ADVERTISEMENT

ಮುಳ್ಳಯ್ಯನಗಿರಿ: ಸಂರಕ್ಷಣಾ ವಲಯವಾಗಿ ಘೋಷಿಸಲು ಆದೇಶ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 19:26 IST
Last Updated 19 ಜುಲೈ 2019, 19:26 IST
   

ಬೆಂಗಳೂರು: ‘ಭದ್ರಾ ಹುಲಿ ಅಭಯಾರಣ್ಯದ ವ್ಯಾಪ್ತಿಗೆ ಒಳಪಡುವ ಚಿಕ್ಕಮಗಳೂರು ಜಿಲ್ಲೆಯ ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನ ಗಿರಿ ಶ್ರೇಣಿಯನ್ನು ಮೀಸಲು ಸಂರಕ್ಷಣಾ ವಲಯ ಎಂದು ನಾಲ್ಕು ತಿಂಗಳಲ್ಲಿ ಘೋಷಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ಚಿಕ್ಕಮಗಳೂರಿನ ‘ವೈಲ್ಡ್‌ಲೈಫ್‌ ಕನ್ಸರ್‌ವೇಷನ್‌ ಆ್ಯಕ್ಷನ್‌ ಟೀಂ‘ ಪ್ರತಿನಿಧಿ ಶ್ರೀದೇವ್‌ ಹುಲಿಕೆರೆ ಸೇರಿದಂತೆ ನಾಲ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಎಚ್‌.ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಲೇವಾರಿ ಮಾಡಿದೆ.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು, ‘ಈ ಸಂರಕ್ಷಣಾ ಪ್ರದೇಶದ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ ಹಾಗೂ ವಿಸ್ತರಣೆಯ ಕಾಮಗಾರಿ ನಡೆಸುವುದಿಲ್ಲ ಎಂದು ನ್ಯಾಯಪೀಟಕ್ಕೆ ಪ್ರಮಾಣಪತ್ರ ಸಲ್ಲಿಸಿದರು.

ADVERTISEMENT

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ‘ಸಂರಕ್ಷಣಾ ವಲಯ ಎಂದು ಘೋಷಿಸಿದ ಬಳಿಕ ಮೂರು ತಿಂಗಳ ಅವಧಿಯಲ್ಲಿ ಮೇಲ್ವಿಚಾರಣಾ ಸಮತಿ ರಚಿಸಬೇಕು ಮತ್ತು ಈ ವಲಯದಲ್ಲಿ ರಸ್ತೆ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬಾರದು’ ಎಂದು ನಿರ್ದೇಶಿಸಿತು. ಅರ್ಜಿದಾರರ ಪರ ಹಿರಿಯ ವಕೀಲೆ ಜಯ್ನಾ ಕೊಠಾರಿ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.