ADVERTISEMENT

ಮಹಿಳಾ ಉದ್ಯೋಗಿ ಹತ್ಯೆ; ನಿವೇಶನ ವಿಚಾರಕ್ಕೆ ಭಾವನಿಂದಲೇ ಕೃತ್ಯ ಶಂಕೆ

ನಿವೇಶನ ವಿಚಾರಕ್ಕೆ ಭಾವನಿಂದಲೇ ಕೃತ್ಯ ಶಂಕೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 19:51 IST
Last Updated 16 ಫೆಬ್ರುವರಿ 2019, 19:51 IST
ಅನುಷಾ
ಅನುಷಾ   

ಬೆಂಗಳೂರು: ಕೆಂಗೇರಿಯಲ್ಲಿ ಬಿಎಚ್‌ಇಎಲ್ ಉದ್ಯೋಗಿ ಅನುಷಾ (32) ಎಂಬುವರ ಮನೆಗೆ ನುಗ್ಗಿದ ಹಂತಕ, ವೇಲ್‌ನಿಂದ ಕುತ್ತಿಗೆ ಬಿಗಿದು ಅವರನ್ನು ಶುಕ್ರವಾರ ರಾತ್ರಿ ಕೊಲೆ ಮಾಡಿದ್ದಾನೆ.

ಅನುಷಾ, ಪತಿ ಸನತ್ ಜತೆ ಕೆಂಗೇರಿಯ ‘ಸನ್‌ಸಿಟಿ’ ಕಟ್ಟಡದ 3ನೇ ಮಹಡಿಯಲ್ಲಿ ನೆಲೆಸಿದ್ದರು. ಅದೇ ಕಟ್ಟಡದ ನೆಲಮಹಡಿಯಲ್ಲಿ ಅನುಷಾ ಅಕ್ಕ ನೇತ್ರಾವತಿ ಅವರ ಕುಟುಂಬವಿದೆ. ಕೃತ್ಯದ ಬಳಿಕ ಅನುಷಾ ‌ಭಾವ ವಿವೇಕ್ ಪ್ರಕಾಶ್ (ನೇತ್ರಾವತಿ ಗಂಡ) ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.

‘ನಿವೇಶನದ ವಿಚಾರಕ್ಕೆ ವಿವೇಕ್ ಜತೆ ಮನಸ್ತಾಪವಾಗಿತ್ತು. ಆ ದ್ವೇಷದಲ್ಲಿ ಆತನೇ ಪತ್ನಿಯನ್ನು ಕೊಂದಿರಬಹುದು’ ಎಂದು ಸನತ್ ದೂರು ಕೊಟ್ಟಿದ್ದು, ಪೊಲೀಸರು ಅವರ ಪತ್ತೆಗೆ ಬಲೆ ಬೀಸಿದ್ದಾರೆ.

ADVERTISEMENT

ವಾಸ್ತವ್ಯ ಬದಲು:ಅನುಷಾ ಬಿಎಚ್‌ಇಎಲ್‌ನಲ್ಲಿ ಸಿಸ್ಟಮ್ ಆಪರೇಟರ್ ಆಗಿದ್ದರು. ಸನತ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊದಲು ಜ್ಞಾನಭಾರತಿಯಲ್ಲಿ ನೆಲೆಸಿದ್ದ ದಂಪತಿ, 20 ದಿನಗಳ ಹಿಂದಷ್ಟೇ ವಾಸ್ತವ್ಯವನ್ನು ‘ಸನ್‌ಸಿಟಿ’ ಕಟ್ಟಡಕ್ಕೆ ಬದಲಾಯಿಸಿದ್ದರು.

ಬಿಡದಿಯಲ್ಲಿರುವ ತಮ್ಮ ನಿವೇಶನವನ್ನು ಮಾರಾಟ ಮಾಡಲು ನಿರ್ಧರಿಸಿದ್ದ ದಂಪತಿ, ಈ ವಿಚಾರವಾಗಿ ಕೆಲ ರಿಯಲ್ ಎಸ್ಟೇಟ್ ಏಜೆಂಟ್‌ಗಳನ್ನು ಸಂಪರ್ಕಿಸಿದ್ದರು. ಆಗ ವಿವೇಕ್, ‘ಸೈಟನ್ನು ಯಾರಿಗೂ ಮಾರಬೇಡಿ. ಹಣ ಹೊಂದಿಸಿಕೊಂಡು ನಾನೇ ಖರೀದಿಸುತ್ತೇನೆ’ ಎಂದಿದ್ದರು.

ಅದಕ್ಕೆ ಒಪ್ಪಿದ್ದ ಅನುಷಾ, ನಿವೇಶನಕ್ಕೆ ₹13 ಲಕ್ಷ ನಿಗದಿ ಮಾಡಿದ್ದರು. ಆದರೆ, ವಿವೇಕ್ ₹8 ಲಕ್ಷ ಕೊಡುವುದಾಗಿ ಹೇಳಿದ್ದರು. ಈ ಸಂಬಂಧ ಹಲವು ಬಾರಿ ಮಾತುಕತೆಗಳೂ ನಡೆದಿದ್ದವು.

‘ಅಷ್ಟು ಕಡಿಮೆ ಬೆಲೆಗೆ ನಿವೇಶನ ಕೊಡುವುದಿಲ್ಲ’ ಎಂದು ಹೇಳಿದ್ದ ಅನುಷಾ, ಪುನಃ ರಿಯಲ್ ಎಸ್ಟೇಟ್ ಏಜೆಂಟ್‌ಗಳ ಮೊರೆ ಹೋಗಿದ್ದರು. ಈ ನಡೆ ಭಾವನ ಸಿಟ್ಟಿಗೆ ಕಾರಣವಾಗಿತ್ತು ಎನ್ನಲಾಗಿದೆ.

ನೇತ್ರಾವತಿ 15 ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಆಗಿನಿಂದ ಕೆಲಸಕ್ಕೆ ಹೋಗದೆ ಪತ್ನಿಯನ್ನು ನೋಡಿಕೊಂಡು ಮನೆಯಲ್ಲೇ ಇದ್ದ ವಿವೇಕ್,‘ಸ್ವಲ್ಪ ಕೆಲಸ ಇದೆ. ಬೇಗ ಬರುತ್ತೇನೆ’ ಎಂದು ಪತ್ನಿಗೆ ಹೇಳಿ ರಾತ್ರಿ 7 ಗಂಟೆ ಸುಮಾರಿಗೆ ಮನೆಯಿಂದ ಹೊರ ಹೋಗಿದ್ದರು. 7.15ರ ನಂತರ ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಕೆಲಸಕ್ಕೆ ಹೋಗಿದ್ದ ಸನತ್, 8.30ರ ಸುಮಾರಿಗೆ ಪತ್ನಿಗೆ ನಾಲ್ಕೈದು ಬಾರಿ ಕರೆ ಮಾಡಿದ್ದಾರೆ.

ಪ್ರತಿಕ್ರಿಯೆ ಸಿಗದಿದ್ದಾಗ ನೇತ್ರಾವತಿ ಅವರನ್ನು ಸಂಪರ್ಕಿಸಿದ್ದಾರೆ. ಅವರು ಮನೆಗೆ ಹೋಗಿ ನೋಡಿದಾಗ ‍ಪ್ರಕರಣ ಬೆಳಕಿಗೆ ಬಂದಿದೆ.

‘ಎಫ್‌ಎಸ್‌ಎಲ್ ತಜ್ಞರು ಹಾಗೂ ಶ್ವಾನದಳ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ವಿವೇಕ್ ಅವರೇ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಖಚಿತವಾಗಿದೆ. ಹಂತಕನ ಪತ್ತೆಗೆ ಕೆಂಗೇರಿ ಉಪನಗರದ ಎಸಿಪಿ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.