ADVERTISEMENT

ಮುನಿರತ್ನನ ನೋಟು, ಕುಸುಮಾಗೆ ಓಟು: ಡಿಕೆಶಿ

ಆರ್‌.ಆರ್‌. ನಗರ: ಪ್ರಚಾರ ಸಭೆ, ರೋಡ್‌ ಷೋದಲ್ಲಿ ಡಿ.ಕೆ.ಶಿವಕುಮಾರ್‌ ಓಲೈಕೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 22:24 IST
Last Updated 24 ಅಕ್ಟೋಬರ್ 2020, 22:24 IST
ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕುಸುಮಾ ಪರ ಡಿ.ಕೆ. ಶಿವಕುಮಾರ್‌ ಶನಿವಾರ ರೋಡ್ ಷೋ ನಡೆಸಿದರು.
ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕುಸುಮಾ ಪರ ಡಿ.ಕೆ. ಶಿವಕುಮಾರ್‌ ಶನಿವಾರ ರೋಡ್ ಷೋ ನಡೆಸಿದರು.   

ಬೆಂಗಳೂರು: ಆರ್‌.ಆರ್‌. ನಗರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕುಸುಮಾ ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಶನಿವಾರ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು ಅಲ್ಲದೆ, ರೋಡ್‌ ಷೋದಲ್ಲೂ ಭಾಗವಹಿಸಿ, ‘ಮುನಿರತ್ನನ ನೋಟು ಪಡೆದು, ಕುಸುಮಾಗೆ ಓಟು ನೀಡಿ’ ಎಂದು ಮತದಾರರ ಓಲೈಕೆಗೆ ಯತ್ನಿಸಿದರು.

ವಿವಿಧ ವಾರ್ಡ್‌ಗಳಲ್ಲಿ ಪ್ರಚಾರ ಸಭೆಗಳಲ್ಲಿ ಮಾತನಾಡಿದ ಶಿವಕುಮಾರ್, ‘ಜಾತಿಯನ್ನು ಒಡೆದು ರಾಜಕೀಯ ಮಾಡುವ ಅಗತ್ಯ ನಮಗಿಲ್ಲ. ಬಿಜೆಪಿಯಿಂದ ಕಣಕ್ಕಿಳಿದಿರುವ ಅಭ್ಯರ್ಥಿ, ತನ್ನನ್ನು ಬೆಳೆಸಿದ ಪಕ್ಷಕ್ಕೆ ಮೋಸ ಮಾಡಿದ್ದು, ಹೆತ್ತ ತಾಯಿಗೆ ದ್ರೋಹ ಬಗೆದಿದ್ದಾರೆ. ಇದಕ್ಕೆ ಜನ ತಕ್ಕ ಉತ್ತರ ನೀಡಲಿದ್ದಾರೆ' ಎಂದರು.

‘ಚುನಾವಣೆ ಬಳಿಕ ಯಡಿಯೂರಪ್ಪನವರನ್ನು ಕೆಳಗಿಳಿಸುತ್ತಾರಂತೆ. ಯಡಿಯೂರಪ್ಪನವರು ಹೋದರೆ ಮುನಿರತ್ನ ಕಥೆ ಗೋವಿಂದ' ಎಂದೂ ವ್ಯಂಗ್ಯವಾಡಿದರು.

ADVERTISEMENT

‘ಕಷ್ಟಪಟ್ಟು ಪಕ್ಷ ಕಟ್ಟಿದ ಬಿಜೆಪಿ ಕಾರ್ಯಕರ್ತರು, ನಾಯಕರಿಗೆ ಅಧಿಕಾರ ಇಲ್ಲ. ತಮ್ಮ ಮಾತೃಪಕ್ಷಕ್ಕೆ ದ್ರೋಹ ಬಗೆದವರಿಗೆ ಯಡಿಯೂರಪ್ಪನವರು ಅಧಿಕಾರ ನೀಡಿದ್ದಾರೆ. ಕಳೆದೊಂದು ವರ್ಷದಿಂದ ಈ ಬಿಜೆಪಿ ಅಭ್ಯರ್ಥಿಯನ್ನು ಮನೆಯಲ್ಲಿ ಕೂರಿಸಿದ್ದರು. ಹೀಗಾಗಿ, ಜನರ ಆಕ್ರೋಶಕ್ಕೆ ಹೆದರಿ ಯಡಿಯೂರಪ್ಪನವರು ಮತ್ತು ಬಿಜೆಪಿ ನಾಯಕರು ಇಲ್ಲಿ ಪ್ರಚಾರಕ್ಕೆ ಬಂದಿಲ್ಲ’ ಎಂದರು.

‘ಹಣ ಹಾಗೂ ಅಧಿಕಾರದ ಆಸೆಗೆ ಬಿದ್ದು ಮುನಿರತ್ನ, ಮತದಾರರು ಮತ್ತು ತಮ್ಮನ್ನು ಬೆಳೆಸಿದ ಪಕ್ಷಕ್ಕೆ ಮೋಸ ಮಾಡಿದ್ದಾರೆ. ಇಲ್ಲಿನ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಅವರ ವಿರುದ್ಧ ನಾವು ಹೋರಾಡುತ್ತೇವೆ’ ಎಂದರು.

‘ಕಳೆದ ಚುನಾವಣೆಯಲ್ಲಿ ನಿಮ್ಮ ಹಾಗೂ ನಮ್ಮ ಶ್ರಮವನ್ನು ಮುನಿರತ್ನ ₹ 50 ಕೋಟಿಗೆ ಮಾರಿಕೊಂಡಿದ್ದಾರೆ. ಈ
ಚುನಾವಣೆಗೆ ₹ 25 ಕೋಟಿ ಕೊಟ್ಟಿದ್ದಾರಂತೆ. ಅವರು ದುಡ್ಡು ಕೊಟ್ಟರೆ ಯಾರೊಬ್ಬರೂ ಬೇಡ ಎಂದು ಹೇಳಬೇಡಿ. ಬಿಜೆಪಿಯ ನೋಟು ಪಡೆದುಕೊಂಡು ಕಾಂಗ್ರೆಸ್‌ಗೆ ಓಟು ಕೊಡಿ’ ಎಂದು ಮತದಾರರಲ್ಲಿ ಮನವಿ ಮಾಡಿದರು.

‘ನಾನು ನಿಮ್ಮ ಮನೆ ಮಗಳು’

‘ನಾನು ನಿಮ್ಮ ಮನೆಮಗಳು. ನಿಮ್ಮ ಸೇವೆ ಮಾಡಲು ನನಗೆ ಒಂದು ಅವಕಾಶ ಮಾಡಿ ಕೊಡಿ. ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗಿರುತ್ತೇನೆ. ನೀವು ಕೊಡುವ ಅವಕಾಶ ಬಳಸಿಕೊಂಡು ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ ಕೆಲಸ ಮಾಡಿ ನಿಮ್ಮ ನಂಬಿಕೆ ಉಳಿಸಿಕೊಳ್ಳುತ್ತೇನೆ. ನೀವು ಕೊಡುವ ಅವಕಾಶ ಪ್ರೋತ್ಸಾಹವನ್ನು ಹಣ ಅಥವಾ ಅಧಿಕಾರದ ಆಸೆಗೆ ಮಾರಿಕೊಳ್ಳುವುದಿಲ್ಲ’ ಎಂದು ಭಾವನಾತ್ಮಕವಾಗಿ ಕುಸುಮಾ ಮನವಿ ಮಾಡಿದರು.

ಠಾಣೆ ಇನ್‌ಸ್ಪೆಕ್ಟರ್ ವರ್ಗಾವಣೆ

ರಾಜರಾಜೇಶ್ವರಿನಗರ ಠಾಣೆ ಇನ್‌ಸ್ಪೆಕ್ಟರ್ ವಿ. ನವೀನ್ ಸುಪೇಕರ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ಆರ್.ಪಿ. ಅನಿಲ್ ಅವರನ್ನು ನೇಮಿಸಲಾಗಿದೆ.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಇತ್ತೀಚೆಗಷ್ಟೇ ನಾಮಪತ್ರ ಸಲ್ಲಿಸುವ ವೇಳೆ ನಿಯಮ ಉಲ್ಲಂಘಿಸಿದ್ದ ಆರೋಪದಡಿ ಕಾಂಗ್ರೆಸ್ ‍ಪಕ್ಷದ ಅಭ್ಯರ್ಥಿ ಕುಸುಮಾ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ನವೀನ್ ಅವರೇ ತನಿಖಾಧಿಕಾರಿ ಆಗಿದ್ದರು. ಪ್ರಕರಣದ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಅವರನ್ನು ರಾಜ್ಯ ಗುಪ್ತದಳಕ್ಕೆ ವರ್ಗಾಯಿಸಲಾಗಿದೆ.

ಇನ್‌ಸ್ಪೆಕ್ಟರ್ ವರ್ಗಾವಣೆಗೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.