ಉತ್ತರಾದಿ ಮಠದಲ್ಲಿ ಸತ್ಯಾತ್ಮತೀರ್ಥ ಸ್ವಾಮೀಜಿ ಅವರು ಭಕ್ತರಿಗೆ ತಪ್ತ ಮುದ್ರಾ ಧಾರಣೆ ಮಾಡಿದರು
–ಪ್ರಜಾವಾಣಿ ಚಿತ್ರ/ ಎಂ.ಎಸ್.ಮಂಜುನಾಥ್
ಬೆಂಗಳೂರು: ಪ್ರಥಮ ಏಕಾದಶಿ ಪ್ರಯುಕ್ತ ನಗರದ ವಿವಿಧ ಮಠಗಳಲ್ಲಿ ಬುಧವಾರ ತಪ್ತ ಮುದ್ರಾ ಧಾರಣೆ ನಡೆಯಿತು.
ಬಸವನಗುಡಿಯ ಉತ್ತರಾದಿ ಮಠದಲ್ಲಿ ಸತ್ಯಾತ್ಮತೀರ್ಥ ಸ್ವಾಮೀಜಿ ಅವರಿಂದ ಭಕ್ತರು ತಪ್ತ ಮುದ್ರಾ ಧಾರಣೆ ಮಾಡಿಸಿಕೊಂಡರು. ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದಲ್ಲಿ ಮಂತ್ರಾಲಯದ ಸುಬುಧೇಂದ್ರ ಸ್ವಾಮೀಜಿ ತಪ್ತ ಮುದ್ರಾ ಧಾರಣೆ ನಡೆಸಿದರು. ಯಲಹಂಕ ಉಪನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುರಾಜ ಸೇವಾ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾವಲ್ಲಭ ಮಾಧವ ಸ್ವಾಮೀಜಿ, ರಾಘವೇಂದ್ರ ಕಾಲೊನಿಯ ಶ್ರೀಪಾದರಾಜ ಮಠದಲ್ಲಿ ಸುಜಯನಿಧಿ ತೀರ್ಥ ಸ್ವಾಮೀಜಿ ತಪ್ತ ಮುದ್ರಾ ಧಾರಣೆ ನಡೆಸಿಕೊಟ್ಟರು.
ಬಸವನಗುಡಿಯ ಗೋವರ್ಧನ ಕ್ಷೇತ್ರ, ಪೂರ್ಣಪ್ರಜ್ಞ ವಿದ್ಯಾಪೀಠ, ಮಲ್ಲೇಶ್ವರದ ಪಲಿಮಾರು ಮಠ, ಅದಮಾರು ಮಠ, ರಾಯರ ಮಠ, ಸೋಸಲೆ ಮಠ ಸೇರಿ ನಗರದ ವಿವಿಧೆಡೆ ಈ ತಪ್ತ ಮುದ್ರಾ ಧಾರಣೆ ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯಿತು.
ಮಠಗಳಲ್ಲಿ ಬೆಳಿಗ್ಗೆ 7ರಿಂದ ಪ್ರಾರಂಭವಾದ ಈ ತಪ್ತ ಮುದ್ರಾ ಧಾರಣೆ, ರಾತ್ರಿ 10 ಗಂಟೆಯವರೆಗೂ ನಡೆಯಿತು. ಮಠದ ಶಿಷ್ಯರು ಮತ್ತು ಭಕ್ತರು ಭಗವಂತನ ಚಿಹ್ನೆಗಳಾದ ಚಕ್ರ, ಶಂಖದ ಮುದ್ರೆ ಹಾಕಿಸಿಕೊಂಡರು. ಕೆಲವಡೆ ಸುದರ್ಶನ ಹೋಮ ಹಾಗೂ ಪ್ರವಚನಗಳೂ ನಡೆದವು.
ನಂಜನಗೂಡು ರಾಘವೇಂದ್ರ ಸ್ವಾಮಿ ಮಠದಲ್ಲಿ ಸುಬುಧೇಂದ್ರ ಸ್ವಾಮೀಜಿ ಅವರು ರಾಮಚಂದ್ರ ದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿ, ಸುದರ್ಶನ ಹೋಮದೊಂದಿಗೆ ಬಂಗಾರದ ತೊಟ್ಟಿಲಿನಲ್ಲಿ ದೇವರಿಗೆ ತೊಟ್ಟಿಲ ಸೇವೆಯನ್ನು ನೆರವೇರಿಸಿದರು. ಮಹಾಮಂಗಳಾರತಿಯೊಂದಿಗೆ ಪ್ರಾರ್ಥನೆಯನ್ನು ಸಲ್ಲಿಸಿದ ಅವರು, ತಾವು ‘ತಪ್ತ ಮುದ್ರಾ ಧಾರಣೆ’ಯನ್ನು ಸ್ವೀಕರಿಸಿದರು. ನಂತರ ಮಠದ ಶಿಷ್ಯರಿಗೆ ಮತ್ತು ಭಕ್ತರಿಗೆ ನಿರಂತರವಾಗಿ ತಪ್ತ ಮುದ್ರಾ ಧಾರಣೆಯನ್ನು ನೆರೆವೇರಿಸಿದರು. ಇದೇ ವೇಳೆ ಮಠದಲ್ಲಿ ಪಂಡಿತರಿಂದ ಭಾಗವತ ಪ್ರವಚನ ಮಾಲಿಕೆಯ ಉಪನ್ಯಾಸವೂ ನೆರವೇರಿತು.
ರಾಘವೇಂದ್ರ ಸ್ವಾಮಿ ಮಠದಲ್ಲಿ ಮಂತ್ರಾಲಯದ ಸುಬುಧೇಂದ್ರ ಸ್ವಾಮೀಜಿ ತಪ್ತ ಮುದ್ರಾ ಧಾರಣೆ ನಡೆಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.