧಿಸಿರುವ ಕೆಲವು ವ್ಯಕ್ತಿಗಳು ಹಾಗೂ ಕೆಲವು ರಿಯಲ್ ಎಸ್ಟೇಟ್ ಉದ್ಯಮಿಗಳ ಮನೆಗಳ ಮೇಲೆ ದಾಳಿಮಾಡಿದ್ದ ಇ.ಡಿ. ಅಧಿಕಾರಿಗಳು, ಶೋಧ ನಡೆಸಿದ್ದರು. ಈ ಪ್ರಕರಣದಲ್ಲಿ ₹300 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಜ.17ರಂದು ಇ.ಡಿ. ಪ್ರಕಟಿಸಿತ್ತು.
ಸಿಬಿಐಗೆ ಮುಡಾ: ಕಾಯ್ದಿರಿಸಿದ ತೀರ್ಪು
‘ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಆರೋಪಕ್ಕೆ ಸಂಬಂಧಿಸಿದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಕೋರಿ ದೂರುದಾರರೂ ಆದ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೋಮವಾರ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದೆ.
ಈ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದ (ಧಾರವಾಡ) ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಸೋಮವಾರ ದಿನವಿಡೀ ವಿಚಾರಣೆ ನಡೆಸಿದರು.
ಸ್ನೇಹಮಯಿ ಕೃಷ್ಣ ಪರ ಸುಪ್ರೀಂ ಕೋರ್ಟ್‌ನ ಪದಾಂಕಿತ ಹಿರಿಯ ವಕೀಲ ಮಣಿಂದರ್ ಸಿಂಗ್, ರಾಜ್ಯ ಸರ್ಕಾರದ ಪರ ವಿಶೇಷ ವಕೀಲ ಕಪಿಲ್ ಸಿಬಲ್ ಮತ್ತು ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ಸಿ.ಎಂ ಪರ ಅಭಿಷೇಕ್ ಮನು ಸಿಂಘ್ವಿ, ಪಾರ್ವತಿಯವರ ಪರ ರವಿವರ್ಮ ಕುಮಾರ್, ಮಲ್ಲಿಕಾರ್ಜುನ್ ಪರ ಆದಿತ್ಯ ಸೋಂಧಿ, ಆರೋಪಿ ದೇವರಾಜ್ ಪರ ದುಷ್ಯಂತ ದವೆ ಸುದೀರ್ಘ ವಾದ ಮಂಡಿಸಿದರು.
ಮುಡಾ ಹಗರಣದಲ್ಲಿ ‘ಬಿ’ ರಿಪೋರ್ಟ್ ಹಾಕಿಸಿಕೊಂಡು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನದಲ್ಲಿದ್ದ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗಿದೆ. ತನಿಖಾ ಸಂಸ್ಥೆಯ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಸಿದ್ದರಾಮಯ್ಯ ಅವರ ಪತ್ನಿ ಮತ್ತು ಸಚಿವ ಬೈರತಿ ಸುರೇಶ್ ಅವರಿಗೆ ರಾಜಕೀಯ ಪಿತೂರಿಯ ಕಾರಣಕ್ಕೆ ಇ.ಡಿ ನೋಟಿಸ್ ನೀಡಿದೆ. ಒಂದು ಪ್ರಕರಣವನ್ನು ಒಂದೇ ಸಮಯದಲ್ಲಿ ಎರಡು ಸಂಸ್ಥೆಗಳು ತನಿಖೆ ನಡೆಸಲು ಸಾಧ್ಯವಿಲ್ಲಡಿ.ಕೆ. ಶಿವಕುಮಾರ್,ಉಪ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.