ADVERTISEMENT

ಸಹಕಾರಿ ಸಂಸ್ಥೆಗಳಲ್ಲಿ ಬಹುಕೋಟಿ ಹಗರಣ: ವರ್ಷವಾದರೂ ಆರಂಭವಾಗದ ಸಿಬಿಐ ತನಿಖೆ

ಆದಿತ್ಯ ಕೆ.ಎ
Published 23 ಫೆಬ್ರುವರಿ 2025, 23:12 IST
Last Updated 23 ಫೆಬ್ರುವರಿ 2025, 23:12 IST
<div class="paragraphs"><p>ನ್ಯಾಯ ಕಲ್ಪಿಸುವಂತೆ ಆಗ್ರಹಿಸಿ&nbsp;ಶ್ರೀಗುರು ರಾಘವೇಂದ್ರ ಕೋ–ಆಪರೇಟಿವ್‌ ಬ್ಯಾಂಕ್‌ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯ ಸದಸ್ಯರು ಬಸನಗುಡಿಯಲ್ಲಿ ಹಿಂದೆ ಪ್ರತಿಭಟನೆ ನಡೆಸಿದ್ದರು</p></div>

ನ್ಯಾಯ ಕಲ್ಪಿಸುವಂತೆ ಆಗ್ರಹಿಸಿ ಶ್ರೀಗುರು ರಾಘವೇಂದ್ರ ಕೋ–ಆಪರೇಟಿವ್‌ ಬ್ಯಾಂಕ್‌ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯ ಸದಸ್ಯರು ಬಸನಗುಡಿಯಲ್ಲಿ ಹಿಂದೆ ಪ್ರತಿಭಟನೆ ನಡೆಸಿದ್ದರು

   

ಸಂಗ್ರಹ ಚಿತ್ರ

ಬೆಂಗಳೂರು: ನಗರದ ಮೂರು ಸಹಕಾರಿ ಸಂಸ್ಥೆಗಳಲ್ಲಿ ನಡೆದಿದ್ದ ಬಹುಕೋಟಿ ರೂಪಾಯಿ ಮೊತ್ತದ ಹಗರಣಗಳ ತನಿಖೆಯನ್ನು ರಾಜ್ಯ ಸರ್ಕಾರವು ಸಿಬಿಐಗೆ ವಹಿಸಿ, ಒಂದು ವರ್ಷ ಎರಡು ತಿಂಗಳು ಕಳೆದಿದೆ. ಇನ್ನೂ ತನಿಖೆಯೇ ಆರಂಭವಾಗಿಲ್ಲ.

ADVERTISEMENT

‘ಸಿಬಿಐನಲ್ಲಿ ಹಲವು ಪ್ರಕರಣಗಳ ತನಿಖೆ ನಡೆಯುತ್ತಿದೆ. ಆ ಪ್ರಕರಣಗಳ ತನಿಖೆಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅಗತ್ಯವಿರುವ ಅಧಿಕಾರಿಗಳನ್ನು ನಿಯೋಜಿಸಿದರೆ ಮಾತ್ರವೇ ರಾಜ್ಯದ ಸಹಕಾರಿ ಸಂಸ್ಥೆಗಳಲ್ಲಿ ನಡೆದಿರುವ ಹಗರಣಗಳ ಕುರಿತು ತನಿಖೆ ಆರಂಭಿಸುವುದಾಗಿ ಹೇಳಿ ಸಿಬಿಐ, ರಾಜ್ಯ ಸರ್ಕಾರಕ್ಕೆ ವಾಪಸ್ ಪತ್ರ ಬರೆದಿದೆ. ಆ ಪತ್ರಕ್ಕೆ ರಾಜ್ಯ ಸರ್ಕಾರವು ಯಾವುದೇ ಪ್ರತಿಕ್ರಿಯೆ ನೀಡದ ಕಾರಣಕ್ಕೆ ತನಿಖೆ ವಿಳಂಬವಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ಬೆಂಗಳೂರಿನ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌, ಶ್ರೀಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್‌ ಕೋ–ಆಪರೇಟಿವ್ ಲಿಮಿಟೆಡ್‌, ಶ್ರೀವಸಿಷ್ಠ ಸೌಹಾರ್ದ ಸಹಕಾರ ಬ್ಯಾಂಕ್‌ಗಳಲ್ಲಿ ನಡೆದಿರುವ ದೊಡ್ಡ ಮೊತ್ತದ ಹಗರಣಗಳ ತನಿಖೆಯನ್ನು ರಾಜ್ಯ ಸರ್ಕಾರವು 2023ರ ಡಿಸೆಂಬರ್‌ 3ರಂದು ಸಿಬಿಐಗೆ ವಹಿಸಿತ್ತು. ಅಲ್ಲದೇ ಸಿರಿ ವೈಭವ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದ್ದ ಹಗರಣದ ತನಿಖೆಯನ್ನೂ ಸಿಬಿಐಗೇ ವರ್ಗಾವಣೆ ಮಾಡುವಂತೆ ಸರ್ಕಾರವು ಸೂಚಿಸಿತ್ತು. ಸಹಕಾರಿ ಸಂಸ್ಥೆಗಳ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ತನಿಖೆ ನಡೆಸಬೇಕು ಎಂದು ಆದೇಶದಲ್ಲಿ ತಿಳಿಸಿತ್ತು.

ಸರ್ಕಾರದ ಆದೇಶದಂತೆ ಕಳೆದ ವರ್ಷದ ಆರಂಭದಲ್ಲೇ ಸಿಐಡಿ ಅಧಿಕಾರಿಗಳು ಪ್ರಕರಣದ ಕಡತವನ್ನು ಸಿಬಿಐಗೆ ನೀಡಲು ಸಿದ್ದತೆ ಮಾಡಿಕೊಂಡಿದ್ದರು. ಸಿಬಿಐ ಅಧಿಕಾರಿಗಳು ಸಿಐಡಿಯಿಂದ ಯಾವುದೇ ಕಡತ ಹಾಗೂ ಮಾಹಿತಿಯನ್ನೂ ಪಡೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ನ್ಯಾಯಕ್ಕೆ ಆಗ್ರಹಿಸಿ ಹಣ ಕಳೆದುಕೊಂಡ ಠೇವಣಿದಾರರು, ಸಹಕಾರಿ ಸಂಸ್ಥೆಗಳ ಎದುರು ಪ್ರತಿಭಟನೆ ನಡೆಸಿದ್ದರು. ಅದಾದ ಮೇಲೆ ಸರ್ಕಾರ ಸಿಐಡಿಗೆ ತನಿಖೆ ಪ್ರಕರಣವನ್ನು ವಹಿಸಿತ್ತು. ಕೆಲ ತಿಂಗಳು ಸಿಐಡಿಯವರೇ ತನಿಖೆ ನಡೆಸಿದ್ದರು. ಠೇವಣಿದಾರರು ಹಾಗೂ ಷೇರುದಾರರಿಂದಲೂ ಮಾಹಿತಿ ಕಲೆಹಾಕಿದ್ದರು.

₹1,290 ಕೋಟಿ ವಂಚನೆ ಪತ್ತೆ: ‘ಮೂರು ಸಹಕಾರಿ ಸಂಸ್ಥೆಗಳಲ್ಲಿನ ಅವ್ಯವಹಾರಗಳ ಕುರಿತು ವಿವಿಧ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳನ್ನು ವರ್ಗಾವಣೆ ಮಾಡಿಕೊಂಡು ಸಿಐಡಿ ತನಿಖೆ ಆರಂಭಿಸಿತ್ತು. ತನಿಖೆ ವೇಳೆ ಮಹತ್ವದ ದಾಖಲೆಗಳು ಪತ್ತೆಯಾಗಿದ್ದವು. ₹1,290 ಕೋಟಿ ಮೊತ್ತದ ವಂಚನೆಯನ್ನು ಪತ್ತೆಹಚ್ಚಲಾಗಿತ್ತು. ಹಲವರನ್ನು ವಿಚಾರಣೆಗೂ ಒಳಪಡಿಸಲಾಗಿತ್ತು. ಅಷ್ಟರಲ್ಲಿ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು. ಹೀಗಾಗಿ ತನಿಖೆಯನ್ನು ಚುರುಕುಗೊಳಿಸಲು ಸಾಧ್ಯವಾಗಿರಲಿಲ್ಲ. ರಾಜ್ಯ ಸರ್ಕಾರದಿಂದ ಮತ್ತೆ ನಿರ್ದೇಶನ ಬಂದರೆ ತನಿಖೆಗೆ ವೇಗ ನೀಡುತ್ತೇವೆ’ ಎಂದು ಸಿಐಡಿಯ ಅಧಿಕಾರಿಯೊಬ್ಬರು ಹೇಳಿದರು.

‘ಆರು ಸಹಕಾರಿ ಸಂಸ್ಥೆಗಳಲ್ಲಿ ₹6 ಸಾವಿರ ಕೋಟಿಗೂ ಹೆಚ್ಚು ಅಕ್ರಮ ನಡೆದಿದೆ’ ಎಂದು ಶ್ರೀಗುರು ರಾಘವೇಂದ್ರ ಕೋ–ಆಪರೇಟಿವ್‌ ಬ್ಯಾಂಕ್‌ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯ ಸದಸ್ಯರು ಆಪಾದಿಸಿದ್ದರು. ‘ಸಹಕಾರ ಬ್ಯಾಂಕ್‌ಗಳ ಹಗರಣವನ್ನು ಸಿಬಿಐಗೆ ವಹಿಸಬೇಕು’ ಎಂದೂ ಆಗ್ರಹಿಸಿದರು.

ಎರಡು ಬಾರಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಸದ್ಯ ಸಿಐಡಿ ತನಿಖಾಧಿಕಾರಿಗಳೇ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
–ಎಂ.ಎ.ಸಲೀಂ, ಡಿಜಿಪಿ ಸಿಐಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.