
ಪ್ರಜಾವಾಣಿ ವಾರ್ತೆ
ಬೆಂಗಳೂರು: ಕೊಲೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ ಚೇತನ್ (24) ಎಂಬುವವರನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಹೊಸಕೋಟೆಯ ಚೇತನ್ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈತನ ಬಂಧನಕ್ಕೆ ಜಾಮೀನು ರಹಿತ ವಾರಂಟ್ ಸಹ ಜಾರಿಯಾಗಿತ್ತು’ ಎಂದು ಪೊಲೀಸರು ಹೇಳಿದರು.
‘ಅಪರಾಧ ಹಿನ್ನೆಲೆಯುಳ್ಳವರ ಪತ್ತೆಗಾಗಿ ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ನಗರದ ಬಾರ್‌ಗಳಿಗೆ ತೆರಳಿ, ಉಪಕರಣ ಸಹಾಯದಿಂದ ಅಲ್ಲಿದ್ದವರ ಬೆರಳಚ್ಚು ಪಡೆದು ಪರಿಶೀಲಿಸಲಾಗಿತ್ತು. ಇದೇ ಸಂದರ್ಭದಲ್ಲಿ ಆರೋಪಿ ಚೇತನ್ ಬಗ್ಗೆ ಮಾಹಿತಿ ಲಭ್ಯವಾಯಿತು. ವಶಕ್ಕೆ ಪಡೆದು ವಿಚಾರಿಸಿದಾಗ, ಕೊಲೆ ಯತ್ನ ಪ್ರಕರಣದ ಆರೋಪಿ ಎಂಬುದು ತಿಳಿಯಿತು’ ಎಂದು ಪೊಲೀಸರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.